ಶನಿವಾರಸಂತೆ, ಫೆ. 7: ಶನಿವಾರಸಂತೆ ಸಮೀಪದ ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರೆಯಲ್ಲಿ ಪ್ರದರ್ಶನ ಹಾಗೂ ಮಾರಾಟವಾಗುತ್ತಿರುವ ಜಾನುವಾರುಗಳ ಸಂಖ್ಯೆ ಕಡಿಮೆಯಿದ್ದರೂ, ರಾಸುಗಳ ಬೆಲೆ ಮಾತ್ರ ಗಗನಕ್ಕೇರಿದೆ.

ಜಾತ್ರೆ ಆರಂಭವಾಗಿ 12 ದಿನಗಳಾಗಿದ್ದು, ಜಾತ್ರೆಯಲ್ಲಿ ಒಂದು ಜೋಡಿ ಎತ್ತುಗಳಿಗೆ ರೂ. 35 ಸಾವಿರದಿಂದ ರೂ. 80 ಸಾವಿರ ಬೆಲೆ ಹೇಳಲಾಗುತ್ತಿದೆ. ಜಾತ್ರೆಯಲ್ಲಿ ಹಲ್ಲುಗಳು ಮೂಡದ 2 ಹಲ್ಲು ಹಾಗೂ 4 ಹಲ್ಲು ಬಂದಿರುವ ಎತ್ತುಗಳು ಹಾಗೂ ಜರ್ಸಿ ಕ್ರಾಸ್ ಹಸುಗಳು ಹೆಚ್ಚಾಗಿ ಮಾರಾಟವಾಗುತ್ತಿವೆ. ಒಂದು ಕರುವಿರುವ ಎರಡು ಹಲ್ಲಿನ ಹಸುಗಳಿಗೆ ರೂ. 20 ಸಾವಿರದಿಂದ 30 ಸಾವಿರ ಬೆಲೆ ಹೇಳಲಾಗುತ್ತಿದೆ.

ಅರಕಲಗೂಡು ತಾಲೂಕಿನ ಮಾದನೂರು ಗ್ರಾಮದ ರೈತ ಪುಟ್ಟೇಗೌಡ ಹಾಗೂ ಸಂಬಂಧಿ ಪ್ರದೀಪ್ ಜಾತ್ರೆಯಲ್ಲಿ ಮಾರಾಟ ಹಾಗೂ ಪ್ರದರ್ಶನಕ್ಕಾಗಿ 4 ಜೊತೆ ಹೋರಿಗಳನ್ನು ತಂದಿದ್ದು, ಅದರಲ್ಲಿ ಹಲ್ಲುಗಳೇ ಮೂಡದ ಎರಡೂವರೆ ವರ್ಷದ ಹಳ್ಳಿಕಾರ್ ತಳಿಯ ಎರಡು ಜೋಡಿ ರಾಸುಗಳು ಎಲ್ಲರನ್ನೂ ಆಕರ್ಷಿಸುತ್ತಿವೆ. ಸೋಮವಾರಪೇಟೆ ತಾಲೂಕಿನ ಯಡೂರು ಗ್ರಾಮದ ರೈತ ಎ.ಕೆ. ಉಮೇಶ್ 2 ಹಲ್ಲುಗಳ 5 ಜೋಡಿ ರಾಸುಗಳನ್ನು ಮಾರಾಟಕಿಟ್ಟಿದ್ದಾರೆ.

ಮಣಿ, ಬಳೆ-ಸರಗಳ ಅಂಗಡಿ ಮಳಿಗೆಗಳು ಮಹಿಳೆಯರನ್ನು ಆಕರ್ಷಿಸುತ್ತಿವೆ. ಹೊಟೇಲ್‍ಗಳಲ್ಲಿ ವ್ಯಾಪಾರ ಭರದಿಂದ ನಡೆಯುತ್ತಿದೆ. ಕರಬೂಜ ಹಣ್ಣಿನ ಮಳಿಗೆಯೊಂದು ಜನರ ದಣಿವಾರಿಸುತ್ತಿದೆ. ಸಿಹಿತಿಂಡಿಗಳ ಮಳಿಗೆಗಳಲ್ಲಿ ವ್ಯಾಪಾರ ಸಾಗಿದೆ. ಇದರೊಂದಿಗೆ ಜೈಂಟ್‍ವೀಲ್, ಕೊಲಂಬಸ್, ಮರಣದ ಬಾವಿ, ರೈಲು, ಕಾರು ಇತ್ಯಾದಿಗಳು ಮಕ್ಕಳಿಗೆ ಮನೋರಂಜನೆ ನೀಡುತ್ತಿವೆ. ಪ್ರಮುಖವಾಗಿ ರೈತರ ಹಬ್ಬವಾದ ಜಾನುವಾರು ಜಾತ್ರೆ ಐತಿಹಾಸಿಕ ಮಹತ್ವ ಮತ್ತು ಸಾಂಸ್ಕøತಿಕ ಹಿನ್ನೆಲೆಯ ಹಬ್ಬವಾಗಿ ನಡೆಯುತ್ತಿದೆ. ಜಾತ್ರೆಗೆ ತಾ. 8 ರಂದು (ಇಂದು) ತೆರೆ ಬೀಳಲಿದೆ.