ಮಡಿಕೇರಿ, ಫೆ. 7: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ನಬಾರ್ಡ್) ಮತ್ತು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಇವರ ಸಹಯೋಗದೊಂದಿಗೆ “ಡಿಜಿಟಲ್ ಆರ್ಥಿಕ ಸಾಕ್ಷರತಾ ಜನಜಾಗೃತಿ ಕಾರ್ಯಕ್ರಮ” ಮತ್ತು ಎ.ಸಿ.ಸಿ ಸಿಮೆಂಟ್ ಮಾರಾಟ ಮಳಿಗೆ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.ಪಯಸ್ವಿನಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ನಿಯಮಿತ, ಸಂಪಾಜೆ ಇದರ ಚೆಂಬು ಶಾಖೆ ಮತ್ತು ಸಂಪಾಜೆ ಮುಖ್ಯ ಕಚೇರಿಯಲ್ಲಿ “ಡಿಜಿಟಲ್ ಆರ್ಥಿಕ ಸಾಕ್ಷರತಾ ಜನಜಾಗೃತಿ ಕಾರ್ಯಕ್ರಮ” ಮತ್ತು ಚೆಂಬು ಶಾಖೆಯಲ್ಲಿ ನೂತನವಾಗಿ ಸಿಮೆಂಟ್ ಮಾರಾಟ ವ್ಯವಸ್ಥೆಯನ್ನು ಚೆಂಬು ಗ್ರಾಮ ಪಂಚಾಯತ್ ಅಧ್ಯಕ್ಷÀ ಮಾಧವ ಪೊಯ್ಯಮಜಲು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬಾಲಚಂದ್ರ ಕಳಗಿ ಅವರು ಉಪಸ್ಥಿತರಿದ್ದು ಪ್ರಾಸ್ತಾವಿಕವಾಗಿ ಮಾತನಾಡಿ, ‘ಸಂಘದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸದಸ್ಯರಿಗೆ ಮತ್ತು ಗ್ರಾಹಕರಿಗೆ ಸ್ಪರ್ಧಾತ್ಮಕ ದರದಲ್ಲಿ ಮನೆ ನಿರ್ಮಾಣ ಸೇರಿದಂತೆ ಇನ್ನಿತರ ನಿರ್ಮಾಣ ಕಾಮಗಾರಿಗಳಿಗಾಗಿ ಸಿಮೆಂಟ್ ಒದಗಿಸುವ ಉದ್ದೇಶದಿಂದ ಸಂಘದಲ್ಲಿ ಈ ವ್ಯವಸ್ಥೆಯನ್ನು ತರಲಾಗಿದೆ ಮತ್ತು ಮುಂದಿನ ದಿನಗಳಲ್ಲಿ ಜನರ ಮೂಲಭೂತ ಅವಶ್ಯಕತೆಗಳಿಗೆ ಸಂಬಂಧಿಸಿದ ಮಾರಾಟ ವ್ಯವಸ್ಥೆಯನ್ನು ಅಳವಡಿಸುವ ಯೋಜನೆ ಇರುವದಾಗಿ ತಿಳಿಸಿದರು.
ವಿನಯಕುಮಾರ್ ಕಂದಡ್ಕ ಅವರು ಡಿಜಿಟಲ್ ಆರ್ಥಿಕ ಸಾಕ್ಷರತಾ ಜನಜಾಗೃತಿ ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರದ ಕ್ಯಾಷ್ಲೆಸ್ ಡಿಜಿಟಲ್ ಆರ್ಥಿಕತೆಯ ಬಗ್ಗೆ ವಿವರಿಸುತ್ತಾ ಎ.ಟಿ.ಎಂ ಕಾರ್ಡ್ ಬಳಕೆ, ಹಣ ವರ್ಗಾವಣೆ, ಮೊಬೈಲ್ ನಲ್ಲಿ ಹಣ ಪಾವತಿ ಮತ್ತು ವ್ಯವಹಾರ ಮತ್ತು ಇದನ್ನು ನಾವು ಯಾಕೆ ಅಳವಡಿಸಿಕೊಳ್ಳಬೇಕು ಮತ್ತು ಇದರಿಂದ ಜೀವನ ವ್ಯವಸ್ಥೆಯಲ್ಲಿ ನಮಗಾಗುವ ಲಾಭದ ಬಗ್ಗೆ ಮತ್ತು ಡಿಜಿಟಲ್ ಇಂಡಿಯಾ ಕಾರ್ಯಕ್ರಮ ದಿಂದ ದೇಶದ ಮುಂದಿನ ಆರ್ಥಿಕ ಭವಿಷ್ಯಕ್ಕೆ ಹೇಗೆ ಪ್ರಯೋಜನಕಾರಿ ಎಂಬ ಬಗ್ಗೆ ಪ್ರಾತ್ಯಕ್ಷತೆಯನ್ನು ನಡೆಸಿಕೊಟ್ಟರು. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆನಂದ ಬಿ.ಕೆ, ಮಡಿಕೇರಿ ಎ.ಪಿ.ಎಂ.ಸಿ ಸದಸ್ಯರು ಮತ್ತು ಸಂಘದ ನಿರ್ದೇಶಕ ಅನಂತ ಎನ್.ಸಿ, ನಿರ್ದೇಶಕರು ಗಳಾದ ದಯಾನಂದ ಪನೇಡ್ಕ, ಮನೋರಮಾ ಬೋಳ್ತಾಜೆ, ಪಕ್ಕೀರ ಹೆಚ್, ಕೆ.ಡಿ.ಸಿ.ಸಿ ಬ್ಯಾಂಕಿನ ಸ್ವ-ಸಹಾಯ ಸಂಘಗಳ ನೋಡಲ್ ಅಧಿಕಾರಿಗಳಾದ ತುಂಗರಾಜ್, ಕೆ.ಡಿ.ಸಿ.ಸಿ ಬ್ಯಾಂಕಿನ ಸಂಘದ ಮೇಲ್ವಿಚಾರಕ ಉದಯಕುಮಾರ್, ಸಂಘದ ವ್ಯಾಪ್ತಿಯಲ್ಲಿರುವ ಸ್ವ-ಸಹಾಯ ಸಂಘಗಳ ಸದಸ್ಯರು, ಸಂಘದ ಸದಸ್ಯರು ಉಪಸ್ಥಿತರಿದ್ದರು.