ಮಡಿಕೇರಿ, ಫೆ.7 : ಮಂಗಳೂರು ವಿಶ್ವ ವಿದ್ಯಾನಿಲಯದ ಹಳೇ ವಿದ್ಯಾರ್ಥಿಗಳ ‘ಮಂಗಳ ಅಲ್ಯೂಮಿನಿ ಅಸೋಸಿಯೇಷನ್’ (ಮಾ) ವತಿಯಿಂದ ತಾ.19 ರಂದು ಮಂಗಳೂರಿನ ಮಂಗಳ ಗಂಗೋತ್ರಿಯ ವಿವಿ ಕ್ಯಾಂಪಸ್‍ನಲ್ಲಿ ‘ಮಾ ಸಂಗಮ’ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮದ ಸಂಚಾಲಕ ರಾಜಕೀಯ ಶಾಸ್ತ್ರ ಪ್ರಾಧ್ಯಾಪಕ ಡಾ| ಪಿ.ಎಲ್. ಧರ್ಮ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ವಿಶ್ವ ವಿದ್ಯಾನಿಲಯದ ಅಧೀನಕ್ಕೆ ಒಳಪಟ್ಟ ಮಂಗಳೂರು, ಉಡುಪಿ, ಕೊಡಗು ಜಿಲ್ಲೆಯ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪಡೆದು ಪ್ರಸ್ತುತ ದೇಶ ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಳೇ ವಿದ್ಯಾರ್ಥಿಗಳನ್ನು ಒಂದೆಡೆ ಕಲೆ ಹಾಕುವದು ಮತ್ತು ಅವರ ಅನುಭವವನ್ನು ಈಗಿನ ವಿದ್ಯಾರ್ಥಿ ಗಳೊಂದಿಗೆ ವಿನಿಮಯ ಮಾಡಿ ಕೊಳ್ಳುವ ಚಿಂತನೆಯಡಿ “ಮಾ ಸಂಗಮ” ಕಾರ್ಯಕ್ರಮ ನಡೆಯಲಿದೆ ಎಂದರು.

ಕರ್ನಾಟಕ ರಾಜ್ಯದಲ್ಲೇ ಇದೇ ಪ್ರಥಮ ಬಾರಿಗೆ ಮಂಗಳೂರು ವಿಶ್ವ ವಿದ್ಯಾನಿಲಯದ ಹಳೇ ವಿದ್ಯಾರ್ಥಿ ಸಂಘದಿಂದ ವಿನೂತನ ಕಾರ್ಯಕ್ರಮ ನಡೆಯುತ್ತಿದೆ. ಸುಮಾರು 1500 ಕ್ಕೂ ಅಧಿಕ ಹಳೇ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ವ್ಯಾಸಂಗ ಮಾಡಿದ ವಿಷಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳೊಂದಿಗೆ ಬೆರೆಯುವ ಮತ್ತು ಮಾಹಿತಿ ವಿನಿಮಯ ಮಾಡಿಕೊಳ್ಳಲು ಅವಕಾಶವಿರುತ್ತದೆ ಎಂದರು.

ಮಂಗಳ ಅಲ್ಯೂಮಿನಿ ಅಸೋಸಿಯೇಷನ್ ಕೇವಲ ಇಂತಹ ಕಾರ್ಯಕ್ರಮದ ಆಯೋಜನೆಗೆ ಸೀಮಿತವಾಗಿಲ್ಲ. ಬದಲಾಗಿ ಇಂದು ಏನಾಗಿದೆ ಮತ್ತು ಮುಂದೆ ಏನಾಗಬೇಕಾಗಿದೆ ಎನ್ನುವ ಕುರಿತು ಚಿಂತಿಸಿ ಮುಂದಿನ ಹೆಜ್ಜೆಯನ್ನಿರಿಸುವ ಉದ್ದೇಶವನ್ನು ಹೊಂದಲಾಗಿದೆ, ಅಲ್ಲದೆ ಸಾಧನೆಯನ್ನು ಅವಲೋಕಿಸ ಲಾಗುವದು ಎಂದು ಧರ್ಮ ತಿಳಿಸಿದರು.

ಮುಂದಿನ ದಿನಗಳಲ್ಲಿ ಮಂಗಳೂರು ವಿವಿ ಕ್ಯಾಂಪಸ್‍ನಲ್ಲಿ ದೇಣಿಗೆ ಸಂಗ್ರಹದ ಮೂಲಕ ‘ಅಂತರ್ರಾಷ್ಟ್ರೀಯ ಗುಣಮಟ್ಟದ ವಸತಿ ಗೃಹ’ವನ್ನು ತೆರೆಯುವ ಉದ್ದೇಶವನ್ನು ಹೊಂದಿದ್ದು, ಇದಕ್ಕಾಗಿ ದೇಣಿಗೆ ಸಂಗ್ರಹಿಸುವ ಬಗ್ಗೆ ಚಿಂತನೆ ನಡೆದಿದೆ ಎಂದರು. ಸಂಘದ ಅಧ್ಯಕ್ಷ ದಿನೇಶ್ ಆಳ್ವ ಅಧ್ಯಕ್ಷತೆಯಲ್ಲಿ ನಡೆಯುವ ‘ಮಾ ಸಂಗಮ’ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ| ಕೆ.ಭೈರಪ್ಪ ಹಾಗೂ ಕರ್ನಾಟಕ ಬ್ಯಾಂಕಿನ ಮಾಜಿ ನಿರ್ವಾಹಕ ನಿರ್ದೇಶಕ ಅನಂತಕೃಷ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿ ದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಹಳೇ ವಿದ್ಯಾರ್ಥಿ ಸಂಘದ ಸಂಘÀಟನಾ ಕಾರ್ಯದರ್ಶಿ ಮಧುಸೂದನ್ ಭಟ್, ಸಂಚಾಲಕರಾದ ವೇಣು ಶರ್ಮ, ಕೊಡಗು ವಿಭಾಗದ ಉಸ್ತುವಾರಿ ಪ್ರೊ| ರವಿಶಂಕರ್ ಉಪಸ್ಥಿತರಿದ್ದರು.