ಮಡಿಕೇರಿ, ಫೆ. 7: ಮಡಿಕೇರಿಯ ಬಿ.ಆರ್.ಸಿ. ಕೇಂದ್ರದಲ್ಲಿ ನಡೆಯುತ್ತಿರುವ ಸಾಮಾನ್ಯ 5 ದಿನಗಳ ತರಬೇತಿಗೆ ಶಿಕ್ಷಕರನ್ನು ಪರೀಕ್ಷಾ ಸಮಯದಲ್ಲಿ ನಿಯೋಜಿಸುತ್ತಿರು ವದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ. ಸೋಮಶೇಖರ್ ನೇತೃತ್ವದಲ್ಲಿ ಶಿಕ್ಷಕರ ಪ್ರತಿಭಟನೆ ನಡೆಸಲಾಯಿತು.

ಜಿ.ಪಂ. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಸುಬ್ರಮಣಿ ಅವರು ಆಗಮಿಸಿ ತರಬೇತಿಯನ್ನು ಸ್ಥಗಿತಗೊಳಿಸಲು ಸೂಚಿಸಿ ಶಿಕ್ಷಕರನ್ನು ಶಾಲೆಗಳಿಗೆ ವಾಪಸ್ ಕಳುಹಿಸಿರುವ ಪ್ರಸಂಗ ಎದುರಾಯಿತು.

10 ನೇ ತರಗತಿಗೆ ಪೂರ್ವ ಪರೀಕ್ಷೆಗಳು ಸೋಮವಾರದಿಂದ ಆಂಭವಾಗಲಿವೆ. ಈ ಸಂದರ್ಭದಲ್ಲಿ ತರಬೇತಿ ನೀಡುತ್ತಿರುವದು ವಿದ್ಯಾರ್ಥಿಗಳ ಪುನರಾವರ್ತನೆಗೆ ತೊಡಕಾಗಲಿದೆ. ಕಳೆದವಾರ ತರಬೇತಿ ನೀಡಿದಾಗ ಸಂಘ ಆಕ್ಷೇಪಿಸಲಾಗಿ ಮುಂದೆ ಯಾವದೇ ತರಬೇತಿ ನೀಡುವದಿಲ್ಲ ಎಂದು ಪ್ರಬಾರ ಬಿ.ಆರ್.ಪಿ. ಸುಕ್ರು ದೇವೇಗೌಡ ತಿಳಿಸಿದ್ದರು. ಆದರೆ ಇಂದು ಮತ್ತೆ ತರಬೇತಿ ಆರಂಭಿಸಿದ್ದನ್ನು ಖಂಡಿಸಿ ಪ್ರತಿಭಟಿಸಲಾಯಿತು.

ಪದೇಪದೇ 10ನೇ ತರಗತಿ ಪರೀಕ್ಷಾ ಫಲಿತಾಂಶ ಕೇಳೋ ಅಧಿಕಾರಿಗಳು ವಿವೇಚನಾರಹಿತರಾಗಿ ತರಬೇತಿ ನೀಡುವದನ್ನು ಶಶಿ ಸುಬ್ರಮಣಿ ಖಂಡಿಸಿದರು.

ಈ ಹಿಂದೆ ಜಿ.ಪಂ. ಸಾಮಾನ್ಯ ಸಭೆಯಲ್ಲಿ ತಾನು ಈ ಕುರಿತು ಆಕ್ಷೇಪಿಸಿದರೂ ಮತ್ತೆ ಪುನರಾವರ್ತನೆಯಾಗುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್ ಕಾರ್ಯದರ್ಶಿ ಹೆಚ್.ಜಿ. ಕುಮಾರ್, ದಯಾನಂದ ಪ್ರಕಾಶ್, ನಾಗರಾಜ್, ಪಿ.ಎಸ್. ರವಿಕೃಷ್ಣ, ಶಾಂತರಾಜ್, ಸತ್ಯನಾರಾಯಣ ಮುಂತಾದವರು ಪಾಲ್ಗೊಂಡಿದ್ದರು.