ಪೊನ್ನಂಪೇಟೆ, ಫೆ. 7: ದೇಶದಲ್ಲಿ ತಂತ್ರಜ್ಞಾನಾಧಾರಿತ ವ್ಯವಸ್ಥೆಗಳು ದಿನೇ ದಿನೆ ಅಭಿವೃದ್ಧಿಗೊಳ್ಳುತ್ತಿದ್ದರೂ ಸಮಾಜದಲ್ಲಿ ಮನುಷ್ಯನ ನಡಾವಳಿ ಬದಲಾಗುತ್ತಿಲ್ಲ. ಇದೇ ಇಂದಿನ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಬದಲಾವಣೆ ಇಂದಿನ ಅನಿವಾರ್ಯವಾಗಿದೆ. ಆದರೂ ಬದಲಾಗದಿದ್ದರೆ ಪರಿಸ್ಥಿತಿಯೇ ನಮ್ಮನ್ನು ಬದಲು ಮಾಡಿ ಬಿಡುತ್ತದೆ ಎಂದು ಕರ್ನಾಟಕದ ಹಿರಿಯ ವ್ಯಕ್ತಿತ್ವ ವಿಕಸನ ತರಬೆÉೀತುದಾರರಾದ ಮೈಸೂರಿನ ಪರಿವರ್ತನಾ ಶಿಕ್ಷಣ ಸಂಸ್ಥೆಯ ಡೀನ್ ಆರ್.ಎ. ಚೇತನ್ ರಾಮ್ ಅವರು ಹೇಳಿದರು.
ಗೋಣಿಕೊಪ್ಪಲಿನ ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಆವರಣದಲ್ಲಿರುವ ‘ಕಿತ್ತಳೆ ಭವನ’ ದ ಸಭಾಂಗಣದಲ್ಲಿ ನಡೆದ ಪೊನ್ನಂಪೇಟೆ ನಿಸರ್ಗ ಜೇಸಿಸ್ನ (ಜೆ.ಸಿ.ಐ ಪೊನ್ನಂಪೇಟೆ ನಿಸರ್ಗ) 7ನೇ ಘಟಕಾಡಳಿತ ಮಂಡಳಿಯ ಪದಸ್ವೀಕಾರ ಸಮಾರಂಭದಲ್ಲಿ ದಿಕ್ಸೂಚಿ ಭಾಷಣಾಕಾರರಾಗಿ ಮಾತನಾಡಿದ ಚೇತನ್ ರಾಮ್ ಅವರು ಪರಿಸ್ಥಿತಿ ನಮ್ಮನ್ನು ಬದಲು ಮಾಡಿ ಬಿಡುವ ಮೊದಲೆ ನಾವೇ ಬದಲಾಗುವದು ಉತ್ತಮ. ಅಲ್ಲದೆ ಬದಲಾವಣೆ ಪ್ರಕೃತಿ ನಿಯಮವೂ ಹೌದು ಎಂದು ಹೇಳಿದರು. ಯಶಸ್ಸು ಕಂಡಕಂಡಲ್ಲಿ ಬೆಳೆಯುವ ಕಾಡು ಕುಸುಮವಲ್ಲ. ನಿರಂತರ ಪ್ರಯತ್ನ ಮತ್ತು ಆತ್ಮ ವಿಶ್ವಾಸದ ಫಲವಾಗಿ ದೊರೆಯುವ ಫಲಿತಾಂಶವೇ ಯಶಸ್ಸು ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಅತಿಥಿ ಯಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ ಮಾತನಾಡಿ, ಭಾರತ ದೇಶ ವಿಶ್ವದಲ್ಲೆ ಅತೀ ಹೆಚ್ಚು ಯುವ ಸಂಪನ್ಮೂಲವನ್ನು ಹೊಂದಿರುವ ರಾಷ್ಟ್ರವಾಗಿದೆ. ಪ್ರಪಂಚದ ವಿವಿಧ ದೇಶಗಳಿಗೆ ಭಾರತದ ಯುವ ಶಕ್ತಿಯನ್ನು ರಫ್ತು ಮಾಡುತ್ತಿರುವ ಹೆಗ್ಗಳಿಕೆಯೂ ಭಾರತಕ್ಕಿದೆ. ಆದರೆ ಭಾರತದ ಯುವ ಸಂಪನ್ಮೂಲದ ಶಕ್ತಿ ಈ ದೇಶದಲ್ಲಿ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂಬದು ಚಿಂತಿಸಬೇಕಾದ ವಿಷಯವಾಗಿದೆ. ಈ ಬಗ್ಗೆ ಸರಕಾರ ಗಂಭೀರ ಕ್ರಮಗಳನ್ನು ಜರುಗಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತೀಯ ಜೇಸಿಸ್ನ ವಲಯ 14ರ ಉಪಾಧ್ಯಕ್ಷ ಮೈಸೂರಿನ ವಿಕಾಸ್ ಗೂಗ್ಲಿಯಾ ಅವರು ಪೊನ್ನಂಪೇಟೆ ನಿಸರ್ಗ ಘಟಕಕ್ಕೆ ನೂತನವಾಗಿ ಸೇರ್ಪಡೆಗೊಂಡ ಇಬ್ಬರು ಸದಸ್ಯರಿಗೆ ಪ್ರತಿಜ್ಞಾವಿಧಿ ಭೋದಿಸಿ ಅವರನ್ನು ಜೇಸಿ ಕುಟುಂಬಕ್ಕೆ ಸೇರ್ಪಡೆಗೊಳಿಸಿ ದರು. ಇದಕ್ಕೂ ಮೊದಲು ಮಾಯಮುಡಿಯ ಎ.ಎಸ್.ಟಾಟು ಮೊಣ್ಣಪ್ಪ ಅವರು ಪೊನ್ನಂಪೇಟೆ ನಿಸರ್ಗ ಜೇಸಿಸ್ನ 7ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು. ವೇದಿಕೆಯಲ್ಲಿ ನಿರ್ಗಮಿತ ಕಾರ್ಯದರ್ಶಿ ಶೀಲಾ ಬೋಪಣ್ಣ ನೂತನ ಜೇಸಿರೆಟ್ ಮುಖ್ಯಸ್ಥೆ ಸೌಮ್ಯ ಮೊಣ್ಣಪ್ಪ ನೂತನ ಜೂನಿಯರ್ ಜೇಸಿ ಮುಖ್ಯಸ್ಥೆ ಕ್ಷೀರಾ ಮೊಣ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿರ್ಗಮಿತ ಘಟಕಾಧ್ಯಕ್ಷ ಬಿ.ಈ ಕಿರಣ್ ಅವರು ತಮ್ಮ ವಾರ್ಷಿಕ ವರದಿಯನ್ನು ಮಂಡಿಸಿದ ಬಳಿಕ ನೂತನ ಅಧ್ಯಕ್ಷರಿಗೆ ಪ್ರಮಾಣ ವಚನ ಭೋದಿಸಿದರು. ಇದೇ ವೇಳೆ 2017ನೇ ಸಾಲಿನ ನೂತನ ಪಧಾದಿಕಾರಿಗಳಾದ ಹೆಚ್. ಆರ್. ಸತೀಶ್, ವಿಕ್ರಮ್ ಮೂಡಗದ್ದೆ, ಶೀಲಾ ಬೋಪಣ್ಣ, ದಿಲನ್ ಬೋಪಣ್ಣ, ಎ. ಪಿ. ದಿನೇಶ್ ಕುಮಾರ್, ಹೆಚ್. ಆರ್. ಮಧು, ಬಿ.ಎಂ. ಗಣೇಶ್, ಎನ್.ಜಿ. ಸುರೇಶ್, ಪಿ.ಪಿ.ಬಿದ್ದಪ್ಪ, ವಿನೋದ್ ಮೂಡಗದ್ದೆ, ಜಿ.ಪಿ. ಸ್ವಾಮಿ, ಸೌಮ್ಯ ಮೊಣ್ಣಪ್ಪ ಮತ್ತು ಶೀಲಾ ಮೊಣ್ಣಪ್ಪ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಜಿ.ಪಿ. ಸ್ವಾಮಿ ಅವರು ನೂತನ ಸದಸ್ಯರನ್ನು ಪರಿಚಯಿಸಿದರೆ ವಿನೋದ್ ನೂತನ ಅಧ್ಯಕ್ಷರನ್ನು ಪರಿಚಯಿಸಿದರು. ಸಮಾರಂಭದಲ್ಲಿ ಜಿ.ಪಂ. ಮಾಜಿ ಸದಸ್ಯ ಎಂ.ಎಸ್. ಕುಶಾಲಪ್ಪ, ಐ.ಎಂ.ಎ ವೀರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ಡಾ.ಬಿ.ಜಿ. ಕಿರಣ್, ಗೋಣಿಕೊಪ್ಪಲು ಜೇಸಿಸ್ ಅಧ್ಯಕ್ಷ ಕುಮಾರ್ ಮಹದೇವ್, ಪೊನ್ನಂಪೇಟೆ ಗೋಲ್ಡನ್ ಜೇಸಿಸ್ನ ಪೂರ್ವಾಧ್ಯಕ್ಷ ಕೊಣಿಯಂಡ ಸಂಜು ಸೋಮಯ್ಯ, ವಲಯ ಅಧಿಕಾರಿ ಕಾವ್ಯ ಸೋಮಯ್ಯ, ಕೊಡಗು ಪ್ರೆಸ್ ಕ್ಲಬ್ನ ಅಧ್ಯಕ್ಷ ಎಂ.ಪಿ. ಕೇಶವ್ ಕಾಮತ್, ಮಡಿಕೇರಿಯ ಉದ್ಯಮಿ ಚೆಯ್ಯಂಡ ಸತ್ಯ ಮೊದಲಾದವರು ಮಾತನಾಡಿದರು. ನೂತನ ಕಾರ್ಯದರ್ಶಿ ಹೆಚ್.ಆರ್.ಸತೀಶ್ ಅವರು ವಂದಿಸಿದರು.