ಮಡಿಕೇರಿ, ಫೆ. 8: ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ವತಿಯಿಂದ ಹುಬ್ಬಳ್ಳಿ ಧಾರವಾಡದಲ್ಲಿ ಫೆ. 3ರಿಂದ ನಡೆಯುತ್ತಿದ್ದ ಕರ್ನಾಟಕ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಹಾಕಿ ಕೂರ್ಗ್‍ನ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಇಂದು ನಡೆದ ಫೈನಲ್ ಪಂದ್ಯಾಟದಲ್ಲಿ ಹಾಕಿ ಕೂರ್ಗ್ ತಂಡ 2-0 ಗೋಲಿನಿಂದ ರೈಲ್‍ವೀಲ್ ಫ್ಯಾಕ್ಟರಿ, ಬೆಂಗಳೂರು ತಂಡವನ್ನು ಪರಾಭವಗೊಳಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಹಾಕಿಕೂರ್ಗ್ ಪರ ಕರಿನೆರವಂಡ ಕುಂಞಪ್ಪ (17ನೇ ನಿಮಿಷ) ಹಾಗೂ ರತನ್ ಮುತ್ತಣ್ಣ (29ನೇ ನಿಮಿಷ) ಗೋಲು ಬಾರಿಸಿದರು. ರತನ್ ಮುತ್ತಣ್ಣ ತಂಡದ ನಾಯಕರಾಗಿದ್ದು, ಬುಟ್ಟಿಯಂಡ ಚಂಗಪ್ಪ ನೇತೃತ್ವದಲ್ಲಿ ಹಾಕಿ ಕೂರ್ಗ್‍ನ 10 ಜನರ ತಂಡದ ಉಸ್ತುವಾರಿ ವಹಿಸಿತ್ತು. ಕೋಚ್ ಆಗಿ ಬೊಳ್ಳಂಡ ರೋಷನ್ ಹಾಗೂ ವ್ಯವಸ್ಥಾಪಕರಾಗಿ ಟಿಶಾ ಬೋಪಯ್ಯ ಕಾರ್ಯನಿರ್ವಹಿಸಿದರು. ಸೆಮಿಫೈನಲ್‍ನಲ್ಲಿ ಹಾಕಿಕೂರ್ಗ್ ಬೆಂಗಳೂರು ಸಾಯಿ ತಂಡವನ್ನು ಮಣಿಸಿತು.