ಮಡಿಕೇರಿ: ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಜಾನಪದ ಕ್ಷೇತ್ರದಲ್ಲಿನ ಸಾಧನೆಗಾಗಿ ನೀಡಲಾಗುವ ‘ಜಾನಪದ ಲೋಕ’ ಪ್ರಶಸ್ತಿಗೆ ಕೊಡಗಿನ ಹಿರಿಯ ಸಾಹಿತಿ ಬಾಚರಣಿಯಂಡ ಪಿ. ಅಪ್ಪಣ್ಣ ಅವರು ಆಯ್ಕೆ ಆಗಿದ್ದು, ತಾ. 12 ರಂದು ರಾಮನಗರದ ಜಾನಪದ ಲೋಕದಲ್ಲಿ ನಡೆಯುವ ಪ್ರವಾಸಿ ಮಹಿಳಾ ಜಾನಪದ ಲೋಕೋತ್ಸವದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುತ್ತದೆ. ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಅಭಿನಂದನಾ ಪತ್ರವನ್ನು ಒಳಗೊಂಡಿರುತ್ತದೆ ಎಂದು ಜಾನಪದ ಪರಿಷತ್‍ನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ. ಅನಂತಶಯನ ತಿಳಿಸಿದ್ದಾರೆ.
ಕರ್ನಾಟಕ ಜಾನಪದ ಪರಿಷತ್, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ತಾ. 10, 11 ಮತ್ತು 12 ರಂದು ರಾಮನಗರದ ಜಾನಪದ ಲೋಕದಲ್ಲಿ ಪ್ರವಾಸಿ ಮಹಿಳಾ ಜಾನಪದ ಲೋಕೋತ್ಸವ ನಡೆಯಲಿದೆ. ಈ ಮೂರು ದಿನವೂ ಜಾನಪದ ಕೆರೆ ಅಂಗಳದಲ್ಲಿ ಜಾನಪದ ಆಟ, ಕಲೆಗಳ ಪ್ರದರ್ಶನವಿದ್ದು, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಚಾಲನೆ ನೀಡುವರು.
(ಮೊದಲ ಪುಟದಿಂದ) ತಾ. 10 ರಂದು ಲೋಕೋತ್ಸವವನ್ನು ಜಾನಪದ ಕಲಾವಿದರಾದ ಸುಕ್ರಿ ಬೊಮ್ಮೆಗೌಡ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ. ತಿಮ್ಮೇಗೌಡ ವಹಿಸುವರು. ಅತಿಥಿಗಳಾಗಿ ಸಂಸದ ಡಿ.ಕೆ. ಸುರೇಶ್, ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ ಅಧ್ಯಕ್ಷ ಪಿ. ನಾಗರಾಜ್, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಮತ್ತಿತರರು ಪಾಲ್ಗೊಳ್ಳುವರು. ಅಂದು ಸಂಜೆ 5.30 ಗಂಟೆಗೆ ವಿವಿಧ ಜಿಲ್ಲೆಗಳ ಕಲಾ ಪ್ರದರ್ಶನಗಳು ನಡೆಯಲಿದ್ದು, ಕೊಡಗಿನ ಗೌರಿ ನಂಜಪ್ಪ ತಂಡದಿಂದ ಉಮ್ಮತಾಟ್ ಪ್ರದರ್ಶನವಿದೆ. ತಾ. 11 ರಂದು ಬೆಳಿಗ್ಗೆ 10.30 ಗಂಟೆಯಿಂದ ವಿಚಾರಗೋಷ್ಠಿಗಳು ನಡೆಯಲಿದ್ದು, ಸಂಜೆ 5.30 ಗಂಟೆಗೆ ವಿವಿಧ ಕಲಾಪ್ರದರ್ಶನಗಳೊಂದಿಗೆ ಕೊಡಗಿನ ಜಯಲಕ್ಷ್ಮಿ ತಂಡದಿಂದ ಶಾಲಾ ಹೆಣ್ಣುಮಕ್ಕಳ ಎರವರ ಕುಣಿತ ಮೂಡಿ ಬರಲಿದೆ. ಸಂಜೆ 7 ಗಂಟೆಗೆ ಕರಿರಾಯ ಕಥೆ ಯಕ್ಷಗಾನ ಪ್ರದರ್ಶನವಿದ್ದು, ಕನ್ನಡ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಉದ್ಘಾಟಿಸುವರು. ಕರ್ನಾಟಕ ಜಾನಪದ ಪರಿಷತ್ ಮ್ಯಾನೆಜಿಂಗ್ ಟ್ರಸ್ಟಿ ಇಂದಿರಾ ಬಾಲಕೃಷ್ಣ ಅಧ್ಯಕ್ಷತೆ ವಹಿಸುವರು.
ತಾ. 12ರ ಸಂಜೆ 5.30 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಶ್ರೀ ಆದಿ ಚುಂಚನಗಿರಿ ಮಹಾ ಸಂಸ್ಥಾನದ ನಿರ್ಮಲ ನಂದನಾಥ ಸ್ವಾಮಿ ದಿವ್ಯ ಸಾನಿಧ್ಯ ವಹಿಸುವರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರಶಸ್ತಿ ವಿತರಣೆ ಮಾಡಲಿದ್ದು, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ. ತಿಮ್ಮೇಗೌಡ, ಕನ್ನಡ ಸಂಸ್ಕøತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಮತ್ತಿತರರು ಉಪಸ್ಥಿತರಿರುವರು ಎಂದು ಅನಂತಶಯನ ಮಾಹಿತಿ ನೀಡಿದ್ದಾರೆ.