ಮಡಿಕೇರಿ, ಫೆ. 8: ಮಾಜಿ ಸೈನಿಕರ ಕುಂದುಕೊರತೆ ಸಭೆಯು ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅಧ್ಯಕ್ಷತೆಯಲ್ಲಿ ನಡೆಯಿತು.
ಮಾಜಿ ಸೈನಿಕರ ಅಹವಾಲನ್ನು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಆಲಿಸಿದರು. ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ದೇಶ ಸೇವೆ ಮಾಡಿದ ಸೈನಿಕರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವದು. ಮಾಜಿ ಸೈನಿಕರ ಕಲ್ಯಾಣಕ್ಕಾಗಿ ಎಲ್ಲಾ ರೀತಿಯ ಸಹಕಾರ ನೀಡಲಾಗುವದು ಎಂದರು.
ಮಾಜಿ ಸೈನಿಕರ ಸಂಘದ ಜಿಲ್ಲಾ ಅಧ್ಯಕ್ಷ ಮೇಜರ್ ಜನರಲ್ ಬಿ.ಎ.ಕಾರ್ಯಪ್ಪ (ನಿವೃತ್ತ) ಮಾತನಾಡಿ ದೇಶ ಸೇವೆ ಮಾಡಿದ ಮಾಜಿ ಸೈನಿಕರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕಿದೆ. ಮಾಜಿ ಸೈನಿಕರಿಗೆ ಯಾವದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಮಾಜಿ ಸೈನಿಕರು ತಮ್ಮ ಅಹವಾಲುಗಳನ್ನು ಜಿಲ್ಲಾಧಿಕಾರಿ ಅವರಿಗೆ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಗೀತಾ, ಮಾಜಿ ಸೈನಿಕರು ಹಾಗೂ ಇತರರು ಇದ್ದರು.
ಕೊಡಗು ಜಿಲ್ಲೆಯಲ್ಲಿ ಸುಮಾರು ಹತ್ತು ಸಾವಿರದಿಂದ ಹದಿನೈದು ಸಾವಿರದವರೆಗೆ ಮಾಜಿ ಸೈನಿಕರು, ಸೈನಿಕರ ಅವಲಂಭಿತರು ವಾಸವಾಗಿದ್ದಾರೆ. ಇದರಲ್ಲಿ ಎಲ್ಲಾ ಮಾಜಿ ಸೈನಿಕರು ಕಡಿಮೆ ಪಕ್ಷ 15 ರಿಂದ 40 ವರ್ಷದವರೆಗೆ ಸೇವೆ ಸಲ್ಲಿಸಿ, ಜಿಲ್ಲೆಗೆ ಬಂದು ನೆಲೆಸಿರುತ್ತಾರೆ. ಮಾಜಿ ಸೈನಿಕರು ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿದ್ದು, ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಬೇಕಿದೆ ಎಂದು ಅವರು ಮನವಿ ಮಾಡಿದರು.
ಮಾಜಿ ಸೈನಿಕರಿಗೆ ಸರ್ಕಾರದಿಂದ ನೀಡುತ್ತಿರುವ ವೈದ್ಯಕೀಯ ಸೌಲಭ್ಯ, ಖಾಯಂ ನಿವೇಶನಕ್ಕಾಗಿ ಜಾಗ ಗುರುತಿಸುವದು, ಸೈನಿಕ ಶಾಲೆಯಲ್ಲಿ ಮಾಜಿ ಸೈನಿಕರ ಮಕ್ಕಳಿಗೆ ಶೇ.10 ರಷ್ಟು ಮೀಸಲಾತಿ ನೀಡುವದು, ಜಿಲ್ಲಾ ಕೇಂದ್ರದಲ್ಲಿ ಮಾಜಿ ಸೈನಿಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಸ್ಥಳಾವಕಾಶ ಕಲ್ಪಿಸುವದು, ಮಾಜಿ ಸೈನಿಕರ ಮನೆ ಕಂದಾಯದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡುವದು, ಮಾಜಿ ಸೈನಿಕರು 50-53ರಡಿ ಸಲ್ಲಿಸಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವದು, ಮಾಜಿ ಸೈನಿಕರು, ವಿಧವೆಯರು, ಸೈನಿಕರ ಅವಲಂಭಿತರು ಸರ್ಕಾರದ ಜಮೀನು ಸ್ವಾಧೀನ ಇದ್ದಲ್ಲಿ ಅದನ್ನು ತೆರವುಗೊಳಿಸದಿರುವದು ಹೀಗೆ ನಾನಾ ಬೇಡಿಕೆಗಳ ಮನವಿಯನ್ನು ಸರ್ಕಾರದ ಗಮನಕ್ಕೆ ತರುವಂತೆ ಮಾಜಿ ಸೈನಿಕರ ಜಿಲ್ಲಾ ಸಂಘ ಜಿಲ್ಲಾಧಿಕಾರಿ ಅವರಲ್ಲಿ ಕೋರಿದೆ.