ಮಡಿಕೇರಿ, ಫೆ. 8: ವಿದೇಶದಲ್ಲಿ ಇದೀಗ ಪತ್ರಿಕಾ ವ್ಯಾಮೋಹ ಕುಸಿಯುತ್ತಿದ್ದು, ಪ್ರಜೆಗಳು ಮೊಬೈಲ್, ಫೋನ್, ಆ್ಯಪ್ಗಳನ್ನು ಮಾತ್ರ ಸುದ್ದಿ ಗಮನಿಸಲು ಬಳಸುತ್ತಿದ್ದಾರೆ ಎಂದು ಬಾಸ್ಟನ್ನ ಹ್ಯಾಂಶಯರ್ ಇಂಗ್ಲೀಷ್ ಪತ್ರಿಕೆ ಕಾನ್ಕಾರ್ಡ್ ಮಾನಿಟರ್ ವರದಿಗಾರ್ತಿ ಆ್ಯಲಿ ಮಾರಿಸ್ ಹೇಳಿದರು.ರೋಟರಿ ಅಧ್ಯಯನ ತಂಡದೊಂದಿಗೆ ಬಂದಿರುವ ಅವರು ಇಂದು ‘ಶಕ್ತಿ’ ಕಾರ್ಯಾಲಯಕ್ಕೆ ಭೇಟಿ ನೀಡಿ ರಾಷ್ಟ್ರೀಯ ಹಾಗೂ ಗ್ರಾಮೀಣ ಪತ್ರಿಕೋದ್ಯಮ, ತನಿಖಾ ವರದಿ, ವಿಷಯ ಸಂಗ್ರಹ ಇತ್ಯಾದಿ ಕುರಿತು ವಿಚಾರ ವಿನಿಮಯ ಮಾಡಿದರು. ಭಾರತದಲ್ಲಿ ತಾವು ಹೋದ ಮನೆಗಳಲ್ಲೆಲ್ಲಾ ವೃತ್ತ ಪತ್ರಿಕೆಗಳನ್ನು ಕಾಣುತ್ತಿರುವೆ ಎಂದು ಅಚ್ಚರಿ ವ್ಯಕ್ತಪಡಿಸಿದರು.
ವಿದೇಶದಲ್ಲಿ ಪತ್ರಿಕಾ ಪ್ರೇಮ ಕುಸಿಯುತ್ತಿದ್ದರೂ ತನಿಖಾ ವರದಿ, ಪ್ರಥಮ ವರದಿಗಳು ಪತ್ರಿಕೆಗಳಲ್ಲೇ ಮೊದಲು ಬರುತ್ತಿದ್ದು, ಹಣ ಮಾಡುವ ಉದ್ಯೋಗವಾಗಿರುವ ಟಿವಿ ಚಾನಲ್ಗಳಲ್ಲಿ ಸುದ್ದಿಗಳು ಮತ್ತಷ್ಟೆ ಬರುತ್ತವೆ ಎಂದರು. ಟಿವಿ ಸುದ್ದಿಗಳಲ್ಲಿ ಸತ್ಯತೆಯ ಕೊರತೆ ಇರುವದಾಗಿಯೂ ಹೇಳಿದ ಅವರು ಸುಳ್ಳು ಸುದ್ದಿ ಹರಡುವ ಹಲವು ಮಾದ್ಯಮಗಳು ಅಲ್ಲಿ ಇರುವದಾಗಿ ನುಡಿದರು. ರಾಜಕೀಯ, ಆಡಳಿತ, ತೆರಿಗೆ ಹಾಗೂ ಇತರ
(ಮೊದಲ ಪುಟದಿಂದ) ವಿಚಾರಗಳ ಕುರಿತು ಮಾತನಾಡಿದ ಅವರು ‘ಶಕ್ತಿ’ ಕಾರ್ಯಾಲಯ ವೀಕ್ಷಿಸಿ, ಸಿಬ್ಬಂದಿಯನ್ನು ಭೇಟಿಯಾಗಿ ಶ್ಲಾಘನೆ ವ್ಯಕ್ತಪಡಿಸಿದರು. ಈ ಸಂದರ್ಭ ‘ಶಕ್ತಿ’ಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ, ಸಂಪಾದಕ ಬಿ.ಜಿ. ಅನಂತಶಯನ, ಪ್ರಧಾನ ವ್ಯವಸ್ಥಾಪಕ ಜಿ. ಜಿದ್ವಿಲಾಸ್ ಮತ್ತು ವ್ಯವಸ್ಥಾಪಕಿ ಪ್ರಜ್ಞಾ ಹಾಜರಿದ್ದರು.