ಮಡಿಕೇರಿ, ಫೆ. 8: ವಾಲ್ನೂರು- ತ್ಯಾಗತ್ತೂರು ಗ್ರಾ.ಪಂ. ಸದಸ್ಯನಾಗಿರುವ ತಾನು ಅಕ್ರಮವಾಗಿ ವಿದ್ಯುತ್ ಸಂಪರ್ಕ ಹೊಂದಿರುವದಾಗಿ ಸುಳ್ಳು ಮಾಹಿತಿ ನೀಡಲಾಗಿದೆ ಎಂದು ಭುವನೇಂದ್ರ ತಿಳಿಸಿದ್ದಾರೆ. ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಅವರು, ವಾಲ್ನೂರು ಗ್ರಾಮದಲ್ಲಿರುವ ತನ್ನ ಮನೆ ಹಾಗೂ ಪಂಪ್‍ಸೆಟ್ ಸೇರಿದಂತೆ ವಾರ್ಷಿಕ ಒಂದು ಲಕ್ಷಕ್ಕೂ ಅಧಿಕ ಬಿಲ್ ಪಾವತಿಸುತ್ತಿದ್ದೇನೆ. ತನ್ನ ತೋಟದಲ್ಲಿ ಕಾಫಿ ಕುಯಿಲು ಕೆಲಸಕ್ಕೆಂದು ಗುತ್ತಿಗೆ ಕಾರ್ಮಿಕರು ಬಂದು ನೆಲೆಸಿದ್ದು, ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿ ಕೊಂಡಿದ್ದಾರೆ. ಈ ಪೈಕಿ ಎರವರ ಬೋಜ ಎಂಬಾತ ಮೊಬೈಲ್ ಜಾರ್ಜ್ ಮಾಡುವ ಸಲುವಾಗಿ ಅಕ್ರಮವಾಗಿ ವಿದ್ಯುತ್ ಅನ್ನು ಬಳಸಿಕೊಂಡಿದ್ದಾನೆ. ಇದನ್ನೇ ದೊಡ್ಡದು ಮಾಡಿ ಅಧ್ಯಕ್ಷೆ ನಾಗರತ್ನ ಅವರು ವಿಜಿಲೆನ್ಸ್‍ಗೆ ಪುಕಾರು ನೀಡಿ ಬೋಜನ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಲಾಗಿದೆ. ಆದರೆ, ಭುವನೇಂದ್ರ ವಿದ್ಯುತ್ ಕಳವು ಮಾಡಿರುವದಾಗಿ ಸುಳ್ಳು ಮಾಹಿತಿ ನೀಡಲಾಗಿದೆ ಎಂದಿದ್ದಾರೆ.