ಕುಶಾಲನಗರ, ಫೆ. 8: ದೇಶವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಯುವಜನತೆ ಚಿಂತನೆ ಹರಿಸಿ ಕಾರ್ಯೋನ್ಮುಖರಾಗ ಬೇಕಿದೆ ಎಂದು ಸೋಮವಾರ ಪೇಟೆ ತಾಲೂಕು ಪಂಚಾಯಿತಿ ಸದಸ್ಯ ಡಿ.ಎಸ್. ಗಣೇಶ್ ಹೇಳಿದರು.

ಕುಶಾಲನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಚಿಕ್ಕತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿ ಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸುಂದರ ಸಮಾಜ ನಿರ್ಮಾಣದ ಕನಸಿನೊಂದಿಗೆ ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ. ಶಿಬಿರದ ಮೂಲಕ ವಿದ್ಯಾರ್ಥಿಗಳು ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.

ಚಿಕ್ಕತ್ತೂರು ಶಾಲೆಯ ಮುಖ್ಯ ಶಿಕ್ಷಕಿ ಬಿ.ಆರ್. ತಾರಾ ಮಾತನಾಡಿ, ರಾಷ್ಟ್ರ ನಿರ್ಮಾಣ ಚಟುವಟಿಕೆಗಳಿಗೆ ಪ್ರೇರೇಪಿಸುವದು ಎನ್ನೆಸ್ಸೆಸ್ ಶಿಬಿರದ ಪ್ರಮುಖ ಉದ್ದೇಶವಾಗಿದೆ ಎಂದರು. ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಹೆಚ್.ವಿ. ಶಿವಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ಪ್ರಕಾಶ್ ಕುಂಬಾರ್ ಪ್ರಾಸ್ತಾವಿಕ ನುಡಿಗಳಾಡಿದರು. ಉಪನ್ಯಾಸಕ ಕೆ.ವಿ. ಉದಯ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಇದೇ ಸಂದರ್ಭ ಎನ್ನೆಸ್ಸೆಸ್ ಗೀತೆ ರಚನೆಕಾರ ಡಾ. ಎಂ.ಬಿ. ದಿಲ್ಶಾದ್ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕುಮಾರಸ್ವಾಮಿ, ಚಿಕ್ಕತ್ತೂರು ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಇಬ್ರಾಹಿಂ, ಸದಸ್ಯರಾದ ಸವಿತಾ, ಗೌರಮ್ಮ, ಗ್ರಾಮಸ್ಥರಾದ ಕೃಷ್ಣ, ಕಾಲೇಜು ಉಪನ್ಯಾಸಕ ರೂಪಕುಮಾರ್ ಇದ್ದರು.

ವಿದ್ಯಾರ್ಥಿ ದೀಕ್ಷಿತ್ ಪ್ರಾರ್ಥಿಸಿ, ನಿಖಿಲ್ ನಿರೂಪಿಸಿದರೆ, ಗಿರಿಧರ್ ವಂದಿಸಿದರು.