ಸೋಮವಾರಪೇಟೆ, ಫೆ. 8: ಸೋಮವಾರಪೇಟೆ ತಾಲೂಕಿನ ಪ್ರತಿಷ್ಠಿತ ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರ ಗದ್ದುಗೆ ಹಿಡಿಯಲು ಪ್ರಮುಖ ಮೂರು ರಾಜಕೀಯ ಪಕ್ಷಗಳಲ್ಲಿ ತೀವ್ರ ಕಸರತ್ತು ನಡೆಯುತ್ತಿದೆ. ಆರ್‍ಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಾ. 9ರಂದು (ಇಂದು) ಚುನಾವಣೆ ನಡೆಯಲಿದ್ದು, ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

ಪ್ರಸಕ್ತ ಸಾಲಿನಲ್ಲಿ ಜರುಗಿದ ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಬೆಂಬಲಿತ ತಲಾ ಐವರು, ಕಾಂಗ್ರೆಸ್ ಬೆಂಬಲಿತ ಈರ್ವರು ಆಯ್ಕೆಯಾಗಿದ್ದು, ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷ ಮೂವರು ನಾಮನಿರ್ದೇಶಿತರನ್ನು ನೇಮಿಸುವ ಮೂಲಕ ತನ್ನ ಸದಸ್ಯಬಲವನ್ನು 5ಕ್ಕೆ ಏರಿಸಿಕೊಂಡಿದೆ.

ಕುಸುಬೂರು ಗ್ರಾಮದ ಚಂದ್ರಿಕಾ ಕುಮಾರ್, ಹಂಡ್ಲಿಯ ವಿರೇಂದ್ರ ಹಾಗೂ ಕುಶಾಲನಗರದ ಅಬ್ದುಲ್ ಖಾದರ್ ಅವರುಗಳನ್ನು ಎಪಿಎಂಸಿಗೆ ಸರ್ಕಾರ ನಾಮನಿರ್ದೇಶನ ಮಾಡಿದೆ. 2 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಹೇಗಾದರೂ ಮಾಡಿ ಅಧಿಕಾರ ಹಿಡಿಯಲೇಬೇಕೆಂಬ ಹಠಕ್ಕೆ ಬಿದ್ದಿದ್ದು, ನಾಮನಿರ್ದೇಶಿತ ಸದಸ್ಯರ ಬಲದಿಂದ ಜೆಡಿಎಸ್‍ನೊಂದಿಗೆ ಕೈಜೋಡಿಸುವ ಬಗ್ಗೆಯೂ ಮಾತುಕತೆ ನಡೆದಿದೆ. ಕುಶಾಲನಗರದಿಂದ ಆಯ್ಕೆಯಾಗಿರುವ ಕಾಂಗ್ರೆಸ್‍ನ ಎಂ.ಡಿ. ರಮೇಶ್ ಅವರಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವಿದೆ. ವರ್ತಕರ ಕ್ಷೇತ್ರದಿಂದ ಆಯ್ಕೆಯಾಗಿರುವ ಶಶಿ ಭೀಮಯ್ಯ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವಂತಿಲ್ಲ.

ಜೆಡಿಎಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಕೊಡ್ಲಿಪೇಟೆ ಕ್ಷೇತ್ರದಿಂದ ಆಯ್ಕೆಯಾಗಿರುವ ಎಸ್.ಡಿ. ತಮ್ಮಯ್ಯ ಹಾಗು ಹಾನಗಲ್ಲು ಕ್ಷೇತ್ರದಿಂದ ಆಯ್ಕೆಯಾಗಿರುವ ಸಿ.ಎಸ್. ನಾಗರಾಜು ಅವರುಗಳ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.

ಐದು ಸ್ಥಾನಗಳನ್ನು ಗಳಿಸಿರುವ ಬಿಜೆಪಿ ತನ್ನ ಅಭ್ಯರ್ಥಿಯಾಗಿ ಸತತ ಏಳು ಬಾರಿ ಎಪಿಎಂಸಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಬೇಳೂರು ಕ್ಷೇತ್ರದ ಡಿ.ಎಸ್.ಪೊನ್ನಪ್ಪ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಸಜ್ಜಾಗಿದೆ.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ.ಡಿ.ರಮೇಶ್ ದಲಿತ ಜನಾಂಗಕ್ಕೆ ಸೇರಿದವರಾಗಿದ್ದು ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಲು ಸಹಕಾರ ನೀಡಬೇಕೆಂದು ಕಾಂಗ್ರೆಸ್ ಮುಖಂಡರು ಜೆಡಿಎಸ್ ನಾಯಕರಿಗೆ ಮನವಿ ಮಾಡಿದ್ದಾರೆ.

ಅಧ್ಯಕ್ಷ-ಉಪಾಧ್ಯಕ್ಷರ ಅವಧಿ ಐದು ವರ್ಷಕ್ಕೆ ಸೀಮಿತವಾಗಿರುವದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ತಲಾ 30 ತಿಂಗಳ ಅಧಿಕಾರಕ್ಕಾಗಿ ಒಳ ಒಪ್ಪಂದ ನಡೆಯುತ್ತಿದೆ. ಈ ಕುರಿತು ಈಗಾಗಲೇ ಜೆಡಿಎಸ್ ಮುಖಂಡ ಮಾಜಿ ಸಚಿವ ಜೀವಿಜಯ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದೆ. ಆದರೆ ಎರಡು ಪಕ್ಷಗಳು ಮೊದಲ ಅವಧಿಗೆ ಪಟ್ಟು ಹಿಡಿದಿರುವದರಿಂದ ಮುಂದಿನ ನಡೆ ತೀವ್ರ ಕುತೂಹಲ ಮೂಡಿಸಿದೆ.

ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಯಲ್ಲಿ ತಾ.9 ರಂದು ಬೆಳಗ್ಗೆ 10ರಿಂದ 12ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ನಂತರ ಅಗತ್ಯ ಬಿದ್ದರೆ ಚುನಾವಣೆ ಏರ್ಪಡಲಿದೆ. ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಜಿ.ಎಸ್. ಕೃಷ್ಣ ಕಾರ್ಯ ನಿರ್ವಹಿಸಲಿದ್ದಾರೆ.

ಆರ್‍ಎಂಸಿ ಸದಸ್ಯರುಗಳು ಪಕ್ಷದ ಚಿಹ್ನೆಯಿಂದ ಸ್ಪರ್ಧಿಸದ ಹಿನ್ನೆಲೆ ವಿಪ್ ನೀಡಲು ಸಾಧ್ಯವಿಲ್ಲ. ಮೂರೂ ಪಕ್ಷದ ಬೆಂಬಲಿತ ಸದಸ್ಯರು ಯಾರಿಗೆ ಬೇಕಾದರೂ ಬೆಂಬಲ ನೀಡುವ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಇಂದಿನ ಚುನಾವಣೆ ಇನ್ನಷ್ಟು ಕುತೂಹಲಕ್ಕೆಡೆ ಮಾಡಿದೆ.