ಕುಶಾಲನಗರ, ಫೆ. 8: ಕಾವೇರಿ ನದಿ ಒತ್ತುವರಿ ಹಾಗೂ ನದಿಗೆ ನೇರವಾಗಿ ಕಲುಷಿತ ನೀರು ಹರಿಸುತ್ತಿರುವ ಪ್ರಕರಣಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ಕ್ರಮಕೈಗೊಳ್ಳಲು ಕುಶಾಲನಗರ ನಗರಾಭಿವೃದ್ಧಿ ವ್ಯಾಪ್ತಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ವಿಶೇಷ ಸಭೆ ಕರೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕುಡಾ ಅಧ್ಯಕ್ಷ ಮಂಜುನಾಥ್ ಗುಂಡೂರಾವ್ ತಿಳಿಸಿದ್ದಾರೆ.

ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಗುಡ್ಡೆಹೊಸೂರು ವ್ಯಾಪ್ತಿಯ ಖಾಸಗಿ ರೆಸಾರ್ಟ್ ಒಂದಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ನದಿ ಒತ್ತುವರಿ ಮತ್ತು ಕಲುಷಿತ ನೀರು ನದಿಗೆ ಸೇರುತ್ತಿರುವ ಬಗ್ಗೆ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ನದಿ ಸಂರಕ್ಷಣೆಗಾಗಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಈ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳಲಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರ, ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು, ಕಂದಾಯ ಇಲಾಖೆ, ಪರಿಸರ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸದÀ್ಯದಲ್ಲಿಯೇ ಸಭೆ ಸೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಅಧಿಕಾರಿ ನಂದಕುಮಾರ್ ಈ ಸಂದರ್ಭ ತಿಳಿಸಿದರು.

ಕಾವೇರಿ ನಿಸರ್ಗಧಾಮದ ಬಳಿ ಖಾಸಗಿ ರೆಸಾರ್ಟ್ ಮಾಲೀಕರು ನದಿ ತಟಕ್ಕೆ ಮಣ್ಣು ಸುರಿದು ಒತ್ತುವರಿ ಮಾಡಿರುವದು, ನದಿಗೆ ಕಲುಷಿತ ನೀರು ಹರಿಯುತ್ತಿರುವದನ್ನು ಗಮನಿಸಿದ ಕುಡಾ ಅಧ್ಯಕ್ಷರು ಮತ್ತು ಅಧಿಕಾರಿಗಳು ಮಾಲೀಕರಲ್ಲಿ ಸಮಜಾಯಿಸಿಕೆ ಪಡೆದರಲ್ಲದೆ ನದಿಗೆ ಕಲುಷಿತ ನೀರು ಹರಿಯದಂತೆ ಎಚ್ಚರ ವಹಿಸುವಂತೆ ಸೂಚಿಸಿದರು. ರೆಸಾರ್ಟ್ ನಿರ್ಮಾಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರು.

ನದಿ ತಟದ ಅಭಿವೃದ್ಧಿಗೆ ಕುಡಾ ಅಧಿಕಾರಿಗಳು ಅನುಮತಿ ನೀಡಿರುವದಾಗಿ ತಿಳಿಸಿದ ಖಾಸಗಿ ರೆಸಾರ್ಟ್ ಮಾಲೀಕರು ಈ ಸಂದರ್ಭ ಸಮಜಾಯಿಸಿಕೆ ನೀಡಿದರು. ತನ್ನ ಜಾಗವನ್ನು ನದಿ ಒತ್ತುವರಿ ಮಾಡಿದೆಯೇ ಹೊರತು ತಾನು ನದಿ ಜಾಗವನ್ನು ಒತ್ತುವರಿ ಮಾಡಿಲ್ಲ ಎಂದು ಸ್ಥಳದಲ್ಲಿದ್ದ ಸುದ್ದಿಗಾರರಿಗೆ ಮಾಲೀಕರು ಸ್ಪಷ್ಠೀಕರಣ ನೀಡಿದರು.

ಈ ಸಂದರ್ಭ ಕುಡಾ ಸದಸ್ಯ ಕಾರ್ಯದರ್ಶಿ ರಾಜಶೇಖರ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕರಾದ ಎಂ.ಎನ್. ಚಂದ್ರಮೋಹನ್, ಪ್ರಮುಖರಾದ ಅಬ್ದುಲ್ ಖಾದರ್, ಪ್ರದೀಪ್ ಮತ್ತಿತರರು ಇದ್ದರು.