ಜನರಲ್ಲಿ ಕಾನೂನಿನ ಬಗ್ಗೆ ಅರಿವನ್ನು ಉಂಟು ಮಾಡುವದು, ಉಚಿತ ಕಾನೂನು ನೆರವು ಮತ್ತು ಸಲಹೆಯನ್ನು ಕೊಡುವದು, ಜನತಾ ನ್ಯಾಯಾಲಯಗಳ (ಲೋಕ ಅದಾಲತ್) ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಜನರಿಗೆ ತ್ವರಿತವಾಗಿ ನ್ಯಾಯ ದೊರಕಿಸಿಕೊಡುವದು. ಇವುಗಳೆಲ್ಲ ಕಾನೂನು ಸೆವೆಗಳ ಪ್ರಾಧಿಕಾರದ ಕರ್ತವ್ಯಗಳು.

ಉಚಿತ ಸೇವೆಗಳು : ಕಾನೂನು ಸೇವೆ, ಕಾನೂನು ಸಲಹೆ, ರಾಜೀ ಸಂದಾನ, ಜನತಾ ನ್ಯಾಯಾಲಯಗಳ ಮೂಲಕ ನ್ಯಾಯಾಲಯದಲ್ಲಿರುವ ಪ್ರಕರಣಗಳ ಇತ್ಯರ್ಥ, ಮಧ್ಯಸ್ಥಿಕೆ ಕೇಂದ್ರಗಳ ಮೂಲಕ ಸಂಧಾನ ವ್ಯವಸ್ಥೆ, ಪರ್ಯಾಯ ವ್ಯಾಜ್ಯ, ಪರಿಹಾರದ ವ್ಯವಸ್ಥೆ, ವ್ಯಾಜ್ಯ ಪೂರ್ವ ಸಮಸ್ಯೆಗಳ ಪರಿಹಾರ ಕಾನೂನು ಸಾಕ್ಷರತೆ, ಖಾಯಂ ಜನತಾ ಅದಾಲತ್ (ಪಿ. ಎಲ್.ಎ) ಮೂಲಕ ಕೆಲವು ಸಾರ್ವಜನಿಕ ಉಪಯುಕ್ತ ಸೇವೆಗಳ ವಿವಾದಗಳ ಇತ್ಯರ್ಥ ಇವೆಲ್ಲವೂ ಉಚಿತವಾಗಿರುತ್ತದೆ.

ಉಚಿತ ಸೌಲಭ್ಯಕ್ಕೆ ಅರ್ಹರು : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು, ಮಹಿಳೆಯರು ಮತ್ತು ಮಕ್ಕಳು, ಕಾರ್ಖಾನೆಯ ಕಾರ್ಮಿಕರು, ಗುಂಪು ಘರ್ಷಣೆ, ಗಲಭೆ, ಪ್ರವಾಹ, ಕ್ಷಾಮ, ಭೂಕಂಪ ಕೈಗಾರಿಕಾ ವಿನಾಶ, ಮುಂತಾದವುಗಳಿಗೆ ತುತ್ತಾದರು. ಮತೀಯ ಕಾರಣಕ್ಕೆ, ದೌರ್ಜನ್ಯಕ್ಕೆ ಬಲಿಯಾದರು. ಮಾನಸಿಕ ಅಥವಾ ಬೇರೆ ಯಾವದೇ ನ್ಯೂನತೆ ಹೊಂದಿರುವವರು, ರಕ್ಷಣಾ ಗೃಹ ಮನೋ ರೋಗಿಗಳ ಆಸ್ಪತ್ರೆ ಮುಂತಾದವುಗಳಲ್ಲಿ ಅಭಿರಕ್ಷೆಯಲ್ಲಿರುವವರು ದೈಹಿಕ ವ್ಯಾಪಾರ ಅಥವಾ ಜೀತಕ್ಕೊಳ ಗಾದವರು. ವಾರ್ಷಿಕ ಆದಾಯ ಒಂದು ಲಕ್ಷಕ್ಕಿಂತ ಕಡಿಮೆ ಇರುವ ಎಲ್ಲಾ ವರ್ಗದ ಜನರು ಉಚಿತ ಕಾನೂನು ಸಲಹೆ ನೆರವು ಪಡೆಯಲು ಅರ್ಹರು.

ಸರ್ವೋಚ್ಚ ನ್ಯಾಯಾಲಯದಲ್ಲಿ ಕಾನೂನು ಸೇವೆಯನ್ನು ಉಚಿತವಾಗಿ ಪಡೆಯಲು ವಾರ್ಷಿಕ ಆದಾಯ ಒಂದು ಲಕ್ಷದ ಇಪ್ಪತ್ತೈದು ಸಾವಿರಕ್ಕಿಂತ ಕಡಿಮೆ ಇರಬೇಕು. ಈ ಮಿತಿಯ ಎಲ್ಲಾ ವರ್ಗದ ಜನತೆ ಉಚಿತ ಕಾನೂನು ಸೇವೆ ಪಡೆಯಲು ಅರ್ಹರಾಗಿರುತ್ತಾರೆ.

ಉಚಿತ ಕಾನೂನು ನೆರವಿನಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿ ದಂತೆ ವಕೀಲರ ಶುಲ್ಕ, ನ್ಯಾಯಾಲಯದ ಶುಲ್ಕ ಮತ್ತು ಇತರ ವೆಚ್ಚವನ್ನು ಸಂಪೂರ್ಣವಾಗಿ ರಾಜ್ಯ ಪ್ರಾಧಿಕಾರವೇ ನೀಡುತ್ತದೆ. ಜನಸಾಮಾನ್ಯರ ಇತ್ತೀಚಿನ ಬದುಕಿನಲ್ಲಿ ಒಂದಲ್ಲ ಒಂದು ರೀತಿ ಕಾನೂನು ತೊಡಕುಗಳು ಎದುರಾಗಿ, ಅವರು ಗೊಂದಲಕ್ಕೀಡಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಗೊಂದಲವನ್ನು ನಿವಾರಿಸಿ ಜನ ಸಾಮಾನ್ಯರ ಬದುಕನ್ನು ಸೌಹಾರ್ದಯುತವಾಗಿ ನಡೆಸುವ ಉದ್ದೇಶದಿಂದ ಉಚಿತ ಕಾನೂನು ಸಲಹಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಉಚಿತ ಕಾನೂನು ಸಲಹಾ ಕೇಂದ್ರಗಳಿವೆ. ಜಿಲ್ಲಾ ಕೇಂದ್ರದಲ್ಲೂ, ತಾಲೂಕು ಕೇಂದ್ರಗಳಲ್ಲೂ ಪ್ರತಿ ಕೆಲಸದ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5-45 ರವರೆಗೆ ಉಚಿತ ಕಾನೂನು ಸಲಹೆ ಪಡೆಯಲು ಅವಕಾಶವಿದೆ.

ಜಿಲ್ಲೆಯ ಹಾಗೂ ತಾಲೂಕು ಕೇಂದ್ರಗಳಲ್ಲಿರುವ ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದಲ್ಲೂ ಉಚಿತ ಕಾನೂನು ಸಲಹಾ ಕೇಂದ್ರವಿದ್ದು, ಪ್ರತಿ ಬುಧವಾರ ಮತ್ತು ಶನಿವಾರ ಮಧ್ಯಾಹ್ನ 3 ರಿಂದ ಸಂಜೆ 5-30ರವರೆಗೆ ಕಾನೂನು ಸೇವೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಈ ಸೇವೆಯನ್ನು ಪಡೆಯಲಿಚ್ಚಿಸು ವವರು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. (ಅರ್ಜಿಗೆ ಯಾವದೇ ಶುಲ್ಕವಿಲ್ಲ) ನಿಮ್ಮ ಜಾತಿ ಅಥವಾ ಆದಾಯಕ್ಕೆ ಸಂಬಂಧಿಸಿದ ಸರ್ಟಿಫಿಕೇಟ್ ಬೇಕಾಗಿಲ್ಲ. ಬದಲಿಗೆ ಆ ಕುರಿತ ಒಂದು ಪ್ರಮಾಣ ಪತ್ರ (ಅಫಿಡವಿಟ್) ಸಲ್ಲಿಸಿದರೆ ಸಾಕಾಗುತ್ತದೆ. ಹೆಚ್ಚಿನ ಮಾಹಿತಿಗೆ ಉಚಿತ ಕರೆಸಂಖ್ಯೆ 1800-42590900 ಕೊಡಗು ಜಿಲ್ಲಾ ಕಾನೂನುಸೇವೆಗಳ ಪ್ರಾಧಿಕಾರದ ಕಚೇರಿ 08272-225373

ಸಂಗ್ರಹ : ಸಲೀನಾ ಅಶ್ರಫ್ ಪಾಲಿಬೆಟ್ಟ.