ಮಡಿಕೇರಿ, ಫೆ. 8: ಕೊಂಡಂಗೇರಿಯ ಶಿಫಾ ಕೇಂದ್ರ ಮುಸಾಫಿರ್ ಖಾನಾದಲ್ಲಿ ಪ್ರತಿ ತಿಂಗಳ ಅಸ್ಮಾವುಲ್ಹುಸ್ನಾ ಧಾರ್ಮಿಕ ಕಾರ್ಯಕ್ರಮ ಶಿಫಾ ಕೇಂದ್ರದ ಮುಖ್ಯಸ್ಥ ಸಿ.ಬಿ. ಮುಹಮ್ಮದ್ ಹಸ್ರತ್ ಬಾಬಾ ಅವರ ನೇತೃತ್ವದಲ್ಲಿ ನೆರವೇರಿತು.ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕಣ್ಣೂರು ಮಯ್ಯಿಲ್ನ ಧರ್ಮಗುರು ಉವೈಸ್ ಅಶ್ರಫಿ, ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮವು ನಮ್ಮನ್ನು ರಕ್ಷಿಸುತ್ತದೆ ಎಂದರಲ್ಲದೆ, ಮಾಸಿಕ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವದರಿಂದ ಮಾನಸಿಕ ಅಸ್ವಸ್ಥತೆಗೆ ಪರಿಹಾರ ದೊರಕುತ್ತದೆ ಎಂದರು.
ಭಕ್ತಿ ನಿರ್ಭರವಾದ ಮಜ್ಲಿಸುನ್ನೂರ್ ಕಾರ್ಯಕ್ರಮದಲ್ಲಿ ಸ್ಥಳೀಯರಲ್ಲದೇ ಹೊರ ಊರುಗಳಿಂದಲೂ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ನೆರೆದಿದ್ದರು. ಶಿಫಾ ಕೇಂದ್ರದ ವಕ್ತಾರ ಪಿ.ಎಂ. ಇಸ್ಮಾಯಿಲ್ ದಾರಿಮಿ ಮಾತನಾಡಿ, ಪ್ರತಿ ಆಂಗ್ರ ಮಾಸದ ಮೊದಲ ಭಾನುವಾರ ಸಂಜೆ ಶಿಫಾ ಕೇಂದ್ರದಲ್ಲಿ ಅಸ್ಮಾವುಲ್ಹುಸ್ನಾ ಆಧ್ಯಾತ್ಮಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಸ್ಥಳೀಯರಾದ ಸಲಾಂ ದಾರಿಮಿ, ಪಿ.ಕೆ. ಮೊೈದು, ಮುಸ್ತಫಾ ಮುಸ್ಲಿಯಾರ್ ತಳಿಪರಂಬು, ಮಜೀದ್ ಫೈಜಿ ಬೇಗೂರು, ಅಬ್ದುಲ್ ಅಜೀಜ್ ಚಾವಕ್ಕಾಡ್ ಉಪಸ್ಥಿತರಿದ್ದರು. ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.