ರೈಲು ಅಪಘಾತಗಳ ಹಿಂದೆ ಸ್ಫೋಟ ಸಂಚು
ನವದೆಹಲಿ, ಫೆ. 8: ಕಳೆದ ಕೆಲ ದಿನಗಳಲ್ಲಿ ಅಸಹಜ ಚಟುವಟಿಕೆಗಳು ನಡೆದ ಬಗ್ಗೆ ವರದಿಯಾಗಿದ್ದು, ಇದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸರ್ಕಾರ, ರೈಲ್ವೆ ಹಳಿಯನ್ನು ನಾಶಗೊಳಿಸುವ ಮತ್ತು ಸ್ಫೋಟಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸಚಿವ ಸುರೇಶ್ ಪ್ರಭು ಹೇಳಿದ್ದಾರೆ. ಲೋಕಸಭೆಯಲ್ಲಿಂದು ಪ್ರಶ್ನೆಗೆ ಉತ್ತರಿಸಿದ ಅವರು, ಏಳು ಸ್ಫೋಟ ಪ್ರಯತ್ನಗಳು ಮತ್ತು ಮೂರು ಕಡೆಗಳಲ್ಲಿ ರೈಲ್ವೆ ಹಳಿಗಳನ್ನು ನಾಶಗೊಳಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಹಳಿಗಳನ್ನು ನಾಶಗೊಳಿಸಿದ ಘಟನೆಗೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಈಗಾಗಲೇ ತನಿಖೆ ನಡೆಸುತ್ತಿದೆ. ಕೆಲವು ಅಕ್ರಮ ಚಟುವಟಿಕೆಗಳನ್ನು ರೈಲ್ವೆ ಸಿಬ್ಬಂದಿಯ ಮುನ್ನೆಚ್ಚರಿಕೆಯಿಂದ ತಪ್ಪಿಸಲಾಗಿದೆ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಉತ್ತರಿಸಿದರು. ಇತ್ತೀಚಿನ ರೈಲು ಹಳಿಗಳ ನಾಶದ ನಂತರ ಜಪಾನ್, ದಕ್ಷಿಣ ಕೊರಿಯಾ ಮತ್ತು ಇಟೆಲಿಗಳಿಂದ ತಂಡಗಳು ಆಗಮಿಸಿವೆ. ಪ್ರಧಾನಿಯವರ ರಾಜತಾಂತ್ರಿಕ ಕುಶಲತೆಗೆ ಧನ್ಯವಾದಗಳು ಎಂದರು. ತಂತ್ರಜ್ಞಾನದ ಹೊರತಾಗಿ ರೈಲ್ವೆ ಸುರಕ್ಷಾ ಪಡೆಯನ್ನು ನ್ಯಾಯ ತಂತ್ರ ವಿಕಸನಕ್ಕೆ ಕೋರಲಾಗಿದೆ ಎಂದು ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.
ತಾ. 20 ರ ನಂತರ ವಾರಕ್ಕೆ 50 ಸಾವಿರ ಡ್ರಾ ಮಾಡಬಹುದು
ನವದೆಹಲಿ, ಫೆ. 8: ಸಾಮಾನ್ಯ ಜನರಿಗೆ ಕೊನೆಗೂ ಅನುಕೂಲ ಮಾಡಿಕೊಟ್ಟಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಮಾ. 13 ರಿಂದ ಉಳಿತಾಯ ಖಾತೆಯಿಂದ ನಗದು ಹಿಂಪಡೆಯಲು ಯಾವದೇ ಮಿತಿಯಿಲ್ಲ ಎಂದು ಹೇಳಿದೆ. ತಾ. 20 ರ ನಂತರ ವಾರಕ್ಕೆ ಪ್ರಸ್ತುತ ಇರುವ 24,000 ರೂಪಾಯಿ ಹಿಂಪಡೆಯುವ ಮಿತಿಯನ್ನು 50,000ಕ್ಕೆ ವಿಸ್ತರಿಸಲಾಗಿದೆ. ಆರ್ಬಿಐ ತನ್ನ ಹಣಕಾಸು ವರ್ಷದ ಮೊದಲ ಎರಡು ತಿಂಗಳ ವಿತ್ತೀಯ ನೀತಿಯನ್ನು ಇಂದು ಪ್ರಕಟಿಸಿದ್ದು, ಬಡ್ಡಿ ದರದ ಯಥಾಸ್ಥಿತಿ ಕಾಯ್ದುಕೊಂಡಿದೆ. ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ನೇತೃತ್ವದ 6 ಸದಸ್ಯರನ್ನೊಳಗೊಂಡ ಹಣಕಾಸು ನೀತಿ ಸಮಿತಿ, ರೆಪೆÇ ಹಾಗೂ ರಿವರ್ಸ್ ರೆಪೆÇ ದರ ಬದಲಾಯಿಸದೆ ಶೇ. 6.25 ಮತ್ತು ರಿವರ್ಸ್ ರೆಪೆÇ ದರವನ್ನು ಶೇ. 5.75 ರಷ್ಟು ಕಾಯ್ದುಕೊಂಡಿದೆ. ಹಳೆಯ 500 ಮತ್ತು 1000ದ ನೋಟುಗಳ ಬಳಕೆ ನಿಷೇಧಿಸಿದ ನಂತರ ಆರ್ಬಿಐ ಪ್ರಕಟಿಸುತ್ತಿರುವ ಎರಡನೇ ವಿತ್ತೀಯ ನೀತಿಯಾಗಿದೆ. ನ. 8 ರಂದು ಹಳೆಯ 500 ಮತ್ತು 1000ದ ನೋಟುಗಳ ಚಲಾವಣೆಯನ್ನು ರದ್ದು ಮಾಡಿದ ನಂತರ ಎಟಿಎಂ ಮತ್ತು ಬ್ಯಾಂಕ್ನಲ್ಲಿ ಉಳಿತಾಯ ಖಾತೆಗಳಿಂದ ಹಣ ವಿತ್ ಡ್ರಾ ಮಾಡಲು ಮಿತಿ ಹೇರಲಾಗಿತ್ತು. ಹಳೆಯ 500 ಮತ್ತು 1000ದ ನೋಟುಗಳನ್ನು ಬ್ಯಾಂಕುಗಳಿಗೆ ಜಮಾ ಮಾಡಲು ಡಿಸೆಂಬರ್ವರೆಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ತೆರಿಗೆ ವಂಚನೆಯಿಂದ ತಪ್ಪಿಸಲು ಎರಡೂವರೆ ಲಕ್ಷಕ್ಕೂ ಅಧಿಕ ಹಣ ಠೇವಣಿಯಿಟ್ಟವರ ಖಾತೆಗಳನ್ನು ಪರೀಕ್ಷಿಸಲಾಗುತ್ತಿತ್ತು.
ರಾಜೀನಾಮೆ ಹಿಂಪಡೆಯಲು ಸಿದ್ಧರಾದ ಪನ್ನೀರ್ ಸೆಲ್ವಂ
ಚೆನ್ನೈ, ಫೆ. 8: ತಮಿಳುನಾಡು ರಾಜಕೀಯದಲ್ಲಿ ಅತಂತ್ರ ಪರಿಸ್ಥಿತಿ ಎದುರಾಗಿದ್ದು, ಶಶಿಕಲಾ ವಿರುದ್ಧ ಬಂಡಾಯವೆದ್ದಿದ್ದ ತಮಿಳುನಾಡು ರಾಜ್ಯ ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ರಾಜೀನಾಮೆ ಹಿಂಪಡೆಯಲು ಸಿದ್ಧನಿದ್ದೇನೆಂದು ಬುಧವಾರ ಹೇಳಿದ್ದಾರೆ. ಎಐಎಡಿಎಂಕೆ ಪ್ರಧಾನ ಕಚೇರಿಯಲ್ಲಿ ಪಕ್ಷದ ಶಾಸಕರ ಸಭೆ ಪ್ರಗತಿಯಲ್ಲಿರುವಾಗಲೇ ಪತ್ರಿಕಾಗೋಷ್ಟಿಯನ್ನು ನಡೆಸಿ ಪನ್ನೀರ್ ಸೆಲ್ವಂ ಅವರು ಹೇಳಿಕೆ ನೀಡಿದ್ದಾರೆ. ರಾಜ್ಯದ ಪರಿಸ್ಥಿತಿ ಬಿಗಡಾಯಿಸಿದ್ದೇ ಆದರೆ, ರಾಜೀನಾಮೆ ಹಿಂಪಡೆಯಲು ನಾನು ಸಿದ್ಧನಿದ್ದೇನೆ. ‘ಅಮ್ಮ’ ಜಯಲಲಿತಾ ಅವರ ಹಾದಿಯಲ್ಲೇ ನಡೆದು ಬಹುಮತ ಸಾಬೀತು ಪಡಿಸುತ್ತೇನೆಂದು ಹೇಳಿದ್ದಾರೆ. ನಮ್ಮೆಲ್ಲರಿಗೂ ದೇವರಂತೆ ಇದ್ದ ಜಯಲಲಿತಾ ಸಾವಿನ ಕುರಿತು ತನಿಖೆಗೆ ಆದೇಶಿಸುವೆ. ಜಯಲಲಿತಾ ಅವರ ಸಾವಿನ ಕುರಿತು ತನಿಖೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸುತ್ತೇನೆ. ಅಮ್ಮ ಅವರು ತೋರಿಸಿದ್ದ ಹಾದಿಯಲ್ಲೇ ನಡೆಯುತ್ತೇನೆ. ಎಐಎಡಿಎಂಕೆ ಪಕ್ಷದ ವಿರುದ್ದ ಎಲ್ಲಿಯೂ ಮಾತನಾಡಿಲ್ಲ. ಎಂಜಿಆರ್ ಹಾಗೂ ಅಮ್ಮನ ಕನಸಿನಂತೆಯೇ ಪಕ್ಷ ಕಾರ್ಯನಿರ್ವಹಿಸಲಿದೆ. ಬಲವಂತದಿಂದ ನನ್ನನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದಾರೆ. ಪಕ್ಷದ ಸದಸ್ಯರು ರಾಜೀನಾಮೆ ಹಿಂಪಡೆಯುವಂತೆ ಕೇಳಿದರೆ, ರಾಜೀನಾಮೆ ಹಿಂಪಡೆಯಲು ಸಿದ್ಧನಿದ್ದೇನೆ. ಜಯಲಲಿತಾ ಅವರು 16 ವರ್ಷ ಮುಖ್ಯಮಂತ್ರಿಯಾಗಿದ್ದರು. ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಎಲ್ಲವೂ ಅಮ್ಮನ ಆಶೀರ್ವಾದ. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವೆ ಎಂದು ತಿಳಿಸಿದ್ದಾರೆ.
ಪಾಕ್ನಲ್ಲಿ ಪ್ರಬಲ ಭೂಕಂಪನ
ಕರಾಚಿ, ಫೆ. 8: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.6 ರಷ್ಟು ತೀವ್ರತೆ ದಾಖಲಾಗಿದೆ. ಬೆಳಿಗಿನ ಜಾವ 3.3 ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಬಲೂಚಿಸ್ತಾನದ ಪಾಸ್ನಿ, ತುರ್ಬಾತ್, ಗ್ವದಾರ್ ಸೇರಿದಂತೆ ಹಲವೆಡೆ ಭೂಕಂಪ ಸಂಭವಿಸಿರುವದಾಗಿ ವರದಿಗಳು ತಿಳಿಸಿವೆ. ಭೂಕಂಪದ ಕೇಂದ್ರ ಬಿಂದು ನೈಋತ್ಯ ಪಾಕಿಸ್ತಾನದಿಂದ 23 ಕಿ.ಮೀ. ದೂರದಲ್ಲಿರುವ ಪಾಸ್ನಿ ಎಂಬ ನಗರದಲ್ಲಿ ಕಂಡು ಬಂದಿದೆ ಎಂದು ಯುಎಸ್ ಭೂ ಸರ್ವೇಕ್ಷಣ ವಿಭಾಗ ಹೇಳಿದೆ. ಭೂಕಂಪದಿಂದ ಯಾವದೇ ಸಾವು ನೋವುಗಳು ಸಂಭವಿಸಿರುವ ಕುರಿತಂತೆ ವರದಿಗಳಾಗಿಲ್ಲ.
ಭೀಮ್ ಆ್ಯಪ್ ಮೂಲಕ ರೂ. 361 ಕೋಟಿ ವಹಿವಾಟು
ನವದೆಹಲಿ, ಫೆ. 8: ಭಾರತ ಸರ್ಕಾರದ ಭೀಮ್ ಆ್ಯಪ್ ಮೂಲಕ ಗ್ರಾಹಕರು ರೂ. 361 ಕೋಟಿ ವಹಿವಾಟು ನಡೆಸಿದ್ದಾರೆ ಎಂದು ಯೋಜನಾ ಖಾತೆ ರಾಜ್ಯ ಸಚಿವ ರಾವ್ ಇಂದ್ರಜಿತ್ ಸಿಂಗ್ ಬುಧವಾರ ಲೋಕಸಭೆಯಲ್ಲಿ ತಿಳಿಸಿದರು. ನೋಟು ರದ್ದತಿ ನಂತರ ಭೀಮ್ ಆ್ಯಪ್ನ್ನು ನಗದು ರಹಿತ ವಹಿವಾಟು ನಡೆಸಲು ಬಿಡುಗಡೆಗೊಳಿಸಲಾಗಿತ್ತು. ಈ ಆ್ಯಪ್ ಮೂಲಕ ವಿವಿಧ ಬ್ಯಾಂಕುಗಳ ವಹಿವಾಟ ನಡೆಸಲು ಒಂದೇ ಸೂರಿನಡಿ ವೇದಿಕೆ ಕಲ್ಪಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ 2016ರ ಡಿ. 30 ರಂದು ಭೀಮ್ ಆ್ಯಪ್ ಬಿಡುಗಡೆ ಮಾಡಿದ್ದರು. ಭೀಮ್ ಭೀಮ್ ಆ್ಯಪ್ಗೂ ಮೊದಲು ಸಾರ್ವಜನಿಕರು ಆನ್ಲೈನ್ ವಹಿವಾಟು ನಡೆಸಲು ಬೇರೆ ಬೇರೆ ಮೂಲಗಳನ್ನು ಆಧರಿಸಿದ್ದರು. ಪ್ರಶ್ನೋತ್ತರ ಕಲಾಪದಲ್ಲಿ ವಿಷಯ ಮಂಡಿಸಿದ ಸಿಂಗ್, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನಗದು ರಹಿತ ವಹಿವಾಟು ಶೇ. 90 ರಷ್ಟು ಪ್ರಗತಿ ಹೊಂದಿದೆ. ಆದರೆ ಭಾರತದಲ್ಲಿ ಅದರ ಪ್ರಮಾಣ ಶೇ. 3 ರಷ್ಟಿದೆ ಎಂದಿದ್ದಾರೆ. ಕ್ಯಾಶ್ ಲೆಸ್ ವಹಿವಾಟಿನ ಪ್ರಮಾಣ ಶೇ. 22 ರಷ್ಟು ಪ್ರಗತಿ ಕಂಡರೆ ಕಾಳಧನದ ಮೇಲೆ ಹಿಡಿತ ಸಾಧಿಸಿ ದೇಶದ ಆರ್ಥಿಕತೆ ಸುಧಾರಿಸಬಹುದು ಎಂದಿದ್ದಾರೆ.