ಮಡಿಕೇರಿ, ಫೆ. 8: ಮಕ್ಕಳಲ್ಲಿ ಬರುವ ರೋಗವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ದಡಾರ ರುಬೆಲ್ಲಾ ಲಸಿಕೆಯನ್ನು 9 ತಿಂಗಳಿಂದ 15 ವರ್ಷದೊಳಗಿನ ಮಕ್ಕಳಿಗೆ ಹಾಕಿಸುವದು ಅತ್ಯಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಮಂಡಳಿ ನಿರ್ದೇಶಕರಾದ ಕೆ.ಎ.ಯಾಕುಬ್ ಅವರು ಮನವಿ ಮಾಡಿದ್ದಾರೆ.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ದಡಾರ-ರುಬೆಲ್ಲಾ ರೋಗದಿಂದ ತೀವ್ರವಾದ ಶ್ವಾಸಕೋಶದ ಸೋಂಕು, ಜ್ವರ, ಕೆಮ್ಮು, ಹೀಗೆ ನಾನಾ ರೀತಿಯ ರೋಗಗಳು ಬರುವ ಸಾಧ್ಯತೆ ಇದ್ದು, ಇವುಗಳನ್ನು ನಿಯಂತ್ರಣ ಮಾಡಲು ದಡಾರ ರುಬೆಲ್ಲಾ ಲಸಿಕೆಯನ್ನು ಕಡ್ಡಾಯವಾಗಿ ಮಕ್ಕಳಿಗೆ ಹಾಕಿಸಬೇಕಿದೆ ಎಂದು ಅವರು ಹೇಳಿದರು.

ವಕ್ಫ್ ಮಂಡಳಿ ಜಿಲ್ಲಾ ಕಾರ್ಯದರ್ಶಿ ಸಾದತ್ ಹಸೀನ್ ಅವರು ಮಾತನಾಡಿ ಯಾವದೇ ಅಪಪ್ರಚಾರ, ವದಂತಿಗಳಿಗೆ ಕಿವಿಗೊಡದೆ 9 ತಿಂಗಳಿನಿಂದ 15 ವರ್ಷದೊಳಗಿನ ಮಕ್ಕಳಿಗೆ ದಡಾರ ರುಬೆಲ್ಲಾ ಲಸಿಕೆ ಹಾಕಿಸುವಂತೆ ಮನವಿ ಮಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಒ.ಆರ್.ಶ್ರೀರಂಗಪ್ಪ ಅವರು ಮಾತನಾಡಿ ಫೆಬ್ರವರಿ, 28 ರವರೆಗೆ ದಡಾರ ರುಬೆಲ್ಲಾ ಲಸಿಕಾ ಅಭಿಯಾನ ನಡೆಯಲಿದ್ದು, 9 ತಿಂಗಳಿಂದ 15 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಲು ಸಹಕರಿಸುವಂತೆ ಧಾರ್ಮಿಕ ಮುಖಂಡರಲ್ಲಿ ಕೋರಿದರು.

ಧಾರ್ಮಿಕ ಮುಖಂಡರಾದ ಹರೀಫ್, ತಮ್ಲಿಕ್ ಸಾಧಿಕ್, ಕರೀಂ ಮುಸ್ಲಿಯಾರ್, ಹನೀಫ್ ಮುಸ್ಲಿಯಾರ್, ಅಭಿಯಾನದ ಜಿಲ್ಲಾ ನೋಡೆಲ್ ಅಧಿಕಾರಿ ಪ್ರಕಾಶ್ ಇತರರು ಇದ್ದರು.