ಮಡಿಕೇರಿ, ಫೆ. 8: ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಪದ್ಮಶ್ರಿ ಗಿರೀಶ್ ಭಾರದ್ವಾಜ್ ಮತ್ತು ಎನ್‍ಸಿಸಿ ತಂಡದ ನಾಯಕಿ ಐಶ್ವರ್ಯ ದೇಚಮ್ಮ ಅವರನ್ನು ಸನ್ಮಾನಿಸಲಾಯಿತು.

ಮಾತೆ ಕಾವೇರಿಯ ಆಶೀರ್ವಾದದಿಂದ ಕೊಡಗಿನಿಂದಲೇ ಪ್ರಥಮ ತೂಗು ಸೇತುವೆ ನಿರ್ಮಾಣ ಆರಂಭಿಸಿ 127 ಸೇತುವೆ ನಿರ್ಮಾಣ ಮಾಡುವ ಶಕ್ತಿ ಬಂದಿತೆಂದು ಸನ್ಮಾನ ಸ್ವೀಕರಿಸಿದ ಗಿರೀಶ್ ಭಾರದ್ವಾಜ್ ನುಡಿದರು. ಸನ್ಮಾನ ಸ್ವೀಕರಿಸಿದ ಐಶ್ವರ್ಯ ದೇಚಮ್ಮ ಎನ್‍ಸಿಸಿ ತಂಡದ ನಾಯಕಿಯಾಗಿ ಗಣರಾಜ್ಯೋತ್ಸವ ದಿನದಂದು ದೆಹಲಿಯ ಮೈದಾನದಲ್ಲಿ ಹೆಜ್ಜೆ ಹಾಕಿದಾಗ ಭಾರತದ ಹಲವು ದೇಶಾಭಿಮಾನಿಗಳು ತುಳಿದದ್ದು ಅದೇ ನೆಲ ಎಂಬ ಭಾವನೆ ಪುಳಕ ತಂದಿತು ಎಂದರು.

ಸನ್ಮಾನ ಮಾಡಿದ ರೋಟರಿ ಜಿಲ್ಲೆ 3181ರ ಮುಂದಿನ ಸಾಲಿನ ಗವರ್ನರ್ ಸುರೇಶ್ ಚೆಂಗಪ್ಪ ಅವರು ಮಾತನಾಡಿ ರೋಟರಿಯ ವಿಸ್ತøತ ಸೇವೆ ಸಮಾಜದಲ್ಲಿರುವ ಕಂದಕಗಳನ್ನು ಮುಚ್ಚಿ ಸೇತುವೆಯಂತೆ ಕೆಲಸ ಮಾಡುತ್ತಿದೆ ಎಂದರು.

ವಲಯ ಆರರ ಎಲ್ಲ ರೋಟರಿ ಅಧ್ಯಕ್ಷರುಗಳು ನೆರೆದಿದ್ದ ಸಭೆಯಲ್ಲಿ ವಿದೇಶದಿಂದ ಬಂದಿರುವ ಅಧ್ಯಯನ ತಂಡದವರು ಭಾಗವಹಿಸಿ ಅನುಭವ ಹಂಚಿಕೊಂಡರು. ಪತ್ರಿಕೋದ್ಯಮ, ಸೇನೆ, ವಿದ್ಯಾಕ್ಷೇತ್ರ ಹಾಗೂ ಇತರ ವಿಚಾರಗಳ ಕುರಿತು ಮಾತನಾಡಿದರು. ತಂಡದ ನಾಯಕಿ ಕ್ಲಾಡಿನ್ ಹೆಸ್ಮರ್ ಹುಸಾೈನಿ, ನೀನಾ ಗಿಯನೋಟಿ, ಸುಜಾನೆ ಡಿಲಾನೆ, ಸಾರಾ ಮರ್ಚಂಳ್ ಮತ್ತು ಅಲಿ ಮೋರಿಸ್ ‘ನೀರ ಬಿಟ್ಟು ನೆಲದ ಮೇಲೆ ಬಂಡಿ ಹೋಗದು’ ಕನ್ನಡ ಹಾಡನ್ನು ಗುಂಪಿನಲ್ಲಿ ಹಾಡಿ ನೆರದಿದ್ದವರನ್ನು ರಂಜಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೇಶವ ಪ್ರಸಾದ್ ಮುಳಿಯ ರೋಟರಿ ಬಾವುಟ ಬದಲಿಸಿಕೊಂಡರು. ಆರಂಭದಲ್ಲಿ ಮಾತನಾಡಿದ ಸ್ಥಾಪಕಾಧ್ಯಕ್ಷ ಬಿ.ಜಿ. ಅನಂತಶಯನ ಜೀವನದ ಸುಖ-ದುಃಖಗಳನ್ನು ಎರಡೂ ಅಸ್ತಿರ-ಬದಲಾಗುವಂತವು ಎಂದರು. ಮುಂದಿನ ಸಾಲಿನ ಅಧ್ಯಕ್ಷ ಅನಿಲ್ ಎಚ್.ಟಿ. ಸನ್ಮಾನಿತರ ಪರಿಚಯ ಮಾಡಿದರು.

ವೇದಿಕೆಯಲ್ಲಿ ಇತರೆಡೆಯ ರೋಟರಿ ಅಧ್ಯಕ್ಷರುಗಳಾದ ನರೇಂದ್ರ, ಭರತ್, ಚೆಂಗಪ್ಪ, ಡಾ. ಮೋಹನ್ ಅಪ್ಪಾಜಿ ಮತ್ತು ಇನ್ನರ್ ವೀಲ್ ಅಧ್ಯಕ್ಷೆ ನಮಿತಾ ರೈ ಉಪಸ್ಥಿತರಿದ್ದರು. ಕಾರ್ಯದರ್ಶಿ ಡಾ. ನವೀನ್ ವಂದಿಸಿದರು.