ಹೌದು ಕೊಹ್ಲಿ ಈ ಹಿಂದೆ ಭಾರತ ತಂಡಕ್ಕೆ ನಾಯಕನಾಗಿ ಮಹತ್ವದ ಜಯಗಳನ್ನು ತಂದುಕೊಟ್ಟರೂ, ಆತ ಇನ್ನೂ ಪರಿಪೂರ್ಣ ನಾಯಕನೆಂದು ಅನ್ನಿಸಿರಲಿಲ್ಲ. ಕಾರಣ ಟಿ-20ಯಲ್ಲಿ ನಾಯಕ ನಾಗಿದ್ದ ಧೋನಿ ಭಾರತವನ್ನು ಯಶಸ್ವಿ ಯಾಗೇ ಮುನ್ನಡೆಸುತ್ತಿದ್ದರು. ಆದರೆ, ಧೋನಿ ಟಿ-20, ಏಕದಿನ ನಾಯಕತ್ವವನ್ನು ಬಿಟ್ಟ ನಂತರ ಇದೀಗ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೂರು ಪ್ರಕಾರದ ಕ್ರಿಕೆಟ್‍ನಲ್ಲೂ ನಾಯಕನಾಗಿ ತನ್ನ ತಾಕತ್ತನ್ನು ತೋರಿದ್ದಾರೆ. ಕೊಹ್ಲಿಯು ವಿರಾಟ ಸ್ವರೂಪವನ್ನು ಆಟದಿಂದ, ತನ್ನ ನಾಯಕನ ಸಾಧನೆಯಿಂದಲೇ ತೋರಿ, ಇಂಗ್ಲೆಂಡ್ ವಿರುದ್ಧದ ಮೂರು ಪ್ರಕಾರಗಳಲ್ಲೂ ನಾಯಕತ್ವ ವಹಿಸಿ, ಜವಾಬ್ದಾರಿಯನ್ನು ಸ್ಥಾನಕ್ಕೆ ತಕ್ಕಂತೆ ನಿರ್ವಹಿಸಿದ್ದಾರೆ. ಗಂಗೂಲಿ, ಅಜರುದ್ದಿನ್, ಕಪಿಲ್‍ದೇವ್, ರಾಹುಲ್ ದ್ರಾವಿಡ್, ಮಹೇಂದ್ರ ಸಿಂಗ್ ಧೋನಿಯಂತೆ ಯಶಸ್ಸಿನತ್ತ ಮುನ್ನುಗ್ಗುವ ಲಕ್ಷಣಗಳನ್ನು ತೋರಿದ್ದಾರೆ.

ಬಲಿಷ್ಠ ನಾಯಕನ ಅವಶ್ಯಕತೆ : ಯಾವದೇ ದೇಶದ ತಂಡವಿರಲಿ, ನಾಯಕನನ್ನು ಪ್ರತಿ ಆಟಗಾರನು ಗೌರವದಿಂದ ಕಾಣಬೇಕು. ತಂಡದೊಳಗೆ ಭಿನ್ನಾಭಿಪ್ರಾಯಗಳು ಇರಕೂಡದು. ತಂಡಕ್ಕೆ ಪ್ರತೀ ಆಟಗಾರನು ನೂರಕ್ಕೆ ನೂರರಷ್ಟು ತನ್ನ ಕೊಡುಗೆಯನ್ನು ನೀಡಬೇಕು. ನಿರ್ಧಾರಗಳಲ್ಲಿ ಗೊಂದಲವಿರಕೂಡದು, ನಾಯಕ ಇತರೆ ಆಟಗಾರರಿಗೆ ಹೋರಾಟಕ್ಕೆ ಮಾದರಿಯಾಗಬೇಕು. ಇದನ್ನು ಕೊಹ್ಲಿ ಇದುವರೆಗಿನ ನಾಯಕತ್ವದಲ್ಲಿ, ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಪಂದ್ಯ ಗಳಲ್ಲಿ ಸಾಧಿಸಿ ತೋರಿಸಿದ್ದಾರೆ.

ಆಕ್ರಮಣ ಶೀಲತೆ : ಇದು ಕೊಹ್ಲಿಗಿರುವ ದೊಡ್ಡ ಪ್ಲಸ್ ಪಾಯಿಂಟ್. ಏಕೆಂದರೆ ನಾಯಕನಾದವನಿಗೆ ತಾಳ್ಮೆ ಇರಬೇಕು ನಿಜ. ಹಾಗೆಂದು ಎಲ್ಲದಕ್ಕೂ ಅಂಕಣದಲ್ಲಿ ಮೌನ ವಹಿಸುವದು ತಪ್ಪು, ಆಕ್ರಮಣಶೀಲತೆ ಇತರೆ ಆಟಗಾರರಿಗೆ ಹೋರಾಟಕ್ಕೆ ಸ್ಪೂರ್ತಿ ತುಂಬುವದು. ಅಂಕಣದ ಪ್ರತೀ ಕ್ಷಣವು ಪ್ರತಿಕ್ರಿಯೆಗೆ, ಸ್ಪಂದನಕ್ಕೆ ಮುಖ್ಯವಾಗಿರುತ್ತದೆ. ಈ ಮಹಾ ಗುಣವೇ ಕೊಹ್ಲಿಯನ್ನು ಭವಿಷ್ಯ ದಲ್ಲಿ ಯಶಸ್ವಿ ನಾಯಕನಾಗುವತ್ತ ಕೊಂಡೊಯ್ಯಬಲ್ಲದು.

ತಂಡದ ಆಯ್ಕೆಯಲ್ಲಿ ಒಪ್ಪಿಗೆ : ಇಂಗ್ಲೆಂಡ್ ಸರಣಿ ಪಂದ್ಯಗಳಲ್ಲಿ ಆಯ್ಕೆದಾರರು ನಿಜಕ್ಕೂ ವಿಶೇಷ ಪ್ರಯೋಗಗಳನ್ನು ಮಾಡಿದ್ದಾರೆ. ಅದು ದೂರ ದೃಷ್ಟಿಯುಳ್ಳದ್ದು, ಜಾದವ್, ಕರಣ್‍ನಾಯರ್, ಚಾಹಲ್, ಹಾರ್ದಿಕ್ ಪಾಂಡ್ಯ ರವರನ್ನು ಆಯ್ಕೆ ಮಾಡಿ, ಹಳೇ ಹುಲಿಗಳಾದ ರೈನಾ, ಯುವರಾಜ್‍ಸಿಂಗ್, ಅಮಿತ್ ಮಿಶ್ರಾ, ಆಶೀಶ್ ನೆಹ್ರಾರಂತಹ ಆಟಗಾರರನ್ನು ಒಳತಂದರು. ಈ ಆಯ್ಕೆಗಳಲ್ಲೂ ಪಕ್ಕಾ ಯಶಸ್ಸನ್ನು ಸಾಧಿಸಿದವು. ಅಮೂಲ್ಯ ಕೊಡುಗೆಗಳು ಅವರಿಂದ ದೊರೆತವು. ಇದಕ್ಕೆ ಕೊಹ್ಲಿಯ ನಾಯಕತ್ವದ ಒಪ್ಪಿಗೆ, ಕೊಹ್ಲಿ ಅಭಿಪ್ರಾಯಗಳು ಮುಖ್ಯವಾಗಿದ್ದು, ಇಂತಹ ಮುಕ್ತ ದೃಷ್ಟಿ ನಾಯಕನಿಗೆ ಅಗತ್ಯ. ಆಟಗಾರರನ್ನು ಹುರಿದುಂಬಿಸುವಲ್ಲಿ ಕೊಹ್ಲಿ ಸದಾ ಮುಂದು.

ಹಿರಿಯ ಆಟಗಾರರ ಸಲಹೆ ಸ್ವೀಕಾರ : ಇದು ನಾಯಕನಿಗಿರ ಬೇಕಾದ ಬಹು ಮುಖ್ಯ ಗುಣ. ಇಂಗ್ಲೆಂಡ್ ಅಂತಹ ಶÀಕ್ತಿಯುತ ತಂಡದ ವಿರುದ್ಧ ಗೆಲುವಿಗೆ ಕೊಹ್ಲಿ ಹಿರಿಯ ಆಟಗಾರರ ಸಲಹೆಗಳನ್ನು ಪಡೆಯುತ್ತಿದ್ದರು. ಅದರಲ್ಲೂ ಧೋನಿ ತಾನು ನಾಯಕತ್ವ ಬಿಟ್ಟಿದ್ದೇನೆ ಎಂಬ ಭಾವನೆಗಳೇ ಪಂದ್ಯಾಟಗಳಲ್ಲಿ ಆಟಗಾರರಿಗೆ, ಕೊಹ್ಲಿಗೆ ಸಲಹೆ. ಸೂಚನೆ, ಮಾರ್ಗದರ್ಶನ ನೀಡುತ್ತಿದ್ದರು. ಇದನ್ನು ಸ್ವೀಕರಿಸಿದ ಕೊಹ್ಲಿ ನಿಜಕ್ಕೂ ಭವಿಷ್ಯದ ಪ್ರಬುದ್ಧ ನಾಯಕನ ಜಾಣ್ಮೆ ತೋರಿದರು. ಆಟಗಾರರು ಅಭಿಪ್ರಾಯಗಳನ್ನು, ಸಲಹೆಗಳನ್ನು ಮುಕ್ತವಾಗೇ ನೀಡುವದನ್ನು ಕೊಹ್ಲಿ ಪ್ರೋತ್ಸಾಹಿಸುತ್ತಿದ್ದರು.

ಪಾದರಸದ ಚಲನೆ : ಅಂಕಣದಲ್ಲಿ ನಾಯಕನಾದವ ಅತೀ ಸೂಕ್ಷ್ಮ ದೃಷ್ಟಿಯನ್ನು ಹೊಂದಿದ್ದು, ಪಾದರಸದಂತೆ ಚುರುಕಿನ ಚಲನೆ ಹೊಂದಿರಬೇಕು. ಇದನ್ನು ಕೊಹ್ಲಿ ನಾಯಕತ್ವದಲ್ಲಿ ನಾವು ಕಾಣಬಹುದು. ಪಂದ್ಯದ ಪ್ರತೀ ಕ್ಷಣವು ಗರಿಗೆದÀರಿದ ಹಕ್ಕಿಯಂತಿದ್ದರು. ಗೆಲುವು ಒಂದೇ ಅವರ ಗುರಿಯಾಗಿತ್ತು. ಕದಲದ ದೃಷ್ಟಿ ಅವರದಾಗಿತ್ತು.

ಸರ್ವಾಂಗೀಣ ಪ್ರಬಲ ಆಟಗಾರ : ಕೊಹ್ಲಿ ಬ್ಯಾಟಿಂಗ್ ಎಂದರೆ ಅದು ಮಾಯೆ. ಬ್ಯಾಟು ಮಂತ್ರದಂಡದಂತೆ, ಕೊಹ್ಲಿ ನಿಂತರೆ ಅಲ್ಲಿ ರನ್ ಪ್ರವಾಹ, ಆ ಶೈಲಿಯೇ ಮನೋಹರ, ವಿಶ್ವದ ದಿಗ್ಗಜ. ಬಾಟ್ಸ್‍ಮನ್ ಇಂಗ್ಲೆಂಡಿನ ಪೀಟರ್‍ಸನ್ ಈಗಾಗಲೇ ಆಸ್ಟ್ರೇಲಿಯಾ ತಂಡಕ್ಕೆ ‘‘ಕೊಹ್ಲಿ ಹುಡುಗರ ಬಗ್ಗೆ ಎಚ್ಚರಿಕೆ’’ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಇಡೀ ವಿಶ್ವ ಕ್ರಿಕೆಟ್ ಕೊಹ್ಲಿಯನ್ನು ಆತನ ಆಟಕ್ಕೆ ಅಭಿಮಾನದಿಂದ ನೋಡುತ್ತಿದೆ. ಕೊಹ್ಲಿಗಿರುವ ವಿಶ್ವ ಕ್ರಿಕೆಟ್ ಮನ್ನಣೆ ಕೊಹ್ಲಿ ಹುಡುಗರಿಗೆ, ಭಾರತ ತಂಡಕ್ಕೆ ಸದಾ ಸ್ಫೂರ್ತಿ. ಕೊಹ್ಲಿ ಫೀಲ್ಡಿಂಗ್‍ನಲ್ಲಿ ಪಕ್ಕಾ ಜಾದೂಗಾರ, ಅಂತೇ ಉತ್ತಮ ಬೌಲಿಂಗ್‍ಅನ್ನು ಮಾಡಬಲ್ಲರು. ಈ ಸರ್ವಾಂಗೀಣ ಆಟದ ನಾಯಕ ಭವಿಷ್ಯದಲ್ಲಿ ಭಾರತವನ್ನು ಯಶಸ್ಸಿನತ್ತ ಕೊಂಡೊಯ್ಯುವದ ರಲ್ಲಿ ಅನುಮಾನವೇ ಇಲ್ಲ, ಇದು ಸತ್ಯ. ಇಂಗ್ಲೆಂಡ್ ವಿರುದ್ಧ ಮೂರು ಪ್ರಕಾರದ ಕ್ರಿಕೆಟ್‍ನಲ್ಲೂ ಸರಣಿ ಜಯ ಸಾಧಿಸಿರುವ ಕೊಹ್ಲಿ ನಾಯಕತ್ವದ ಭಾರತ ತಂಡ ಮಹತ್ವದ ಸಾಧನೆಯನ್ನೇ ಮಾಡಿದೆ. ತುಂಬು ಕ್ರೀಡಾಂಗಣದ ಅಭಿಮಾನಿಗಳು ಭಾರತವನ್ನು, ಕೊಹ್ಲಿ ನಾಯಕತ್ವವನ್ನು ಪ್ರೋತ್ಸಾಹಿಸಿ ದ್ದಾರೆ. ಕೊಹ್ಲಿಯದು ಕ್ರಿಕೆಟ್‍ನಲ್ಲಿ ವಿರಾಟ್ ರೂಪ. ಭಾರತ ಭವಿಷ್ಯದಲ್ಲಿ ಸಾಧನೆಗಳ ಏಣಿಯೇರುವದು ಶತಃಸಿದ್ಧ.