ಪೊನ್ನಂಪೇಟೆ, ಫೆ. 8: ಮನುಷ್ಯ ಪರಸ್ಪರ ಪ್ರೀತಿಸದೆ ಇರುವದೇ ಸಮಾಜದಲ್ಲಿ ಮತಾಂಧತೆ ಹೆಚ್ಚಾಗಲು ಕಾರಣವಾಗಿದೆ. ಮನುಷ್ಯರನ್ನು ಪ್ರೀತಿಸುವ ಹೃದಯ ವೈಶಾಲ್ಯತೆ ಎಲ್ಲರಲ್ಲೂ ಮೂಡಿದರೆ ಸಮಾಜದಲ್ಲಿ ಸಮಾನತೆ ಸಾಧ್ಯ. ಮನುಷ್ಯರನ್ನು ಪ್ರೀತಿಸುವದೇ ಎಲ್ಲ್ಲಾ ಧರ್ಮಗಳ ಸಾರವಾಗಿದೆ ಎಂದು ಹಿರಿಯ ಧಾರ್ಮಿಕ ವಿಧ್ವಾಂ¸,À ದ.ಕ. ಜಿಲ್ಲೆಯ ಅಬ್ದುಲ್ ರಶೀದ್ ಸಖಾಫಿ ಕಕ್ಕಿಂಜೆ ಅಭಿಪ್ರಾಯಪಟ್ಟರು.

ಕಳೆದ 4 ದಿನಗಳಿಂದ ಜರುಗಿದ ಇತಿಹಾಸ ಪ್ರಸಿದ್ಧ ಮತ್ತು ಭಾವೈಕ್ಯತೆಯ ಕೇಂದ್ರವಾಗಿರುವ ಪಾಲಿಬೆಟ್ಟದ ಆರ್ಕಾಡ್ ಪಟ್ಟಾಣ್ ಬಾಬಾ ಶಾವಲಿ ಅವರ ಉರೂಸ್‍ನ ಸಮಾರೋಪ ಸಮಾರಂಭದ ಅಂಗವಾಗಿ ಪಾಲಿಬೆಟ್ಟದ ಆರ್ಕಾಡ್ ದರ್ಗಾದ ಆವರಣದಲ್ಲಿ ಸೋಮವಾರ ರಾತ್ರಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಇಸ್ಲಾಂ ಧರ್ಮವನ್ನು ಪ್ರತಿನಿಧೀಕರಿಸಿ ಮುಖ್ಯ ಪ್ರಭಾಷಣ ನಡೆಸಿದ ಕಕ್ಕಿಂಜೆ ಅವರು, ಮನುಷ್ಯ ಪರಸ್ಪರ ಪ್ರೀತಿಸುವಂತಾಗಲು ಮೊದಲು ಹೃದಯ ಶುದ್ದಿಯ ಅಗತ್ಯವಿದೆ. ಸಮಾಜದಲ್ಲಿ ಜಾತಿ - ಧರ್ಮಗಳ - ಬೇಧ ಭಾವಗಳನ್ನು ತೊಡೆದು ಹಾಕಿ ಮತಾಂಧತೆಯ ಅಡ್ಡಗೋಡೆಯನ್ನು ಕೆಡವಿ ‘ಸೌಹಾರ್ದತೆಯ ನಾಳೆ’ಗಳನ್ನು ಸೃಷ್ಟಿಸಲು ಎಲ್ಲಾ ಧರ್ಮಿಯರು ಪ್ರಯತ್ನಿಸಬೇಕು. ಸಮಾಜದಲ್ಲಿ ಮನುಷ್ಯ ಮನುಷ್ಯತ್ವದ ತಳಹದಿಯಲ್ಲಿ ಬದುಕಬೇಕೇ ವಿನಃ ಮತಾಂಧತೆಯ ವ್ಯಾಮೋಹಕ್ಕೆ ಬಲಿಯಾಗಬಾರದು. ಯಾರನ್ನು ಅನ್ಯರಾಗಿ ಕಾಣಬಾರದು ಎಂದರು.

ಮತ್ತೋರ್ವ ಮುಖ್ಯ ಭಾಷಣಕಾರರಾಗಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಬೋಧಸ್ವರೂಪನಂದ ಸ್ವಾಮೀಜಿ ಮಾತನಾಡಿ, ದೇಶಕ್ಕೆ ಆಧ್ಯಾತ್ಮಿಕ ಬೆಳಕು ತೋರಿಸಿದ ಶ್ರೀ ರಾಮಕೃಷ್ಣ ಪರಮಹಂಸರ ಜೀವನವೇ ಸರ್ವ ಧರ್ಮ ಸಮನ್ವಯತೆಯ ಪ್ರತೀಕವಾಗಿತ್ತು. ಮಾತು ಮತ್ತು ಕೃತಿ ಒಂದೇ ಆಗಿರಬೇಕು ಎಂಬ ಶ್ರೀ ರಾಮಕೃಷ್ಣರ ಸಂದೇಶದಲ್ಲಿ ಮನುಷ್ಯತ್ವದ ಹೃತ್ಪೂರ್ವಕತೆ ರಾರಾಜಿಸುತಿತ್ತು. ಧರ್ಮದ ಹೆಸರಿನಲ್ಲಿ ಜಗಳ ಬೇಡ ಎಂಬದು ಪರಮಹಂಸರ ನಿತ್ಯ ಸಂದೇಶವಾಗಿತ್ತು ಎಂದು ಶ್ರೀ ರಾಮಕೃಷ್ಣರ ವ್ಯಕ್ತಿತ್ವದ ಬಗ್ಗೆ ಬೆಳಕು ಚೆಲ್ಲಿ ಮಾತನಾಡಿದರಲ್ಲದೆ, ತನಗೂ ಒಳ್ಳೆಯದಾಗಿ ಇತರರಿಗೂ ಒಳ್ಳೆಯದನ್ನೇ ಬಯಸುವ ದೃಢÀ ಸಂಕಲ್ಪ ಇಂದು ಎಲ್ಲರಲ್ಲೂ ಮೂಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಪಾಲಿಬೆಟ್ಟ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯಾದ ಎ.ಎ. ಅಬ್ದುಲ್ಲಾ ಮಾತನಾಡಿ, ಭಾರತದ ಸೂಫಿ ಸಂತ ಪರಂಪರೆಗೆ ತನ್ನದೇ ಆದ ವೈಚಾರಿಕ ಹಿನ್ನೆಲೆಯಿದೆ. ಮನುಷ್ಯನ ಸಾತ್ವಿಕ ಬದುಕು ಸಮಾಜಮುಖಿಯಾಗಿರಬೇಕು ಎಂಬ ಬಗ್ಗೆ ಸೂಫಿ ಸಂತರು ಹಲವು ಶತಮಾನಗಳ ಹಿಂದೆಯೇ ಆಧ್ಯಾತ್ಮಿಕ ಕ್ರಾಂತಿ ಮೂಡಿಸಿದ್ದರು. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಸೂಫಿ ಸಂತರ ಪಾತ್ರ ಮಹತ್ವದಾಗಿತ್ತು. ರಾಷ್ಟ್ರದ ಸೋದರತೆ ಮತ್ತು ಭಾತೃತ್ವಕ್ಕೆ ಸೂಫಿ ಸಂತ ಪರಂಪರೆ ಮತ್ತಷ್ಟು ಭದ್ರ ಬುನಾದಿ ಯನ್ನು ಹಾಕಿಕೊಟ್ಟಿದೆ ಎಂದರು.

ಸರ್ವಧರ್ಮ ಸಮ್ಮೇಳವನ್ನು ಉದ್ಘಾಟಿಸಿದ ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಪಿ.ಕೆ. ಅಬ್ದುಲ್ ರೆಹಮಾನ್ ಮಾತನಾಡಿ, ಮನುಷ್ಯ ಮನುಷ್ಯತ್ವ ದಿಂದ ಬದುಕಿದರೆ ಸಾಮಾಜಿಕ ಅಸಮತೋಲನಕ್ಕೆ ಅವಕಾಶವೇ ಇರುವದಿಲ್ಲ ಎಂದು ಹೇಳಿದರು. ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿದ್ದ ಜಿ.ಪಂ. ಮಾಜಿ ಸದಸ್ಯ ಕೊಲ್ಲೀರ ಧರ್ಮಜ, ಹೊಸೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ, ಹೊಸೂರು ಗ್ರಾ.ಪಂ. ಸದಸ್ಯ ಸಣ್ಣುವಂಡ ರತ್ನ ಸುಬ್ಬಯ್ಯ, ಸುಂಟಿಕೊಪ್ಪದ ನಾಗರಿಕ ಪ್ರಮುಖ ಎಂ.ಎ. ಉಸ್ಮಾನ್ ಮೊದಲಾದವರು ಈ ಸಂದರ್ಭದಲ್ಲಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಜಂಇಯತ್ತುಲ್ ಉಲಮಾದ ಅಧ್ಯಕ್ಷ ಕೆ.ಎ. ಮೊಹಮ್ಮದ್ ಮುಸ್ಲಿಯಾರ್ ಅವರು ವಹಿಸಿದ್ದರು. ವೇದಿಕೆಯಲ್ಲಿ ಪಾಲಿಬೆಟ್ಟ ಗ್ರಾ.ಪಂ. ಅಧ್ಯಕ್ಷ ಪುಲಿಯಂಡ ಪಿ. ಬೋಪಣ್ಣ, ಪಾಲಿಬೆಟ್ಟ ಶಾಫಿ ಜಮಾಯತ್‍ನ ಅಧ್ಯಕ್ಷ ಸಿ.ಎಂ. ಅಬ್ದುಲ್ ಜಬ್ಬಾರ್, ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಕೆ.ಎ. ಯಾಕೂಬ್ ಮೊದಲಾದವರು ಉಪಸ್ಥಿತರಿದ್ದರು.

ಆರಂಭದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗೆ ಪಾಲಿಬೆಟ್ಟ ಶಾಫಿ ಜಮಾಅತ್‍ನ ಖತೀಬರಾದ ಹಲ್ ಹಪೀಜ್ ಅಬ್ದುಲ್ ಫತಾಹ್ ಸಖಾಫಿ ನೇತೃತ್ವ ವಹಿಸಿದ್ದರು. ಜಿಲ್ಲಾ ಖಾದಿ ಗ್ರಾಮೋದ್ಯೋಗ ಮಂಡಳಿಯ ಮಾಜಿ ಅಧ್ಯಕ್ಷ ಚೆನ್ನಯ್ಯನಕೋಟೆಯ ಸಿ.ಹೆಚ್. ಫಯಾಜ್ ಅಹಮ್ಮದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

- ರಫೀಕ್ ತೂಚಮಕೇರಿ