ಮಡಿಕೇರಿ, ಫೆ. 8: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಎರಡು ಗಸ್ತು ವಾಹನಗಳಿಗೆ ಇಂದು ಚಾಲನೆ ನೀಡಲಾಗಿದೆ.

ಕ್ಯಾಮೆರಾ, ಸರ್ಚ್‍ಲೈಟ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಸೈರನ್, ಮೆಗಾಫೋನ್, ಗಾಯಾಳುಗಳನ್ನು ಸಾಗಿಸುವ ಸ್ಟ್ರಕ್ಚರ್, ಇನ್‍ವರ್ಟರ್ ಹಾಗೂ ಜಿಪಿಎಸ್ ಈ ವ್ಯವಸ್ಥೆಗಳನ್ನು ಒಳಗೊಂಡಿರುವ ಎರಡು ಟೊಯೋಟಾ ಇನೋವಾ ವಾಹನಗಳಿಗೆ ಇಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಹಸಿರು ನಿಶಾನೆ ತೋರಿದರು.

ವಾಹನಗಳ ಕೆಲಸವೇನು?

ವಿವಿಧ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿರುವ ಈ ವಾಹನಗಳು 24 ಗಂಟೆಯು ಚಾಲನೆಯಲ್ಲಿರುತ್ತವೆ. ಗಡಿಭಾಗವಾದ ಸಂಪಾಜೆಯವರೆಗೂ ಈ ವಾಹನಗಳು ಗಸ್ತು ತಿರುಗುತ್ತವೆ. ಯಾವದೇ ಸಂದರ್ಭದಲ್ಲಿ ಅಪಘಾತಗಳು ಸಂಭವಿಸಿದರೆ ತಕ್ಷಣ ಅಪಘಾತ ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ, ಆಸ್ಪತ್ರೆಗೆ ಸಾಗಿಸುವದು, ನಂತರ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವದು. ಆಂಬ್ಯುಲೆನ್ಸ್ ಅನ್ನು ಕರೆಸುವ ಕೆಲಸವನ್ನು ಈ ಗಸ್ತು ವಾಹನ ನಿರ್ವಹಿಸುತ್ತದೆ. ಈ ವಾಹನಗಳ ನಿಯಂತ್ರಣ ‘ಕಂಟ್ರೋಲ್ ರೂಂ'ನಲ್ಲಿರುತ್ತದೆ. ಅಪಘಾತ ತಡೆಗೆ ನಿಯೋಜಿಸಲ್ಪಟ್ಟಿರುವ ಈ ವಾಹನಗಳು ಯಾವ ಸ್ಥಳದಲ್ಲಿದೆ ಎಂಬ ಬಗ್ಗೆ ಕಂಟ್ರೋಲ್ ರೂಂನಲ್ಲಿ ಕುಳಿತ ಅಧಿಕಾರಿಗಳಿಗೆ ನೇರ ಮಾಹಿತಿ ಲಭ್ಯವಾಗುತ್ತದೆ. ಸಾರ್ವಜನಿಕರು ಕೂಡ ಅಪಘಾತಗಳು ಸಂಭವಿಸಿದೊಡನೆ

(ಮೊದಲ ಪುಟದಿಂದ) 100 ದೂರವಾಣಿ ಸಂಖ್ಯೆಗೆ ಕರೆಮಾಡಿ ಮಾಹಿತಿಯಿತ್ತರೆ ಕೂಡಲೇ ಗಸ್ತು ವಾಹನಗಳು ಅಪಘಾತ ನಡೆದಿರುವ ಸ್ಥಳಕ್ಕೆ ತಲಪಿ ಕಾರ್ಯಪ್ರವೃತ್ತವಾಗುತ್ತವೆ.

ಯಾಕಾಗಿ ಈ ವಾಹನಗಳು?

ಹೆದ್ದಾರಿಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಪಘಾತಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿವೆ. ಮಾತ್ರವಲ್ಲದೆ ಅಪಘಾತ ಸಂಭವಿಸಿದೊಡನೆ ತುರ್ತು ಚಿಕಿತ್ಸೆ ಸಿಗದೆ ಬಹಳಷ್ಟು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಗಸ್ತು ವಾಹನಗಳು ಕಾರ್ಯನಿರ್ವಹಿಸಲಿವೆ. ಓರ್ವ ಚಾಲಕ, ಓರ್ವ ಸಹಾಯಕ ಠಾಣಾಧಿಕಾರಿ ಈ ವಾಹನದಲ್ಲಿ ತಕ್ಷಣ ಸ್ಥಳಕ್ಕೆ ಬಂದು ಗಾಯಾಳುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲಿದ್ದಾರೆ. ಇದಕ್ಕಾಗಿಯೇ ತುರ್ತಾಗಿ ಬೇಕಾಗುವ ಅಗತ್ಯ ಸಲಕರಣೆಗಳನ್ನು ಈ ವಾಹನಗಳಲ್ಲಿ ಅಳವಡಿಸಲಾಗಿದೆ. ನಿಯಮ ಮೀರಿ ಅತೀ ವೇಗವಾಗಿ ಸಾಗುವ ವಾಹನಗಳನ್ನು ಪತ್ತೆ ಹಚ್ಚಿ ದಂಡ ವಿಧಿಸುವ ಕೆಲಸವನ್ನು ಗಸ್ತು ವಾಹನದ ಅಧಿಕಾರಿಗಳು ಮಾಡಲಿದ್ದಾರೆ.

ಎಸ್ಪಿ ರಾಜೇಂದ್ರ ಪ್ರಸಾದ್ ಅವರು ಈ ವಾಹನಗಳ ಹಸಿರು ನಿಶಾನೆ ತೋರಿದ ಸಂದರ್ಭ ಡಿವೈಎಸ್ಪಿ ಚಬ್ಬಿ, ಪೊಲೀಸ್ ಅಧಿಕಾರಿಗಳಾದ ಕರೀಂ ರಾವ್‍ತರ್, ಮೇದಪ್ಪ, ಪ್ರದೀಪ್ ಮತ್ತಿತರರು ಇದ್ದರು.