ಕುಶಾಲನಗರ, ಫೆ. 9: ಕುಶಾಲನಗರ ಪಟ್ಟಣದಲ್ಲಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಕುಂದು-ಕೊರತೆ ಸಭೆಯಲ್ಲಿ ನಾಗರಿಕರಿಂದ ಸಮಸ್ಯೆಗಳ ಮಹಾಪೂರವೇ ಹರಿದುಬಂತು. ಕುಶಾಲನಗರ ಪಟ್ಟಣ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಸೇರಿದ ನೂರಾರು ನಾಗರಿಕರಿಂದ ಹಲವು ದೂರುಗಳು ಕೇಳಿಬಂದು ಪಟ್ಟಣದಲ್ಲಿ ಮನೆ ನಿವೇಶನಗಳ ಅರ್ಜಿ ವಿಲೇವಾರಿ, ರಸ್ತೆ ಮೂಲಭೂತ ಸೌಕರ್ಯಗಳ ಕೊರತೆ, ಕಸ ವಿಲೇವಾರಿಗೆ ವ್ಯವಸ್ಥೆ, ಒಳಚರಂಡಿ ಯೋಜನೆಯ ಅವ್ಯವಸ್ಥೆ, ಕೆರೆಗಳ ಅಭಿವೃದ್ಧಿ, ಉದ್ಯಾನವನಗಳ ಒತ್ತುವರಿ, ಸರಕಾರಿ ಆಸ್ತಿ ಪರಾಭಾರೆ, ಅಕ್ರಮ ಕಟ್ಟಡಗಳ ನಿರ್ಮಾಣ, ವಾಹನ ನಿಲುಗಡೆ ಅವ್ಯವಸ್ಥೆ ಸೇರಿದಂತೆ ವ್ಯಕ್ತಿಗತ ಸಮಸ್ಯೆಗಳ ಸುರಿ ಮಳೆಯೇ ಜಿಲ್ಲಾಧಿಕಾರಿಗಳನ್ನು ಸ್ವಾಗತಿಸಿದಂತೆ ಕಂಡುಬಂತು.

ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಕುಂದು -ಕೊರತೆಗಳ ಸಭೆಯಲ್ಲಿ ನೆರೆಯ ಗುಡ್ಡೆಹೊಸೂರು, ಮುಳ್ಳುಸೋಗೆ,

(ಮೊದಲ ಪುಟದಿಂದ) ಕೂಡಿಗೆ ಗ್ರಾಮ ಪಂಚಾಯ್ತಿಗಳ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೂ ಕೂಡ ವಿಶೇಷವಾಗಿತ್ತು. ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡುವ ನಿಟ್ಟಿನಲ್ಲಿ ಘಟಕ ನಿರ್ಮಾಣ ಮಾಡಲು ಜಿಲ್ಲೆಯ ಬಹುತೇಕ ಪಂಚಾಯ್ತಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಗಳಾದ ಡಾ.ಆರ್.ವಿ. ಡಿಸೋಜ, ಪ್ರತಿಯೊಬ್ಬರಿಗೂ ಸೂರು ಎಂಬ ಯೋಜನೆಯಡಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣ ಪಂಚಾಯ್ತಿ ಕಚೆÉೀರಿಯ ಸಭಾಂಗಣದಲ್ಲಿ ನಡೆದ ಕುಂದು -ಕೊರತೆ ಸಭೆ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ ಹಿನ್ನೆಲೆಯಲ್ಲಿ ಸ್ಥಳಾವಕಾಶದ ಕೊರತೆಯಿಂದ ಸ್ವಲ್ಪ ಕಾಲ ಗೊಂದಲ ಕೂಡ ಕಂಡುಬಂತು. ಇದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಮುಂದಿನ ಕೆಲವೇ ದಿನಗಳಲ್ಲಿ ಸಭೆಯೊಂದನ್ನು ಕರೆದು ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ಚರ್ಚೆಗೆ ಅವಕಾಶ ಕಲ್ಪಿಸಲಾಗುವದು ಎಂದು ಮನವರಿಕೆ ಮಾಡಿದರು.

ಕುಶಾಲನಗರ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಒಳಚರಂಡಿ ಕಾಮಗಾರಿಯ ಬಗ್ಗೆ, ಅಸಮರ್ಪಕ ವಾಹನ ನಿಲುಗಡೆಯಿಂದ ಉಂಟಾ ಗುವ ಸಮಸ್ಯೆಗಳ ಬಗ್ಗೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕಿನ ಸರ್ವೇಯರ್ ಓರ್ವ ಕುಶಾಲನಗರ ಪಟ್ಟಣದ ಸರಕಾರಿ ಆಸ್ತಿಗಳ ಲೂಟಿ ಮಾಡುತ್ತಿರುವ ಬಗ್ಗೆ ಹಲವರಿಂದ ದೂರುಗಳು ಕೇಳಿಬಂತು. ಈ ಎಲ್ಲಾ ಅವಾಂತರಗಳ ಬಗ್ಗೆ ವಿಶೇಷ ತನಿಖೆಗಾಗಿ ಟಾಸ್ಕ್ ಫೋರ್ಸ್ ಅನ್ನು ರಚಿಸುವಂತೆ ನಾಗರಿಕರು ಆಗ್ರಹಿಸಿದರು.

ಈ ಸಂದರ್ಭ ಉಪ ವಿಭಾಗಾಧಿಕಾರಿ ಡಾ. ನಂಜುಂಡೇ ಗೌಡ, ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಪ್ರಭು, ತಹಶೀಲ್ದಾರ್ ಕೃಷ್ಣ, ಕುಡಾ ಅಧ್ಯಕ್ಷ ಬಿ.ಜಿ.ಮಂಜುನಾಥ್ ಗುಂಡೂರಾವ್, ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಎಂ.ಎಂ.ಚರಣ್, ಉಪಾಧ್ಯಕ್ಷ ಟಿ.ಆರ್.ಶರವಣಕುಮಾರ್ ಮತ್ತು ಸರ್ವ ಸದಸ್ಯರು, ಮುಳ್ಳುಸೋಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಭವ್ಯ ಮತ್ತು ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ- ಸಂಸ್ಥೆಗಳ ಪ್ರಮುಖರು ಇದ್ದರು.