ಮಡಿಕೇರಿ, ಫೆ. 9: ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ಇರುವ ಪ್ರಧಾನ ಮಂತ್ರಿಯವರ 15 ಅಂಶಗಳ ಕಾರ್ಯಕ್ರಮಗಳ ಕುರಿತು ಜಿಲ್ಲೆಯ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಮಾಹಿತಿ ಕಾರ್ಯಾಗಾರ ಆಯೋಜಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಧಾನ ಮಂತ್ರಿ ಅವರ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೃಷಿ, ತೋಟಗಾರಿಕೆ, ಸಾರ್ವಜನಿಕ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಕೈಗಾರಿಕೆ, ಸಹಕಾರ ಹೀಗೆ ಹಲವು ಇಲಾಖೆಗಳಲ್ಲಿ ಅಲ್ಪಸಂಖ್ಯಾತರಿಗಾಗಿ ಸಾಕಷ್ಟು ಕಾರ್ಯಕ್ರಮಗಳು ಇವೆ. ಆದರೆ ವಿವಿಧ ಇಲಾಖೆಗಳಲ್ಲಿ ಪ್ರಗತಿ ತುಂಬಾ ಕಡಿಮೆ ಇದೆ ಎಂದು ಜಿಲ್ಲಾಧಿಕಾರಿ ಅತೃಪ್ತಿ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತರ ಮಕ್ಕಳಿಗಾಗಿ ಅಂಗನವಾಡಿ ಮೂಲಕ ಪೌಷ್ಟಿಕ ಆಹಾರ ವಿತರಣೆ, ಸಾಲ ಸೌಲಭ್ಯ, ವಿದ್ಯಾರ್ಥಿ ವೇತನ, ಸ್ವ ಉದ್ಯೋಗ ಕೈಗೊಳ್ಳಲು ತರಬೇತಿ, ನಾಗರಿಕ ಸೇವೆಗಳ ತರಬೇತಿ, ವಸತಿ ಸೌಲಭ್ಯ, ಕೃಷಿ, ತೋಟಗಾರಿಕೆ, ಉದ್ಯೋಗಿನಿ ಯೋಜನೆ, ಆಧಾರ, ಪಠ್ಯ ಪುಸ್ತಕ, ವೃತ್ತಿ ಕೌಶಲ್ಯ ತರಬೇತಿ, ಸ್ವಾವಲಂಬನೆ, ಅರಿವು, ಶ್ರಮಶಕ್ತಿ, ಮೈಕ್ರೋ ಸಾಲ ಯೋಜನೆ, ಗಂಗಾ ಕಲ್ಯಾಣ ಹೀಗೆ ಹಲವು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಈ ಕಾರ್ಯಾಗಾರ ಸಂಬಂಧ ಮೊದಲೇ ಮಾಹಿತಿ ನೀಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಒಟ್ಟುಗೂಡಿ ಕಾರ್ಯ ಕ್ರಮಗಳನ್ನು ಆಯೋಜಿಸು ವಂತಾಗಬೇಕು. ಪ್ರಧಾನಮಂತ್ರಿ ಅವರ 15 ಅಂಶಗಳ ಕಾರ್ಯಕ್ರಮ ಕುರಿತು ಮಾಹಿತಿ ಒದಗಿಸಬೇಕು ಎಂದು ನಿರ್ದೇಶನ ನೀಡಿದರು.
ಅಲ್ಪಸಂಖ್ಯಾತರಿಗಾಗಿ ಬಿದಾಯಿ, ಕಾನೂನು ಪದವಿದರರಿಗೆ, ಐಟಿಐ, ಡಿಪ್ಲೋಮಾ ತರಬೇತಿಗೆ ಶಿಷ್ಯ ವೇತನ, ಶ್ರಮಶಕ್ತಿ, ಸ್ವಾವಲಂಬನೆ ಹೀಗೆ ಹಲವು ಕಾರ್ಯಕ್ರಮಗಳ ಅನುಷ್ಠಾನ ಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೃಷಿ ಇಲಾಖೆ ಮೂಲಕ ಸಸ್ಯ ಸಂರಕ್ಷಣೆ, ಸಾವಯವ ಗೊಬ್ಬರ ವಿತರಣೆ, ಬಿತ್ತನೆ ಬೀಜ ಪೂರೈಕೆ, ಮಣ್ಣಿನ ಸತ್ವ ಹೆಚ್ಚಿಸುವಿಕೆ, ತುಂತುರು ನೀರಾವರಿ, ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮಾರುಕಟ್ಟೆ, ತೋಟಗಾರಿಕೆ ಇಲಾಖೆ ಮೂಲಕ ಹೊಸ ತೋಟ ಪ್ರದೇಶಗಳ ವಿಸ್ತರಣೆ, ಜೇನು ಕೃಷಿಗೆ ಉತ್ತೇಜನ, ಮೀನು ಮಾರಾಟಕ್ಕೆ ಸಹಾಯಧನ, ಮೀನು ಸಲಕರಣೆ ಕಿಟ್ ಹೀಗೆ ಅಲ್ಪಸಂಖ್ಯಾತರಿಗಾಗಿ ಹತ್ತು ಹಲವು ಯೋಜನೆಗಳಿದ್ದು, ಇವುಗಳ ಬಗ್ಗೆ ಮಾಹಿತಿ ನೀಡುವದರ ಜೊತೆಗೆ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ತಲಪಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಅಲ್ಪಸಂಖ್ಯಾತರಿಗಾಗಿ ಹಲವು ಕಾರ್ಯಕ್ರಮಗಳು ಇದ್ದರೂ ಸಹ ಪ್ರಗತಿ ಸಾಧಿಸದಿರುವದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಅವರು ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯಗಳನ್ನು ಕಲ್ಪಿಸುವದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ, ಶಾಲಾ-ಕಾಲೇಜು, ಅಂಗನವಾಡಿ, ಆಸ್ಪತ್ರೆ, ನಾಡ ಕಚೇರಿಗಳಲ್ಲಿ ಸರ್ಕಾರದ ಕಾರ್ಯ ಕ್ರಮಗಳ ಮಾಹಿತಿ ಒಳಗೊಂಡ ಪೋಸ್ಟರ್ಗಳನ್ನು ಅಳವಡಿಸುವಂತೆ ಸೂಚನೆ ನೀಡಿದರು.
ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕೆ.ವಿ. ಸುರೇಶ್ ಅವರು ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಪ್ರಗತಿ ಸಂಬಂಧ ಹಲವು ಮಾಹಿತಿ ನೀಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ. ರಾಮಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಆರ್. ಬಸವರಾಜ, ಪೌರಾಯುಕ್ತೆ ಬಿ. ಶುಭ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎ. ದೇವಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಮಮ್ತಾಜ್, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಸಿ. ಜಗನ್ನಾಥ, ವಿಕಲಚೇತನರ ಅಧಿಕಾರಿ ಎನ್.ಎಂ. ಜಗದೀಶ್, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ರಾಜಶೇಖರ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಕೃಷ್ಣ ಪ್ರಸಾದ್, ವೀರಾಜಪೇಟೆ ಮತ್ತು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಇತರರು ತಮ್ಮ ಇಲಾಖಾ ವ್ಯಾಪ್ತಿಯ ಪ್ರಗತಿ ಸಂಬಂಧ ಹಲವು ಮಾಹಿತಿ ನೀಡಿದರು.