ಶ್ರೀಮಂಗಲ, ಫೆ. 9: ಸರಕಾರ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯ, ಬಿಸಿಯೂಟ ಸೇರಿದಂತೆ ಶುಲ್ಕವಿಲ್ಲದೆ ಉಚಿತ ಶಿಕ್ಷಣ ನೀಡಲು ಬೇಕಾದ ಎಲ್ಲಾ ಸೌಕರ್ಯ ನೀಡುತ್ತಿದ್ದರೂ ವಿದ್ಯಾರ್ಥಿಗಳು ಶಾಲೆಗೆ ಬರದೆ ಇರುವದು ದುರಂತ ಎಂದು ಜಿ.ಪಂ. ಮಾಜಿ ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ ಅಭಿಪ್ರಾಯ ವ್ಯಕ್ತ ಪಡಿಸಿದರು.

ಮಂಚಳ್ಳಿ ಸರಕಾರಿ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಪ್ರಾಥಮಿಕ ಹಂತದ ಶಿಕ್ಷಣಕ್ಕೆ ಶಿಕ್ಷಕರಿಗಿಂತ ಪೋಷಕರೇ ಹೆಚ್ಚಿನ ಜವಾಬ್ದಾರರಾಗಬೇಕಿದೆ. ನೂರು ವರ್ಷ ತುಂಬುತ್ತಿದ್ದು, ಶತಮಾನೋತ್ಸವದ ಆಚರಣೆಗೆ ಸಜ್ಜಾಗುತ್ತಿರುವ ಮಂಚಳ್ಳಿ ಸರಕಾರಿ ಪ್ರಾಥಮಿಕ ಶಾಲೆಯನ್ನು ಜಿಲ್ಲೆಯಲ್ಲಿ ಮಾದರಿ ಶಾಲೆಯಾಗಿ ರೂಪಿಸಲು ದಾನಿಗಳು, ಪೋಷಕರು, ಶಿಕ್ಷಕರಾದಿಯಾಗಿ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.

ಅತಿಥಿಗಳಾಗಿ ಭಾಗವಹಿಸಿದ್ದ ಮಚ್ಚಮಾಡ ಸಾಬು ಪೂಣಚ್ಚ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಮಯ ಪ್ರಜ್ಞೆಯನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕೆಂದರು.

ಮತ್ತೋರ್ವ ಅತಿಥಿ ಜೆ.ಸಿ. ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮಚ್ಚಮಾಡ ಸುರೇಶ್, ತೀತಿರ ಮಂದಣ್ಣ ಮಾತನಾಡಿದರು.

ವೇದಿಕೆಯಲ್ಲಿ ಮಂಚಳ್ಳಿ ಬಾಂಧವ್ಯ ಮಹಿಳಾ ಮಂಡಳಿಯ ಮಚ್ಚಮಾಡ ಪದ್ಮ ಸೋಮಯ್ಯ, ಜೆ.ಸಿ. ವಿದ್ಯಾಸಂಸ್ಥೆಯ ಮಚ್ಚಮಾಡ ಸುರೇಶ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ತೀತಿರ ಮಂದಣ್ಣ, ಶಾಲೆಯ ಸ್ಥಳ ದಾನಿ ಮಚ್ಚಮಾಡ ಸೋಮಯ್ಯ, ಕೆ.ಎನ್. ದೇವಮ್ಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಚ್ಚಮಾಡ ಕಾಶಿ ಕಾರ್ಯಪ್ಪ, ಸದಸ್ಯ ಚೋಡುಮಾಡ ಸೂರಜ್ ಸುಬ್ಬಯ್ಯ, ಮಚ್ಚಮಾಡ ನವೀನ್, ಮಚ್ಚಮಾಡ ಸಾಬು ಪೂಣಚ್ಚ, ಶಾಲಾ ಮಖ್ಯೋಪಾಧ್ಯಾಯ ಕೋಟ್ರಂಗಡ ಮನು ಸೋಮಯ್ಯ ಮತ್ತಿತರರು ಉಪಸ್ಥಿತರಿದ್ದರು.