ಮಡಿಕೇರಿ, ಫೆ. 9: ಕೊಡಗು ಜಿಲ್ಲಾ ರೈತ ಸಂಘದೊಂದಿಗೆ ಜಿಲ್ಲೆಯ ರೈತರು ಕೈ ಜೋಡಿಸಿದಲ್ಲಿ ರೈತರ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟು ಪರಿಹಾರ ಕಾಣಲು ಸಹಕಾರಿಯಾಗಲಿದೆ ಎಂದು ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ ಹೇಳಿದರು.

ಗೋಣಿಕೊಪ್ಪ ರೈತ ಸಂಘದ ಸಭಾಂಗಣದಲ್ಲಿ ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿದ್ದ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದ ಸುಜಯ್, ರೈತರು ಹೋರಾಟ ಮಾಡದೇ ಸರಕಾರದ ಯೋಜನೆ ಯನ್ನು ಪಡೆಯಲು ಈಗಿನ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಜಿಲ್ಲಾ ರೈತ ಸಂಘವು ಹಲವು ರೈತರ ಸಂಕಷ್ಟದಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿಗಳ ಮೂಲಕ ಸೌಲಭ್ಯಗಳನ್ನು ಒದಗಿಸಿ ಕೊಡುವಲ್ಲಿ ಯಶಸ್ವಿಯಾಗಿದೆ ಎಂದು ವಿವರಿಸಿದರು.

ಮುಖ್ಯ ಅತಿಥಿಯಾಗಿ ರಾಜ್ಯ ರೈತ ಸಂಘದ ಪ್ರಮುಖ ಮೈಸೂರು ಜಿಲ್ಲೆಯ ರೈತ ಮುಖಂಡ ಬಸವರಾಜ್ ಆಗಮಿಸಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿ, ಅದನ್ನು ಅಧಿಕಾರಿಗಳ ಮುಂದಿಟ್ಟು ಬಗೆ ಹರಿಸುವ ಪ್ರಯತ್ನ ಪ್ರತಿ ತಿಂಗಳು ಆಯಾ ತಾಲೂಕಿನಲ್ಲಿ ಮಾಡಬೇಕೆಂದು ಕರೆ ನೀಡಿದರು. ಮೈಸೂರು ಜಿಲ್ಲಾ ರೈತ ಸಂಘದ ಅಧ್ಯಕ್ಷ ಅಶೋಕ್‍ಕುಮಾರ್ ಭಾಗವಹಿಸಿ ಮಾತನಾಡಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ರೈತ ಸದಸ್ಯತ್ವ ಅಭಿಯಾನಕ್ಕೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ರೈತರ ಸಮಸ್ಯೆಗಳನ್ನು ಆಲಿಸಲು ರೈತ ಸಂಘ ಕಚೇರಿ ತೆರೆದು ಕೆಲಸ ಮಾಡುತ್ತಿದೆ ಎಂದರು. ಸಂಘದ ಶಂಕರ್ ಚಂಗಪ್ಪ ಸ್ವಾಗತಿಸಿದರು. ಟಿ. ಶೆಟ್ಟಿಗೇರಿಯ ರೈತ ಮುಖಂಡ ಮಚ್ಚಾಮಾಡ ರಂಜಿ ವಂದಿಸಿದರು.