ಸೋಮವಾರಪೇಟೆ, ಫೆ. 9: ತಾಲೂಕು ಮೀನುಗಾರಿಕೆ ಇಲಾಖೆ ವತಿಯಿಂದ ಸಮೀಪದ ದೊಡ್ಡತೋಳೂರು ಗ್ರಾಮದ ಕುಮಾರಧಾರ ಸಾವಯವ ಕೃಷಿ ಸಂಘದ ಸದಸ್ಯರಿಗೆ ಮೀನುಗಾರಿಕೆ ಕೃಷಿ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಿತು. ಸಿದ್ದಾಪುರದ ಅಕ್ವಾ ವೆಂಚರ್ ಫಿಷ್ ಫಾರಂನ ಬಬಿನ್ ಬೋಪಣ್ಣ ಅವರು ಸಾವಯವ ಮೀನು ಕೃಷಿ, ಅಲಂಕಾರಿಕಾ ಮೀನು ಕೃಷಿ, ಸಿಹಿ ನೀರಿನ ಮೀನು ಕೃಷಿಯನ್ನು ಲಾಭದಾಯಕವಾಗಿ ಕೈಗೊಳ್ಳುವ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡಿದರು.
ಪ್ರಗತಿಪರ ಮೀನು ಕೃಷಿಕರೂ ಆಗಿರುವ ಬಬಿನ್ ಅವರು ತಮ್ಮ ಫಾರಂನಲ್ಲಿ ವೈಜ್ಞಾನಿಕವಾಗಿ ಕೈಗೊಂಡಿರುವ ಮೀನುಕೃಷಿಯ ಬಗ್ಗೆಯೂ ಸವಿವರ ಮಾಹಿತಿ ನೀಡಿದರಲ್ಲದೆ, ಆಸಕ್ತ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.
ಮೀನುಗಾರಿಕಾ ಇಲಾಖಾ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಅವರು, ಇಲಾಖೆಯಿಂದ ದೊರೆಯುವ ಸವಲತ್ತುಗಳು ಬಗ್ಗೆ ಮಾಹಿತಿ ನೀಡಿದರು. ತೋಳೂರುಶೆಟ್ಟಳ್ಳಿ ಗ್ರಾ.ಪಂ. ಸದಸ್ಯ ರಜಿತ್, ಗ್ರಾಮಾಧ್ಯಕ್ಷ ಕುಶಾಲಪ್ಪ, ಕೊಡಗು ಮತ್ತು ಹಾಸನ ಸಾವಯವ ಕೃಷಿ ಘಟಕದ ಅಧ್ಯಕ್ಷರು ಉಪಸ್ಥಿತರಿದ್ದರು.