ಮಲ್ಯ ಹಸ್ತಾಂತರಕ್ಕೆ ಬ್ರಿಟನ್‍ಗೆ ಭಾರತ ಮನವಿ
ನವದೆಹಲಿ, ಫೆ. 9: ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಭಾರತ ಗುರುವಾರ ಅಧಿಕೃತವಾಗಿ ಬ್ರಿಟನ್‍ಗೆ ಮನವಿ ಸಲ್ಲಿಸಿದೆ. 9 ಸಾವಿರ ಕೋಟಿ ರೂಪಾಯಿ ಸಾಲ ಮಾಡಿಕೊಂಡು ದೇಶದಿಂದ ಪಲಾಯನ ಮಾಡಿರುವ ಉದ್ಯಮಿ ವಿಜಯ್ ಮಲ್ಯ ಅವರ ವಿರುದ್ಧ ಈಗಾಗಲೇ ರೆಡ್ ಕಾರ್ನರ್ ನೋಟಿಸ್ ಹಾಗೂ ಕೋರ್ಟ್‍ಗಳಿಂದ ಹಲವು ಜಾಮೀನು ರಹಿತ ವಾರಂಟ್ ಜಾರಿ ಮಾಡಿದ್ದರೂ ಯಾವದೇ ಪ್ರಯೋಜನ ಆಗಿರಲಿಲ್ಲ. ಆದರೆ ಇದೀಗ ಮಲ್ಯನ್ನು ದೇಶಕ್ಕೆ ಕರೆತರುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಮೋದಿ ಅಭಿವೃದ್ಧಿ ಆಧಾರಿತ ಚಿತ್ರಕ್ಕೆ ಅನುಮತಿ ಇಲ್ಲ
ಮುಂಬೈ, ಫೆ. 9: ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಆಧಾರಿತ ಚಿತ್ರಕ್ಕೆ ಅನುಮತಿ ನೀಡಲು ಸೆನ್ಸಾರ್ ಮಂಡಳಿ ಗುರುವಾರ ನಿರಾಕರಿಸಿದೆ. ಮಧ್ಯಮ ಬಜೆಟ್ ನ ‘ಮೋದಿ ಕಾ ಗಾವ್’ ಚಿತ್ರವನ್ನು ನಿರ್ಮಿಸುತ್ತಿರುವ ಸುರೇಶ್ ಜಾ ಅವರು ತುಶಾರ್ ಎ ಗೋಯಲ್ ಅವರೊಂದಿಗೆ ಸಹ ನಿರ್ದೇಶನ ಮಾಡಿದ್ದು, ಶುಕ್ರವಾರ ಬಿಡುಗಡೆ ಮಾಡಲು ಕೇಂದ್ರ ಸೆನ್ಸಾರ್ ಮಂಡಳಿಯ ಅನುಮತಿ ಕೇಳಿದ್ದರು. ಚಿತ್ರದಲ್ಲಿ ಮೂರು ಆಕ್ಷೇಪಾರ್ಹ ಅಂಶಗಳಿದ್ದು, ಬಿಡುಗಡೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸೆನ್ಸಾರ್ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಚಿತ್ರ ನಾಳೆ ತೆರೆಗೆ ಬರುತ್ತಿಲ್ಲ. ಆದರೆ ಸೆನ್ಸಾರ್ ಮಂಡಳಿಯ ವಿರುದ್ಧ ತಾವು ಕೋರ್ಟ್ ಮೆಟ್ಟಿಲೇರುವುದಾಗಿ ಜಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಚಿತ್ರದಲ್ಲಿ ಉರಿ ಉಗ್ರ ಧಾಳಿ ಹಾಗೂ ಪ್ರಧಾನಿ ನರೇಂದ್ರ ಮೋದಿಯ ಭಾಷಣಗಳಿರುವದರಿಂದ ಪ್ರಧಾನಮಂತ್ರಿಗಳ ಕಚೇರಿಯಿಂದ ಹಾಗೂ ಕೇಂದ್ರ ಚುನಾವಣಾ ಆಯೋಗದಿಂದ ಎನ್‍ಒಸಿ ಪಡೆದು ಸಲ್ಲಿಸುವಂತೆ ಸೆನ್ಸಾರ್ ಮಂಡಳಿ ಜಾ ಅವರಿಗೆ ಸೂಚಿಸಿದೆ.
3 ವರ್ಷಗಳಲ್ಲಿ 262 ಕಾಡು ಪ್ರಾಣಿಗಳ ಹತ್ಯೆ
ಬೆಂಗಳೂರು, ಫೆ. 9: ಮೋಜು ಹಾಗೂ ಮಾಂಸಕ್ಕಾಗಿ ಕಳೆದ 3 ವರ್ಷಗಳಲ್ಲಿ 262 ಕಾಡು ಪ್ರಾಣಿಗಳನ್ನು ಹತ್ಯೆ ಮಾಡಲಾಗಿದೆ. ಶಿವಮೊಗ್ಗ ಮತ್ತು ಚಾಮರಾಜ ನಗರ ಜಿಲ್ಲೆಗಳಲ್ಲೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾಡು ಪ್ರಾಣಿಗಳನ್ನು ಕೊಲ್ಲಲಾಗಿದೆ ಎಂದು ಅರಣ್ಯ ಸಚಿವ ರಮಾಮಾಥ ರೈ ಹೇಳಿದ್ದಾರೆ. ಬಿಜೆಪಿ ಎಂಎಲ್‍ಸಿ ಸುನಿಲ್ ಸುಬ್ರಮಣ್ಯ ಅವರ ಪ್ರಶ್ನೆಗೆ ವಿಧಾನ ಪರಿಷತ್‍ನಲ್ಲಿ ಉತ್ತರಿಸಿದ ಸಚಿವ ರಮಾನಾಥ ರೈ ರಾಜ್ಯದ 11 ಅರಣ್ಯ ವಿಭಾಗಗಳಲ್ಲಿ ಪ್ರಾಣಿಗಳನ್ನು ಕೊಲ್ಲಲಾಗಿದೆ, ಚಾಮರಾಜನಗರದಲ್ಲಿ ಅತೀ ಹೆಚ್ಚಿನ ಅಂದರೆ 90 ಪ್ರಾಣಿಗಳನ್ನು ಹತ್ಯೆ ಮಾಡಲಾಗಿದೆ, ಅದೇ ರೀತಿ ಶಿವಮೊಗ್ಗ ಅರಣ್ಯ ಪ್ರದೇಶದಲ್ಲಿ 51 ಪ್ರಾಣಿಗಳು ಕೊಲ್ಲಲ್ಪಟ್ಟಿವೆ. ಚಿಕ್ಕಮಗಳೂರಿನಲ್ಲಿ 32 ಮತ್ತು ಉತ್ತರ ಕನ್ನಡದಲ್ಲಿ 26 ಪ್ರಾಣಿಗಳನ್ನು ಕೊಲ್ಲಲಾಗಿದೆ ಎಂದು ತಿಳಿಸಿದ್ದಾರೆ. 262 ಪ್ರಾಣಿಗಳ ಹತ್ಯೆ ಸಂಬಂಧ ಕೇಸು ದಾಖಲಾಗಿದೆ ಮತ್ತು ಕೆಲವು ಪ್ರಕರಣಗಳಲ್ಲಿ ತಪ್ಪಿತಸ್ಥರನ್ನು ಬಂಧಿಸಲಾಗಿದೆ. ಚಿಕ್ಕಮಗಳೂರಿನ ಬೇಟೆ ಪ್ರಕರಣ ಸಂಬಂಧ ಒಟ್ಟು 14 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನೂ ಅರಣ್ಯದಲ್ಲಿ ಕಾಡ್ಗಿಚ್ಚು ಉಂಟಾಗು ಸಿಗರೇಟು ಮತ್ತು ಬೀಡಿ ಸೇವನೆ ಕಾರಣ ಎಂದು ರಮಾನಾಥ ರೈ ವಿವರಿಸಿದ್ದಾರೆ. ಅರಣ್ಯದಲ್ಲಿ ಬಿದಿರು ಹಾಗೂ ಹುಲ್ಲಿನ ಪೆÇದೆಗಳಿವೆ, ಬಿದಿರು ಬೊಂಬಿನ ತಿಕ್ಕಾಟದಿಂದಾಗಿ ಕಾಡಿನಲ್ಲಿ ಬೆಂಕಿ ಹೊತ್ತಿಕೊಳ್ಳಲು ಒಂದು ಕಾರಣವಾಗಿದೆ. ಜೊತೆಗೆ ಪ್ರವಾಸಿಗರ ಧೂಮಪಾನ ಕೂಡ ಕಾಡ್ಗಿಚ್ಚಿಗೆ ಕಾರಣ ಎಂದು ವಿವರಿಸಿದರು.
ಜಯಲಲಿತಾ ನಿವಾಸ ಸ್ಮಾರಕವಾಗಿ ಅಭಿವೃದ್ಧಿ
ಚೆನ್ನೈ, ಫೆ. 9: ಜಯಾ ನಿವಾಸದಿಂದ ಶಶಿಕಲಾ ಟೀಂ ಅನ್ನು ಹೊರಹಾಕಲು ಮುಂದಾದ ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಪೆÇೀಯಸ್ ಗಾರ್ಡನ್ ನಿವಾಸವನ್ನು ಸ್ಮಾರಕವಾಗಿ ಬದಲಿಸಲು ಸೂಚನೆ ನೀಡಿದ್ದಾರೆ. ತಮಿಳುನಾಡು ರಾಜಕೀಯ ಬಿಕ್ಕಟ್ಟು ದಿನಗಳೆದಂತೆ ರೋಚಕ ತಿರುವು ಪಡೆಯುತ್ತಿದ್ದು, ಇದೀಗ ತಮ್ಮನ್ನು ಪಕ್ಷದಿಂದ ಉಚ್ಛಾಟಿಸಲು ಮುಂದಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರನ್ನು ಪೆÇೀಯಸ್ ಗಾರ್ಡನ್ ನಲ್ಲಿರುವ ಜಯಲಲಿತಾ ಅವರ ನಿವಾಸದಿಂದಲೇ ಹೊರಗೋಡಿಸಲು ಪನ್ನೀರ್ ಸೆಲ್ವಂ ನಿರ್ಧರಿಸಿದ್ದಾರೆ.
ಮುಸ್ಲಿಮರೂ ಹಿಂದೂಗಳೆಂದ ಮೋಹನ್ ಭಾಗವತ್
ಬೇತುಲ್, ಫೆ. 9: ಮುಸ್ಲಿಮರು ಪ್ರಾರ್ಥನೆ ಮಾಡುವ ರೀತಿ ಬೇರೆಯೇ ಆದರೂ, ರಾಷ್ಟ್ರೀಯತೆ ಬಂದಾಗ ಅವರೂ ಕೂಡ ಹಿಂದೂಗಳೇ ಎಂದು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುರುವಾರ ಹೇಳಿದ್ದಾರೆ. ಮಧ್ಯಪ್ರದೇಶದ ಬೇತುಲ್‍ನಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ಮಾತನಾಡಿರುವ ಅವರು, ಹಿಂದೂಸ್ತಾನದಲ್ಲಿ ವಾಸ ಮಾಡುವ ಎಲ್ಲಾ ಜನರು ಮತ್ತು ಹಿಂದೂ ಸಂಸ್ಕೃತಿಯನ್ನು ಗೌರವಿಸುವ ಎಲ್ಲರೂ ಹಿಂದೂಗಳೇ. ಮುಸ್ಲಿಮರು ಪ್ರಾರ್ಥನೆ ಮಾಡುವ ರೀತಿ ಬೇರೆಯೇ ಆದರೂ, ರಾಷ್ಟ್ರೀಯತೆಯ ಅನುಸಾರವಾಗಿ ಅವರೂ ಕೂಡ ಹಿಂದೂಗಳೇ ಆಗಿರುತ್ತಾರೆಂದು ಪ್ರತಿಪಾದಿಸಿದ್ದಾರೆ.
ಡಾ. ರಾಜ್ ಕುಟುಂಬದಿಂದ ಐಎಎಸ್ ಕೋಚಿಂಗ್ ಅಕಾಡೆಮಿ
ಬೆಂಗಳೂರು, ಫೆ. 9: ಡಾ. ರಾಜ್‍ಕುಮಾರ್ ಕುಟುಂಬದವರು ಐಎಎಸ್ ಕೋಚಿಂಗ್ ಅಕಾಡೆಮಿ ಸ್ಥಾಪಿಸುತ್ತಿದ್ದು, ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದರು. ಕೇಂದ್ರ ಲೋಕಸೇವಾ ಆಯೋಗ ನಡೆಸುವ ‘ನಾಗರಿಕ ಸೇವಾ ಪರೀಕ್ಷೆ’ಗಳಿಗೆ ತರಬೇತಿ ನೀಡುವ ಕೇಂದ್ರ ಉದ್ಘಾಟನೆಗೆ ಸಿದ್ಧವಾಗಿದೆ. ಡಾ. ರಾಜ್ ಕುಮಾರ್ ಟ್ರಸ್ಟ್ ವತಿಯಿಂದ ಚಂದ್ರಲೇಔಟ್‍ನಲ್ಲಿ ಐಎಎಸ್ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುವ ಕೇಂದ್ರ ಸ್ಥಾಪನೆಯಾಗಿದ್ದು, ಉದ್ಘಾಟನೆಗಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ರಾಘವೇಂದ್ರ ರಾಜ್ಕುಮಾರ್ ಆಹ್ವಾನಿಸಿದರು.
ಪಠ್ಯದಲ್ಲಿ ಬಸವಣ್ಣ ಜೀವನ ದರ್ಶನ
ಬೆಂಗಳೂರು, ಫೆ. 9: ಶಾಲಾ ಪಠ್ಯಗಳಲ್ಲಿ ಹೊಸದಾಗಿ ಬಸವಣ್ಣ, ಸಂಗೊಳ್ಳಿ ರಾಯಣ್ಣ, ಸಾವಿತ್ರಿ ಬಾ ಫುಲೆ ಕುರಿತ ಪಾಠಗಳನ್ನು ಹೊಸದಾಗಿ ಸೇರ್ಪಡೆ ಮಾಡಿ, ನಕಾರಾತ್ಮಕ ಸಂದೇಶ ಬೀರುತ್ತಿದ್ದ ಕೆಲವು ಪಾಠಗಳನ್ನು ಕೈಬಿಡಲಾಗಿದೆ. ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ಡಾ. ಬರಗೂರು ರಾಮಚಂದ್ರಪ್ಪ ಅವರು ಪಠ್ಯಪುಸ್ತಕ ಪರಿಷ್ಕರಣೆ ಕುರಿತಂತೆ ಪೂರ್ಣ ವಿವರಗಳನ್ನು ಒಳಗೊಂಡಿರುವ ವರದಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಸಲ್ಲಿಸಿದ್ದಾರೆ.