ಬೆಂಗಳೂರು, ಫೆ. 9: ಕೊಡಗು ಜಿಲ್ಲೆಯಲ್ಲಿ ಮೋಜು - ಮಸ್ತಿ, ಮಾಂಸಕ್ಕಾಗಿ 10 ಕಾಡು ಪ್ರಾಣಿಗಳನ್ನು ಹತ್ಯೆ ಮಾಡಲಾಗಿದ್ದು, ಹತ್ಯೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ದೋಷಾರೋಪಣಾ ಪಟ್ಟಿ ಸಲ್ಲಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ಸದನ ಅಧಿವೇಶನದಲ್ಲಿ ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಕಾಡು ಪ್ರಾಣಿಗಳನ್ನು ಮೋಜಿಗಾಗಿ ಮತ್ತು ಮಾಂಸಕ್ಕಾಗಿ ಕೊಂದ ಎಷ್ಟು ಪ್ರಕರಣ ಸರ್ಕಾರದ ಗಮನಕ್ಕೆ ಬಂದಿವೆ ಮತ್ತು ಕೈಗೊಂಡ ಕ್ರಮಗಳೇನು ಎಂದು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 262 ಕಳ್ಳ ಬೇಟೆ ಹಾಗೂ ಹತ್ಯೆ ಪ್ರಕರಣಗಳು ದಾಖಲಾಗಿವೆ.
ಬೆಂಗಳೂರು ಗ್ರಾಮಾಂತರದಲ್ಲಿ 1, ರಾಮನಗರ 15, ಬೆಳಗಾವಿ 1, ಬಾಗಲಕೋಟೆ 1, ವಿಜಯಪುರ 1, ಚಿಕ್ಕಮಗಳೂರು 32, ಚಾಮರಾಜನಗರ 90, ರಾಯಚೂರು 2, ಕಲಬುರಗಿ 1, ಬೀದರ್ 2, ಮಡಿಕೇರಿ 10, ಉತ್ತರ ಕನ್ನಡ 26, ದಕ್ಷಿಣ ಕನ್ನಡ 8, ಮಂಡ್ಯ 13, ಶಿವಮೊಗ್ಗ 51, ಮೈಸೂರು ಹುಲಿಯೋಜನೆ ವ್ಯಾಪ್ತಿಯ ನಾಗರಹೊಳೆಯಲ್ಲಿ 8 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.
ಹೊಸ ವರ್ಷಾಚರಣೆ ಸಂಬಂಧ ಚಿಕ್ಕಮಗಳೂರು ಭದ್ರಾ ಸಂರಕ್ಷಿತ ಪ್ರದೇಶದ ಬಫರ್ ಜೋನ್ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ 2 ಕಡವೆಗಳನ್ನು ಬೇಟೆಯಾಡಿದ ಪ್ರಕರಣದಲ್ಲಿ ಒಟ್ಟು 14 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ತರೀಕೆರೆ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣವು ವಿಚಾರಣಾ ಹಂತದಲ್ಲಿದ್ದು, ಆರೋಪಿಗಳು ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಬಿಡುಗಡೆಗೊಂಡಲ್ಲಿ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆಯಿರುವದರಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಬಾರದಾಗಿ ನ್ಯಾಯಾಲಯವನ್ನು ಕೋರಲಾಗಿದೆ ಎಂದು ಸುನೀಲ್ ಸುಬ್ರಮಣಿ ಅವರ ಪ್ರಶ್ನೆಗೆ ಉತ್ತರಿಸಿದರು.