ಶನಿವಾರಸಂತೆ, ಫೆ. 9: ಜಯದೇವ ಜಾನುವಾರುಗಳ ಜಾತ್ರಾ ಮಹೋತ್ಸವ ಸರ್ವಧರ್ಮಗಳ ಸಮನ್ವಯದ ಸಂಕೇತದಂತೆ ಭಾಸವಾಗುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಅಭಿಪ್ರಾಯಪಟ್ಟರು.
ಹಂಡ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಗುಡುಗಳಲೆ ಜಾತ್ರಾ ಮೈದಾನದಲ್ಲಿ 13 ದಿನಗಳು ನಡೆದ 72ನೇ ವರ್ಷದ ಜಯದೇವ ಜಾನುವಾರುಗಳ ಜಾತ್ರಾ ಮಹೋತ್ಸವದ ಮುಕ್ತಾಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಹಿರಿಯರು, ರೈತರು ಉತ್ತಮ ಭಾವನೆಯಿಂದ ಆರಂಭಿಸಿದ ಜಾತ್ರೆ ಇಂದಿನ ಆಧುನಿಕ ಯುಗದಲ್ಲೂ ಹಳೆಯ ಸಂಸ್ಕøತಿಯನ್ನು ಮರೆಯದೆ ಮುಂದುವರೆಸುವಂತೆ, ಜಾತ್ರಾ ಸಂಸ್ಕøತಿ ಬೆಳೆದು ಬರಲಿ ಎಂದರು.
ಕಲ್ಲುಮಠದ ಮಹಾಂತ ಸ್ವಾಮೀಜಿ ಮಾತನಾಡಿ, ಜಾತ್ರೆಗಳು ಸಮುದಾಯವನ್ನು ಒಗ್ಗೂಡಿಸುತ್ತವೆ. ಜಾತ್ರಾ ಮೈದಾನದಲ್ಲಿ ಗಿಡಗಳನ್ನು ನೆಟ್ಟು, ಶೌಚಾಲಯವನ್ನು ನಿರ್ಮಿಸುವಂತೆ ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಸಾವಿರಾರು ಜಾನುವಾರುಗಳು ಪಾಲ್ಗೊಳ್ಳುತ್ತಿದ್ದ ಹಿಂದಿನ ಜಾತ್ರೆಯ ಗತವೈಭವ ಮರುಕಳಿಸಬೇಕು. ಹಿಂದೂ, ಮುಸ್ಲಿಂ, ಕ್ರೈಸ್ತ ದೇವಾಲಯಗಳ ನಡುವಿರುವ ಜಾತ್ರಾ ಮೈದಾನದ ಅಭಿವೃದ್ಧಿಗೆ ಸರ್ವರೂ ಶ್ರಮಿಸಬೇಕು ಎಂದರು.
ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮಿ, ಜುಮಾ ಮಸೀದಿ ಗುರು ಸುಹೈಬ್ ಫೈಜಿ, ಜಿ.ಪಂ. ಸದಸ್ಯರಾದ ಪುಟ್ಟರಾಜು, ಸರೋಜಮ್ಮ, ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ಸದಸ್ಯ ಕುಶಾಲಪ್ಪ ಮಾತನಾಡಿದರು.
ಜಾತ್ರಾ ಸಮಿತಿ ಅಧ್ಯಕ್ಷ ಸೋಮಶೇಖರ್ ಮಾತನಾಡಿ, ಕಾಲಕ್ಕೆ ತಕ್ಕಂತೆ ಜಾತ್ರೆ ಬದಲಾಗುತ್ತಿದೆ. ಜಾತ್ರೆ ರೈತನ ಸಮೃದ್ಧಿ, ವಿರಾಮವನ್ನು ಅವಲಂಭಿಸಿದ್ದು, ಸಂತಸ ನೀಡುವ ಸ್ಥಳವಾಗಿದೆ ಎಂದರು. 3 ಗ್ರಾ.ಪಂ.ಗಳ ಅಧ್ಯಕ್ಷರಾದ ಎಚ್.ಎನ್. ಸಂದೀಪ್, ಮಹಮ್ಮದ್ ಗೌಸ್, ಸಿ.ಜೆ. ಗಿರೀಶ್, ಡಿ.ಬಿ. ಧರ್ಮಪ್ಪ, ರೂಪಾ, ಜಯಮ್ಮ, ಪಿಎಸ್.ಐ. ಮರಿಸ್ವಾಮಿ, ಶಿವಕುಮಾರ್, ವಾಣಿ, ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.