ಕುಶಾಲನಗರ, ಫೆ. 9: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ನದಿ ದಡಗಳಲ್ಲಿ ರಾಶಿ ಹಾಕಿರುವದಾಗಿ ಸಾರ್ವಜನಿಕರು ದೂರಿದ್ದಾರೆ. ಗ್ರಾಮ ಪಂಚಾಯಿತಿಯ ಬಡಾವಣೆಗಳ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಸ ಚೆಲ್ಲಾಡಿದ್ದು, ಶುಚಿತ್ವದ ಕೊರತೆ ಎದ್ದು ಕಾಣುತ್ತಿದೆ. ಸಾರ್ವಜನಿಕರು ಓಡಾಡಲು ಅಸಹನೀಯ ಪರಿಸ್ಥಿತಿ ಅಲ್ಲಲ್ಲಿ ನಿರ್ಮಾಣಗೊಂಡಿದೆ.
ಕಳೆದ ಕೆಲವು ವರ್ಷಗಳಿಂದ ಗ್ರಾಮದ ಕಸ ಸಂಗ್ರಹಿಸಿ ಗೊಂದಿ ಬಸವನಹಳ್ಳಿಯ ಕಲ್ಲುಕೋರೆಗಳಲ್ಲಿ ವಿಲೇವಾರಿ ಮಾಡಲಾಗುತಿತ್ತು. ಅಲ್ಲಿಯ ಗ್ರಾಮಸ್ಥರ ವಿರೋಧದ ಹಿನ್ನೆಲೆ ಕಸ ವಿಲೇವಾರಿಗೆ ಸಮರ್ಪಕ ವ್ಯವಸ್ಥೆಯಿಲ್ಲದೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಿ ನೋಡಿದರೂ ಕಸದ ರಾಶಿ ಕಂಡುಬರುತ್ತಿದೆ.
ಈ ಬಗ್ಗೆ ಪಂಚಾಯಿತಿ ಅಧ್ಯಕ್ಷೆ ಭವ್ಯ ಅವರಲ್ಲಿ ಪ್ರತಿಕ್ರಿಯೆ ಬಯಸಿದಾಗ, ಈ ಹಿಂದೆ ಪಂಚಾಯಿತಿ ವ್ಯಾಪ್ತಿಯ ಗೊಂದಿ ಬಸವನಹಳ್ಳಿಯ ನಿಷ್ಕ್ರಿಯಗೊಂಡಿದ್ದ ಕಲ್ಲುಕೋರೆಗಳಲ್ಲಿ ತ್ಯಾಜ್ಯ ಸುರಿಯಲಾಗುತಿತ್ತು. ಕೆಲವು ತಿಂಗಳಿಂದ ಅಲ್ಲಿನ ಗ್ರಾಮಸ್ಥರ ವಿರೋಧದಿಂದ ಕಸ ವಿಲೇವಾರಿಗೆ ಅನಾನುಕೂಲ ಉಂಟಾಗಿದೆ. ಪಂಚಾಯಿತಿ ವತಿಯಿಂದ ಕಂದಾಯ ಇಲಾಖೆಗೆ ಕಸ ವಿಲೇವಾರಿ ಮಾಡಲು ಸ್ಥಳ ಒದಗಿಸುವಂತೆ ಕೋರಲಾಗಿದೆ. ಈ ನಡುವೆ ಭುವನಗಿರಿಯಲ್ಲಿ ದಿನನಿತ್ಯ 1 ಟ್ರ್ಯಾಕ್ಟರ್ ಪ್ರಮಾಣದ ಕಸ ಸುರಿಯಲು ಕ್ರಮ ಕೈಗೊಂಡಿದ್ದೇವೆ ಎಂದಿದ್ದಾರೆ. ತಮ್ಮ ಮೇಲೆ ಆರೋಪ ಹೊರಿಸಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಗ್ರಾಮದ ಎಲ್ಲೆಡೆ ಕಸ ಎಸೆಯುವದು ಕಂಡುಬಂದಿದೆ ಎಂದು ಆರೋಪಿಸಿದ್ದಾರೆ.