ಆರೋಗ್ಯ ಎನ್ನುವದು ಪ್ರತಿಯೊಂದು ಜೀವಿಗೂ ಅವಶ್ಯಕ. ಜೀವಿ ಆರೋಗ್ಯದಿಂದ ಇದ್ದಾಗ ಮಾತ್ರ ಉತ್ಸಾಹದಿಂದ ಇರಲು ಸಾಧ್ಯ. ಅದರಲ್ಲಿಯೂ ಮಾನವನು ಆರೋಗ್ಯದಿಂದ ಇದ್ದಾಗ ಮಾತ್ರ ವಿಶೇಷ ಕಾರ್ಯಸಾಧನೆಯನ್ನು ಮಾಡಲು ಸಾಧ್ಯ ‘‘ವಯಸ್ಸಿಗನುಗುಣವಾಗಿ ಅತ್ಯುತ್ತಮ ಸೇವೆಯನ್ನು ನೀಡುತ್ತಾ ದೀರ್ಘಕಾಲ ಬದುಕಲು ಸಹಕಾರಿ ಯಾಗಿರುವ ದೈಹಿಕ ಗುಣಮಟ್ಟವೇ ಆರೋಗ್ಯ.

ಉತ್ತಮ ಆರೋಗ್ಯಕ್ಕಾಗಿ ಶರೀರದ ಬೆಳವಣಿಗೆಗೆ, ಪೋಷಣೆಗೆ ಮತ್ತು ರಕ್ಷಣೆಗೆ ಅವಶ್ಯಕವಿರುವ ಪೋಷಕಾಂಶಗಳನ್ನು ಪೂರೈಸುವ ಸತ್ವಪೂರ್ಣ ಸಮತೋಲನ ಆಹಾರ ನಮಗೆ ಬೇಕು.

ಆದರೆ ಇವತ್ತು ನಾವು ಸೇವಿಸುವ ಆಹಾರದ ಕಡೆಗೆ ಒಮ್ಮೆ ದೃಷ್ಟಿ ಹಾಯಿಸಿದಾಗ ‘‘ದಿನಕ್ಕೊಂದು ಸೇಬು ತಿನ್ನಿ, ವೈದ್ಯರಿಂದ ದೂರವಿರಿ’’ ಈ ಹಳೆಯ ವಾಕ್ಯವನ್ನು ‘‘ದಿನಕ್ಕೊಂದು ಸೇಬು ತಿನ್ನಿ, ಆಯುಷ್ಯದಲ್ಲಿ ಒಂದು ದಿನ ಕಡಿಮೆ ಮಾಡಿಕೊಳ್ಳಿ’’ ಎಂದು ಬದಲಾಯಿಸಬೇಕಾಗಿದೆ. ಕಾರಣ ಸೇಬಿನ ಗಿಡದಲ್ಲಿ ಹೂ ಬಿಡುವದರಿಂದ ಹಿಡಿದು ಕಾಯಿ ಪಕ್ವವಾಗುವವರೆಗೆ ಅದಕ್ಕೆ ಹಲವಾರು ಬಾರಿ ಕ್ರಿಮಿ ನಾಶಕ ಸಿಂಪಡಿಸುತ್ತಾರೆ. ಅದು ವಿಷವನ್ನು ಕುಡಿದು ಬೆಳೆದಿರುತ್ತದೆ. ಮಾತ್ರವಲ್ಲ. ನಮ್ಮೆದುರಿರುವ ಸೇಬು ಇಂದು, ನಿನ್ನೆ ಕಿತ್ತಿದ್ದಲ್ಲ. ಎಂದೋ ಕಿತ್ತು ಸಾಕಷ್ಟು ದಿನಗಳ ದೂರ ಪ್ರಯಾಣ ಮಾಡಿ, ಔಷಧಿ ಸಿಂಪಡಿಸಿ ಸಂರಕ್ಷಿಸಿರುವ ಸೇಬು ನಮ್ಮೆದುರು ಇಂದು ನಗುತ್ತದೆ.

ಇನ್ನು ಹಾಲು, ದಿನನಿತ್ಯ ತರಗತಿಯಲ್ಲಿ, ಮನೆಯಲ್ಲಿ ಮಕ್ಕಳಿಗೆ ಹಾಲು ಸೇವನೆಯ ಅಗತ್ಯತೆಯ ಬಗ್ಗೆ ತಿಳಿ ಹೇಳುತ್ತೇವೆ. ಶಾಲೆಯಲ್ಲಿ ಕ್ಷೀರಭಾಗ್ಯದ ಪ್ರಯೋಜನವನ್ನು ಕಡ್ಡಾಯವಾಗಿ ಪಡೆದುಕೊಳ್ಳ ಬೇಕಾಗಿದೆ. ಆದರೆ, ಇಡೀ ಪ್ರಪಂಚದಲ್ಲಿ ಮನುಷ್ಯನಲ್ಲದೇ ಸೃಷ್ಟಿಯ ಬೇರಾವ ಜೀವಿಯೂ ತನ್ನ ತಾಯಿಯ ಹಾಲನ್ನು ಹೊರತುಪಡಿಸಿ ಬೇರೆ ಜೀವಿಯ ಹಾಲು ಕುಡಿದು ಬದುಕುವದಿಲ್ಲ (ಬೆಕ್ಕಿಗೆ ನಾವೇ ಕಲಿಸಿದ್ದು) ಆದರೆ ಇಂದು ನಮಗೆ ಸರಬರಾಜಾಗುತ್ತಿರುವ ಹಾಲಿನ ಗುಣಮಟ್ಟದ ಬಗ್ಗೆ ಯೋಚಿಸಿದಾಗ ಮನುಷ್ಯನಿಗೆ ಬರುವ ಹಲವಾರು ರೋಗಗಳಿಗೆ ಹಾಲಿನ ಸೇವನೆಯೂ ಮುಖ್ಯ ಕಾರಣ ಎಂಬದು ಗೊತ್ತಾಗುತ್ತದೆ.

ಗದ್ದೆಯನ್ನು ಉತ್ತು, ಭತ್ತವನ್ನು ಬಿತ್ತಿ, ನಾಟಿ ಮಾಡಿ, ಬೆಳೆ ತೆಗೆಯುವವರೆಗೆ ಎಷ್ಟು ಬಾರಿ ರೋಗ ತಡೆಗೆ ಔಷಧಿ ಸಿಂಪಡಿಸುತ್ತೇವೆ. ಇನ್ನು ಬಳಸುವ ಗೊಬ್ಬರ, ನೀರು, ವಿಷದ ರಾಶಿಯನ್ನೇ ಹೊತ್ತು ತರುತ್ತದೆ. ನಂತರ ಭತ್ತವನ್ನು ಪಾಲಿಶ್ ಮಾಡಿ, ಬಿಳಿ ಅಕ್ಕಿ ಮಾಡಿ, ಕುಕ್ಕರ್‍ನಲ್ಲಿಟ್ಟು ವಿಷವನ್ನೆಲ್ಲಾ ಇಂಗಿಸಿ ತಿನ್ನುವ ಅನ್ನ ಇದೆಯಲ್ಲ ಆಹಾ...!, ಜೊತೆಗೆ ಇಂಜೆಕ್ಷನ್‍ನಲ್ಲೇ ಬೆಳೆದ ಕೋಳಿಯ ಮಾಂಸದ ಹುರಿದ, ಕರಿದ ಮಸಾಲೆಯ ಕಬಾಬ್, ಚಿಲ್ಲಿ ಚಿಕನ್, ಸಿಹಿಗಳ ರಾಶಿ, ಇವೆಲ್ಲ ಹೊಟ್ಟೆ ಸೇರುತ್ತದೆ. ಬಡಿಸಿರುವ ತರಕಾರಿಗಳು ಎಲೆಯ ಬದಿಯಲ್ಲಿ ಉಳಿದಿರುತ್ತದೆ.

ಕಾಫಿಯಲ್ಲಿ ಕೆಫೀನ್ ಇದೆ. ಟೀಯಲ್ಲಿ ಟ್ಯಾನಿನ್ ಇದೆ ಇದರಿಂದಾಗಿ ಕಾಫಿ ಟೀ ಸೇವಿಸುವಾಗ ಲವಲವಿಕೆ ಉಂಟಾಗುತ್ತದೆ. ರಾಸಾಯನಿಕ ವಸ್ತುಗಳಿಂದಲೇ ತಯಾರಾದ ವಿಷಮಯ ಪಾನೀಯಗಳು, ಫಾಸ್ಟ್‍ಫುಡ್ ಇಂದು ಭಾರಿ ಬೇಡಿಕೆಯ ಆಹಾರಗಳು, ಹೋಟೆಲ್, ಬೇಕರಿಗಳಿಂದಲೇ ಜೀವನ ಸಾಗಿಸುವ ನಮ್ಮ ಮುದ್ದು ಮಕ್ಕಳು ಇವರಿಗೆ ಎಷ್ಟು ಪೂರಕ ಸತ್ವಯುತ ಆಹಾರ ಒದಗಿಸುತ್ತಿದ್ದೇವೆ.

ಹೌದು, ನಾವು ತಿನ್ನುವ ಆಹಾರ, ಕುಡಿಯುವ ನೀರು, ಸೇವಿಸುವ ಗಾಳಿ, ಎಲ್ಲವೂ ವಿಷವೇ ಹಾಗಾದರೆ ಏನನ್ನು ತಿನ್ನುವದು, ಸಮುದ್ರ ಮಂಥನ ಮಾಡುವಾಗ ಹೊರ ಬಂದ ವಿಷವನ್ನು ಶಿವ ಕುಡಿದ ಗಂಟಲಲ್ಲಿ ತಡೆದಳು ಪಾರ್ವತಿ. ಶಿವ ವಿಷಕಂಠನಾದ, ನಾವು ವಿಷಕಂಠರಾಗುತ್ತಿದ್ದೇವೆಯೇ ? ಅಲ್ಲಲ್ಲ ಶಿವನಿಗೆ ಗಂಟಲಲ್ಲಿ ಮಾತ್ರ ವಿಷ. ಆದರೆ, ನಮಗೆ ಮೈಯೆಲ್ಲ ವಿಷ. ವಿಷವನ್ನು ತಿಂದು ಅರಗಿಸಿಕೊಳ್ಳಲು ಕಲಿತ ನಮಗೆ ವಿಷಕಂಠನಿಗಿಂತಲೂ ಎತ್ತರದ ಸ್ಥಾನ. ಹಾಗಾಗಿಯೇ ಓಡಿ ಹೋಗಿ ರೋಗವನ್ನು ಅಪ್ಪಿಕೊಳ್ಳುತ್ತಿದ್ದೇವೆ. ನಿಂಬೆ ಹಣ್ಣಿನ ಪಾನೀಯವಾಗಲಿ, ಕಾಳು ಮೆಣಸು, ಶುಂಠಿ, ಕೊತ್ತಂಬರಿ, ಲವಂಗ, ಇತ್ಯಾದಿ ಔಷಧೀಯ ವಸ್ತುಗಳಿಂದ ತಯಾರಿಸಿದ ಕಷಾಯ ನಮ್ಮ ಗಮನ ಸೆಳೆದಿದೆಯೇ ? ಮುಂದೆ ಆದರೂ ನಮ್ಮ ಆಹಾರ ಕ್ರಮ ಚಿಂತನೆಯ ಧಾಟಿಯಲ್ಲಿ ಬದಲಾವಣೆ ಆದೀತೆ ? ಮಕ್ಕಳ ಮನಸ್ಸನ್ನು ಒಳಿತು, ಕೆಡುಕುಗಳ ಕಡೆಗೆ ಸೆಳೆಯಲು ಸಾಧ್ಯವಾದೀತೆ? ಇದು ಯಕ್ಷ ಪ್ರಶ್ನೆಯಾಗಿಯೇ ಉಳಿದೀತು.

-ಅಲಿಮ ಅನಿಲ್,

ಗೋಣಿಕೊಪ್ಪಲು.