ಮಡಿಕೇರಿ, ಫೆ. 9: ಮೂಲ ಸೌಲಭ್ಯಕ್ಕೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವೀರಾಜಪೇಟೆ ತಾಲೂಕು ಹೆಬ್ಬಾಲೆ ಗ್ರಾಮದ ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 70-80 ವರ್ಷಗಳಿಂದ ಸರ್ವೆ ನಂ. 8/1 ಮತ್ತು 8/2ರ ದೇವರಕಾಡು ಪೈಸಾರಿಯಲ್ಲಿ ಯರವ ಮತ್ತು ಜೇನುಕುರುಬ ಜನಾಂಗಕ್ಕೆ ಸೇರಿದ ಸುಮಾರು 150 ಕುಟುಂಬಗಳು ವಾಸಿಸುತ್ತಿದ್ದು, ದೇವರಕಾಡಿನಿಂದಾಗಿ ಇಲ್ಲಿ ಮೂಲಭೂತ ಸೌಕರ್ಯಗಳಾದ ವಿದ್ಯುತ್, ಕುಡಿಯುವ ನೀರು, ರಸ್ತೆ ಮತ್ತು ಶೌಚಾಲಯ ಒದಗಿಸದೆ ವಂಚಿಸಲಾಗಿದೆ. ಇದರಿಂದ ಈ ಜನಾಂಗಕ್ಕೆ ಸೇರಿದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ಈ ಕಾರಣದಿಂದಾಗಿ ಓದುತ್ತಿದ್ದ ಹಲವು ಮಕ್ಕಳು ಶಾಲೆಯನ್ನು ತೊರೆದಿರುತ್ತಾರೆ. ರಾತ್ರಿ ವೇಳೆಯಲ್ಲಿ ಪ್ರಾಣಿಗಳ ಉಪಟಳದಿಂದ ಹಲವರು ತಮ್ಮ ಪ್ರಾಣವನ್ನು ಕಳೆದು ಕೊಂಡಿರುತ್ತಾರೆ. ನೀರಿಲ್ಲದ ಕಾರಣ ಒಂದು ಬಿಂದಿಗೆ ನೀರಿಗೋಸ್ಕರ ಹಲವಾರು ಕಿ.ಮೀ. ದೂರ ನಡೆದು ನೀರನ್ನು ಹೊತ್ತು ತರಬೇಕಾಗಿದ್ದು, ತುಂಬಾ ತೊಂದರೆಯನ್ನು ಅನುಭವಿಸುವಂತಾಗಿದೆ.
ದೇವರಪುರ ಗ್ರಾಮ ಪಂಚಾಯಿತಿ ಮನೆ ಕಂದಾಯವನ್ನು ಪಡೆದುಕೊಳ್ಳುತ್ತಿದ್ದು, ಜಿಲ್ಲಾ ಪಂಚಾಯತ್‍ನ ಮಾಜಿ ಅಧ್ಯಕ್ಷ ಜೆ.ಎ. ಕರುಂಬಯ್ಯ ಅವರ ಅವಧಿಯಲ್ಲಿ ದೇವರಕಾಡು ಪೈಸಾರಿಯಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ಹಕ್ಕುಪತ್ರ ನೀಡಲಾಗಿತ್ತು. ಆದರೆ ಇತ್ತೀಚೆಗೆ ಯಾವದೇ ರೀತಿಯ ಮೂಲಭೂತ ಸೌಕರ್ಯಗಳು ದೊರೆಯದಂತೆ ಷಡ್ಯಂತ್ರವನ್ನು ರೂಪಿಸಲಾಗಿದೆ. ಇದರಿಂದ ಸುಮಾರು ವರ್ಷದಿಂದ ಪರಿಶಿಷ್ಟ ಪಂಗಡಗಳು ಮೂಲಭೂತ ಸೌಕರ್ಯದಿಂದ ವಂಚಿತರಾಗಿ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಸಮಿತಿ ಆರೋಪಿಸಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾಡಳಿತ ಮತ್ತು ದೇವರಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ 15 ದಿವಸದೊಳಗೆ ಸೂಕ್ತ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಜಿಲ್ಲಾಧಿಕಾರಿಯವರ ಕಚೇರಿ ಮುಂದೆ ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹವನ್ನು ಹೂಡಲಾಗುವದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಈ ಸಂದರ್ಭ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್, ಸಮಿತಿ ಸದಸ್ಯರಾದ ರಜಿನಿಕಾಂತ್ ಹಾಗೂ ಇನ್ನಿತರರು ಇದ್ದರು.