ಗೋಣಿಕೊಪ್ಪಲು, ಫೆ. 9: ಅಭಿವೃದ್ಧಿ ದೃಷ್ಟಿಯಿಂದ ಶಿಥಿಲಾವಸ್ಥೆ ಯಲ್ಲಿದ್ದ ಕಟ್ಟಡವನ್ನು ತೆರವು ಗೊಳಿಸಲಾಗಿದೆ. ಇದನ್ನು ಕೆಲವರು ರಾಜಕೀಯವಾಗಿ ಬಳಸಿಕೊಂಡು ಕಾಂಗ್ರೆಸ್ ಬೆಂಬಲಿತ ಸದಸ್ಯರ ಮೇಲೆ ಗೂಬೆ ಕೂರಿಸುತ್ತಿರುವದು ಸರಿಯಲ್ಲ ಎಂದು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಪ್ರಮೋದ್ ಗಣಪತಿ ಹೇಳಿದರು.

ಡಿಸೆಂಬರ್ 26 ರಂದು ನಡೆದ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ಕೆಡವಿ ಜಿಲ್ಲಾ ಪಂಚಾಯಿತಿಯ 13ನೇ ಹಣಕಾಸು ಯೋಜನೆಯಲ್ಲಿ ಬಂದಿರುವ ರೂ. 20 ಲಕ್ಷ ಅನುದಾನವನ್ನು ಬಳಸಿಕೊಂಡು ಹೈಟೆಕ್ ಶೌಚಗೃಹ ನಿರ್ಮಿಸಲು ನಿರ್ಧರಿಸಲಾಗಿತ್ತು. ಇದರಂತೆ ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ ಸಮ್ಮುಖದಲ್ಲಿಯೇ ಕಟ್ಟಡ ಕೆಡವಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಾರ್ಚ್ ಒಳಗೆ ಕಾಮಗಾರಿ ಪ್ರಾರಂಭಿಸದಿದ್ದಲ್ಲಿ ಅನುದಾನ ಸರ್ಕಾರಕ್ಕೆ ಹಿಂದೆ ಹೋಗುತ್ತದೆ. ಇದನ್ನು ತಪ್ಪಿಸಲು ಆ ವಾರ್ಡ್‍ನ ಸದಸ್ಯರು ಮುಂದಾಗಿದ್ದಾರೆ. ಆದರೆ ಅಧ್ಯಕ್ಷೆ ಸೆಲ್ವಿ ಇದೀಗ ತಮ್ಮ ಗಮನಕ್ಕೆ ಬಾರದೇ ಕಟ್ಟಡ ಕೆಡವಿದ್ದಾರೆ ಎಂಬ ಆರೋಪ ಮಾಡುತ್ತಿರುವದು ಸತ್ಯಕ್ಕೆ ದೂರ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ ಅಭಿವೃದ್ಧಿಗೆ ತೊಡಕು ಮಾಡುತ್ತಿರುವದು ಒಳ್ಳೆಯ ಬೆಳವಣಿಗೆಯಲ್ಲ. ಸಾರ್ವಜನಿಕ ಸಮಸ್ಯೆಯನ್ನು ಬಗೆಹರಿಸುವ ಬದಲು ರಾಜಕೀಯವಾಗಿ ಇದನ್ನು ಬಳಸಿಕೊಂಡು ಸದಸ್ಯರನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಟೆಂಡರ್ ನೀಡಿದ ಗುತ್ತಿಗೆದಾರನಿಗೂ ಕೂಡ ಬೆದರಿಕೆಯೊಡ್ಡಿರುವದು ಅವರ ಸ್ಥಾನಕ್ಕೆ ಶೋಭೆ ತರುವದಿಲ್ಲ. ಮಾಧ್ಯಮಗಳ ಮೂಲಕ ಇವರು ತಪ್ಪು ಸಂದೇಶವನ್ನು ರವಾನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸದಸ್ಯೆ ಮಂಜುಳಾ ಮಾತನಾಡಿ, ಸದಸ್ಯರ ಮೇಲೆ ವಿನಾಃಕಾರಣ ಆರೋಪ ಹೊರಿಸುತ್ತಿರುವ ಜಿ.ಪಂ. ಸದಸ್ಯ ಬೋಪಣ್ಣ ಹಾಗೂ ಗ್ರಾ.ಪಂ. ಅಧ್ಯಕ್ಷೆಯಿಂದ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದೇವೆ. ಅಭಿವೃದ್ಧಿ ಕಾರ್ಯಕ್ಕೆ ಅಡ್ಡಗಾಲು ಹಾಕುತ್ತಿರುವ ಇವರ ನಡೆ ಖಂಡನೀಯ. ಕಟ್ಟಡ ಕೆಡವಿದ ಸಂದರ್ಭ ಅಧ್ಯಕ್ಷೆ ಮತ್ತು ಕೆಲ ಸದಸ್ಯರು ಅಲ್ಲೇ ಇದ್ದರು. ಆದರೆ ಇದೀಗ ತಮಗೆ ತಿಳಿಸಿಯೇ ಇಲ್ಲ ಎನ್ನುವ ಮೂಲಕ ತಮ್ಮ ವರಸೆ ಬದಲಾಯಿಸಿದ್ದಾರೆ. ಕಟ್ಟಡ ನೆಲಸಮಗೊಳಿಸುವ ಸಂದರ್ಭ ಮತ್ತೊಬ್ಬ ವಾರ್ಡ್ ಸದಸ್ಯ ಸುರೇಶ್ ರೈ ಕೂಡ ಸ್ಥಳದಲ್ಲಿದ್ದರು. ಆದರೆ ತಾನು ಮತ್ತು ಮುರುಗ ಅವರ ವಿರುದ್ಧ ಮಾತ್ರ ದೂರು ನೀಡಿದ್ದಾರೆ. ಇದು ರಾಜಕೀಯ ಲಾಭಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ತಮ್ಮನ್ನು ರಾಜೀನಾಮೆ ಕೇಳುವ ಜಿ.ಪಂ. ಸದಸ್ಯ ಹಾಗೂ ಗ್ರಾ.ಪಂ. ಅಧ್ಯಕ್ಷೆ ಮೊದಲು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಸದಸ್ಯರುಗಳಾದ ಧ್ಯಾನ್ ಸುಬ್ಬಯ್ಯ, ಕಲಿಮುಲ್ಲಾ ಹಾಗೂ ಮುರುಗ ಉಪಸ್ಥಿತರಿದ್ದರು.