ಕುಶಾಲನಗರ, ಫೆ. 9: ಸೋಮವಾರಪೇಟೆ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಎಂ.ಡಿ.ರಮೇಶ್, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ವಿಜಯ ಅವರು ಆಯ್ಕೆಯಾಗಿದ್ದಾರೆ. ಕುಶಾಲನಗರದ ಎಪಿಎಂಸಿ ಕೇಂದ್ರ ಸಭಾಂಗಣದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್‍ನ ರಮೇಶ್ ಹಾಗೂ ಜೆಡಿಎಸ್‍ನ ತಮ್ಮಯ್ಯ ಅವರ ನಡುವೆ ಮತದಾನ ನಡೆಯಿತು. ಒಟ್ಟು 15 ಮತಗಳ ಪೈಕಿ ರಮೇಶ್ ಅವರಿಗೆ 10, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ತಮ್ಮಯ್ಯ ಅವರಿಗೆ 5 ಮತಗಳು ಲಭಿಸಿದವು. 5 ಮತಗಳ ಅಂತರದಿಂದ ರಮೇಶ್ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಕೃಷ್ಣ ಅವರು ಘೋಷಣೆ ಮಾಡಿದರು.

ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಮತದಾನದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿಜಯ ಅವರಿಗೆ 9 ಮತಗಳು ಲಭಿಸಿದರೆ, ಜೆಡಿಎಸ್‍ನ ಗೋಪಾಲ್ ಅವರಿಗೆ 6 ಮತಗಳು ಲಭಿಸಿದವು.

ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ 1 ಮತ್ತು ವರ್ತಕ ಸ್ಥಾನ ಸೇರಿದಂತೆ ಒಟ್ಟು ಎರಡು ಸ್ಥಾನಗಳು ಲಭಿಸಿದ್ದರೂ 15 ಸದಸ್ಯರ ಬಲವಿರುವ ಸಮಿತಿಯಲ್ಲಿ 10 ಮತಗಳು ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರಿಗೆ ದೊರಕಿದ್ದು ಮಾತ್ರ ಎಲ್ಲರನ್ನು ಚಕಿತಗೊಳಿಸಿತು. ಇನ್ನೊಂದೆಡೆ 5 ಸ್ಥಾನ ಗಳಿಸಿದ ಬಿಜೆಪಿ ಬೆಂಬಲಿತ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ನಿಲ್ಲಿಸದೆ ಉಪಾಧ್ಯಕ್ಷರ ಸ್ಥಾನಕ್ಕೆ ಮಾತ್ರ ಸ್ಪರ್ಧೆ ನಡೆಸಿದ್ದು ಜೆಡಿಎಸ್ ಪ್ರಮುಖರನ್ನು ಆಕ್ರೋಶÀಕ್ಕೆ ಎಡೆಮಾಡಿತು. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪ್ರಮುಖ ಬಿ.ಎ.ಜೀವಿಜಯ ಸೇರಿದಂತೆ

(ಮೊದಲ ಪುಟದಿಂದ) 3 ಪಕ್ಷಗಳ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ತಮ್ಮ ನಿಲುವನ್ನು ಪ್ರಕಟಿಸಿದ್ದು ಕೂಡ ಕಂಡುಬಂತು. ಈ ಆಯ್ಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಳಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಧಿಕ್ಕಾರ ಕೂಗಿದ ಘಟನೆ ಜರುಗಿತು. ಅಧ್ಯಕ್ಷ, ಉಪಾಧ್ಯಕ್ಷ ಗಾದಿ ಹಿಡಿಯಲು ಕಾಂಗ್ರೆಸ್ ಮತ್ತು ಬಿಜೆಪಿ ಒಳ ಒಪ್ಪಂದದ ಮೂಲಕ ಅಧಿಕಾರ ಹಿಡಿದಿದೆ ಎಂದು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ದೃಶ್ಯ ಗೋಚರಿಸಿತು.