ಪಾಕ್ ಬೇಹುಗಾರಿಕೆ: 11 ಮಂದಿ ಬಂಧನ

ಭೋಪಾಲ್, ಫೆ. 10: ಮಧ್ಯಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಪಾಕಿಸ್ತಾನದ ಪರ ಭಾರತದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಜಾಲವನ್ನು ಪತ್ತೆ ಮಾಡಿದ್ದು 11 ಜನರನ್ನು ಬಂಧಿಸಿದೆ. ಬಂಧಿತರಿಂದ ಚೀನಾದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾರತೀಯ ಸೇನಾ ಕಾರ್ಯಾಚರಣೆಗಳ ಬಗ್ಗೆ ಬೇಹುಗಾರಿಕೆ ನಡೆಸಲು ನಿಯೋಜಿಸಲಾಗಿದ್ದ ತಂಡ ಚೀನಾ ಉಪಕರಣಗಳು ಹಾಗೂ ಸಿಮ್ ಕಾರ್ಡ್‍ಗಳ ಸಹಾಯದಿಂದ ಬೇಹುಗಾರಿಕೆ ನಡೆಸುತ್ತಿದ್ದವು ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಬೇಹುಗಾರಿಕಾ ಜಾಲದಲ್ಲಿ ಸಕ್ರಿಯರಾಗಿದ್ದ ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್‍ಐ ಬೆಂಬಲಿತ 11 ಜನರನ್ನು ಬಂಧಿಸಲಾಗಿದೆ. ಬಂಧಿತರು ಚೀನಾದ ಉಪಕರಣ ಹಾಗೂ ಸಿಮ್-ಬಾಕ್ಸ್‍ಗಳನ್ನು ಬಳಸಿಕೊಂಡು ಪರ್ಯಾಯ ದೂರವಾಣಿ ಎಕ್ಸ್‍ಚೇಂಜ್‍ಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಸಿಮ್ ಬಾಕ್ಸ್, ಮೊಬೈಲ್ ಫೆÇೀನ್, ಲ್ಯಾಪ್ ಟಾಪ್, ಡಾಟಾ ಕಾರ್ಡ್, ಪ್ರೀಪೇಯ್ಡ್ ಸಿಮ್ ಕಾರ್ಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಮೂವರನ್ನು ಭೋಪಾಲ್‍ನಲ್ಲಿ ಬಂಧಿಸಲಾಗಿದ್ದು, ಸತ್ನಾದಲ್ಲಿ ಓರ್ವನನ್ನು, ಜಬಲ್‍ಪುರದಲ್ಲಿ ಇಬ್ಬರು ಹಾಗೂ ಐವರನ್ನು ಗ್ವಾಲಿಯರ್‍ನಲ್ಲಿ ಬಂಧಿಸಲಾಗಿದ್ದು, ಬಂಧಿತರ ವಿರುದ್ಧ ಐಪಿಎಸಿ ಸೆಕ್ಷನ್ 122 ಹಾಗೂ 123 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯ ಸರ್ಕಾರದಿಂದ ಕಂಬಳ ಪರ ಮಸೂದೆ ಮಂಡನೆ

ಬೆಂಗಳೂರು, ಫೆ. 10: ರಾಜ್ಯ ಸರ್ಕಾರ ಕಂಬಳ ಮತ್ತು ಎತ್ತಿನ ಬಂಡಿ ಓಟಕ್ಕೆ ಕಾನೂನು ಮಾನ್ಯತೆ ದೊರಕಿಸಿ ಕೊಡಲು ಅನುವಾಗುವಂತೆ ಶುಕ್ರವಾರ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ತಿದ್ದುಪಡಿ ಮಸೂದೆ 2017 ಅನ್ನು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದೆ. ರಾಜ್ಯದಲ್ಲಿ ಕಂಬಳ ಮತ್ತು ಎತ್ತಿನ ಬಂಡಿ ಓಟ ನಡೆಸಲು ಅನುವಾಗುವಂತೆ ಕೇಂದ್ರ ಅಧಿನಿಯಮ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಕಾಯ್ದೆ-1960ಕ್ಕೆ ತಿದ್ದುಪಡಿ ತರಲಾಗುತ್ತಿದೆ. ತಿದ್ದುಪಡಿ ವಿಧೇಯಕವನ್ನು ಸಮರ್ಥಿಸಿಕೊಂಡ ಸರ್ಕಾರ, ಇದೊಂದು ಜಾನಪದ ಕ್ರೀಡೆಯಾಗಿದ್ದು, ಈ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ರಕ್ಷಿಸುವ ಉದ್ದೇಶದಿಂದ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದು ಹೇಳಿದೆ.

ಅಗ್ನಿ ಶ್ರೀಧರ್‍ಗೆ ಮಧ್ಯಂತರ ಜಾಮೀನು ಮಂಜೂರು

ಬೆಂಗಳೂರು, ಫೆ. 10: ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಮೇಲೆ ಗುಂಡಿನ ಧಾಳಿ ಪ್ರಕರಣದ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪ ಎದುರಿಸುತ್ತಿರುವ ಪತ್ರಕರ್ತ ಅಗ್ನಿ ಶ್ರೀಧರ್ ಅವರಿಗೆ ಸೆಷನ್ಸ್ ಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಅಗ್ನಿ ಶ್ರೀಧರ್ ಅವರು ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಂಧನದ ಭೀತಿಯಿಂದ ಆಸ್ಪತ್ರೆಯಿಂದಲೇ ತಮ್ಮ ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ ಸೆಷನ್ಸ್ ಕೋರ್ಟ್, 15 ದಿನಗಳ ಮಧ್ಯಂತರ ಜಾಮೀನು ನೀಡಿ ಆದೇಶಿಸಿದೆ. ರೌಡಿಗಳಿಗೆ ಆಶ್ರಯ ನೀಡಿದ್ದ ಮಾಹಿತಿ ಮೇರೆಗೆ ಇತ್ತೀಚೆಗೆ ಪೆÇಲೀಸರು ಅಗ್ನಿ ಶ್ರೀಧರ್ ಮನೆ ಮೇಲೆ ಧಾಳಿ ನಡೆಸಿದ್ದರು.

ಕೇರಳದಲ್ಲಿ ಡಿವೈಎಫ್‍ಐ ಕಾರ್ಯಕರ್ತನ ಬರ್ಬರ ಹತ್ಯೆ

ಆಲಪುಳ, ಫೆ. 10: ಕೇರಳದ ಹರಿಪಡ್ ಸಮೀಪದ ಕರುವಟ್ಟದಲ್ಲಿ ಡಿವೈಎಫ್‍ಐ ಕಾರ್ಯಕರ್ತರೊಬ್ಬರನ್ನು ಶುಕ್ರವಾರ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆಯಾದ ಡಿವೈಎಫ್‍ಐ ಕಾರ್ಯಕರ್ತ 22 ವರ್ಷದ ಜಿಶ್ನು ಎಂದು ಗುರುತಿಸಲಾಗಿದ್ದು, ಇಂದು ಮಧ್ಯಾಹ್ನ 12.30ರ ಸುಮಾರಿಗೆ 10 ಜನರ ತಂಡವೊಂದು ದ್ವಿಚಕ್ರ ವಾಹನದಲ್ಲಿ ಅವರ ಮನೆಗೆ ನುಗ್ಗಿ ಹತ್ಯೆ ಮಾಡಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಜಿಶ್ನು ಡಿವೈಎಫ್‍ಐ ಹರಿಪಡ್ ಪ್ರದೇಶ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿದ್ದು, ಕ್ರಿಮಿನಲ್ ಗ್ಯಾಂಗ್‍ವೊಂದು ಹಣಕ್ಕಾಗಿ ಅವರನ್ನು ಹತ್ಯೆ ಮಾಡಿದೆ ಎಂದು ಸ್ಥಳೀಯ ಸಿಪಿಎಂ ನಾಯಕರು ಹೇಳಿದ್ದಾರೆ. ಸಿಪಿಎಂ ನಾಯಕರ ಪ್ರಕಾರ, ಜಿಶ್ನು ಹಾಗೂ ಇತರ ಡಿವೈಎಫ್‍ಐ ಕಾರ್ಯಕರ್ತರು ಆ ಗ್ಯಾಂಗ್ ವಿರುದ್ಧ ಪ್ರತಿಭಟನೆ ಮಾಡಿದ್ದರು. ಈ ದ್ವೇಷವೇ ಕೊಲೆಗೆ ಕಾರಣ ಎನ್ನಲಾಗಿದೆ.

ಎಐಎಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಇ. ಮಧುಸೂದನನ್ ವಜಾ

ಚೆನ್ನೈ, ಫೆ. 10: ತಮಿಳುನಾಡು ಆಡಳಿತರೂಢ ಎಐಎಡಿಎಂಕೆಯ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿದ್ದು, ಪಕ್ಷದ ಕಾರ್ಯಕಾರಿ ಅಧ್ಯಕ್ಷ ಇ.ಮಧುಸೂದನನ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಶುಕ್ರವಾರ ವಜಾಗೊಳಿಸಲಾಗಿದೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಅವರು ಮಧುಸೂದನನ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿ ಇಂದು ಆದೇಶ ಹೊರಡಿಸಿದ್ದಾರೆ. ಅಲ್ಲದೆ ನೂತನ ಕಾರ್ಯಕಾರಿ ಅಧ್ಯಕ್ಷರನ್ನಾಗಿ ಮಾಜಿ ಸಚಿವ ಕೆ.ಎ. ಸೆಂಗೊಟ್ಟಯ್ಯನ್ ಅವರನ್ನು ನೇಮಕ ಮಾಡಿದ್ದಾರೆ. ಮಧುಸೂದನನ್ ಅವರು ನಿನ್ನೆಯಷ್ಟೆ ಶಶಿಕಲಾ ನಾಯಕತ್ವದ ವಿರುದ್ಧ ತಿರುಗಿಬಿದ್ದಿರುವ ಹಂಗಾಮಿ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಅವರಿಗೆ ಬೆಂಬಲ ಘೋಷಿಸಿದ್ದರು. ಅಲ್ಲದೆ ಶಶಿಕಲಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದನ್ನು ವಿರೋಧಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಇನ್ನು ಮಾಜಿ ಕೇಂದ್ರ ಸಚಿವ ಇ. ಪೆÇನ್ನುಸಾಮಿ ಅವರು ಶಶಿಕಲಾ ಅವರು ನೀಡಿದ ಆಹ್ವಾನವನ್ನು ತಿರಸ್ಕರಿಸಿದ್ದು, ತಾವು ಓ ಪನ್ನೀರ್ ಸೆಲ್ವಂ ಅವರಿಗೆ ಬೆಂಬಲ ನೀಡುವದಾಗಿ ಹೇಳಿದ್ದಾರೆ. ಇಂದು ಪನ್ನೀರ್ ಸೆಲ್ವಂ ಅವರನ್ನು ಭೇಟಿ ಮಾಡಿ ಬೆಂಬಲ ಘೋಷಿಸಿದ ಪೆÇನ್ನುಸಾಮಿ, ಪನ್ನೀರ್ ಸೆಲ್ವಂ ಅವರು ಒಬ್ಬ ಪ್ರಮಾಣಿಕ ನಾಯಕ. ಹೀಗಾಗಿ ಪಕ್ಷ ಉಳಿಸಲು ಎಲ್ಲರೂ ಓಪಿಎಸ್‍ಗೆ ಬೆಂಬಲ ನೀಡಿ ಎಂದು ಮನವಿ ಮಾಡಿದ್ದಾರೆ.

ಮಾ. 1 ರಿಂದ ಬಿಎಂಟಿಸಿಯಲ್ಲಿ ಕ್ಯಾಶ್‍ಲೆಸ್ ವ್ಯವಹಾರ

ಬೆಂಗಳೂರು, ಫೆ. 10: ಪ್ರಸಕ್ತ ವರ್ಷದ ಮಾ. 1 ರಿಂದ ಬಿಎಂಟಿಸಿ ಎಸಿ ವೊಲ್ವೋ ಬಸ್‍ಗಳಲ್ಲಿ ಕ್ಯಾಶ್‍ಲೆಸ್ ವ್ಯವಹಾರ ಆರಂಭಿಸಲಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಕಾಡುಗೋಡಿಗೆ ಸಂಚರಿಸುವ ಪೈಲಟ್ ಬಸ್‍ಗಳಲ್ಲಿ ಮೊದಲ ಬಾರಿಗೆ ಸ್ಮಾರ್ಟ್‍ಕಾರ್ಡ್ ಬಳಸುವ ಸೌಲಭ್ಯ ಆರಂಭವಾಗಲಿದೆ. ಏಪ್ರಿಲ್ ತಿಂಗಳ ಅಂತ್ಯದೊಳಗೆ ಎಲ್ಲಾ ಮಾರ್ಗಗಳ ಬಿಎಂಟಿಸಿ ಬಸ್‍ಗಳಲ್ಲಿ ಕ್ಯಾಶ್‍ಲೆಸ್ ವ್ಯವಹಾರ ಪ್ರಾರಂಭವಾಗಲಿದೆ, ಈ ತಿಂಗಳಾಂತ್ಯದ ವೇಳೆಗೆ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸ್ಮಾರ್ಟ್‍ಕಾರ್ಡ್‍ಗಳನ್ನು ಮಾರಾಟ ಮಾಡುವ ಕೌಂಟರ್ ತೆರೆಯಲಾಗುತ್ತದೆ. ದೇಶದಲ್ಲೇ ಮೊದಲ ಬಾರಿಗೆ ಸರ್ಕಾರಿ ಸಾರಿಗೆ ಬಸ್‍ಗಳಲ್ಲಿ ಕ್ಯಾಶ್‍ಲೆಸ್ ಸೌಲಭ್ಯ ಒದಗಿಸುತ್ತಿರುವ ಕೀರ್ತಿ ರಾಜ್ಯಕ್ಕೆ ಸಲ್ಲುತ್ತದೆ. ಬಿಎಂಟಿಸಿ ಸಿಬ್ಬಂದಿಗೆ ಪ್ರಾಯೋಗಿಕವಾಗಿ ಸ್ಮಾರ್ಟ್‍ಕಾರ್ಡ್ ಸೌಲಭ್ಯ ಆರಂಭಿಸಿರುವದಾಗಿ ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಕ್ರಿಕೆಟಿಗರ ಟಾಪ್ 10 ಪಟ್ಟಿಗೆ ಕೊಹ್ಲಿ ಸೇರ್ಪಡೆ

ಹೈದರಾಬಾದ್, ಫೆ. 10: ಹೈದರಾಬಾದ್‍ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ಶತಕಗಳಿಸಿದ ಕ್ರಿಕೆಟಿಗರ ಟಾಪ್ 10 ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಶತಕದೊಂದಿಗೆ ಕೊಹ್ಲಿ ತಮ್ಮ ಶತಕಗಳ ಸಂಖ್ಯೆಯನ್ನು 43ಕ್ಕೆ ಏರಿಸಿಕೊಂಡಿದ್ದು, ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದ್ದಾರೆ. ಮತ್ತೊಂದು ಪ್ರಮುಖ ಅಂಶವೆಂದರೆ ಈ ಪಟ್ಟಿಗೆ ಸೇರ್ಪಡೆಯಾದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಕೀರ್ತಿಗೂ ಕೊಹ್ಲಿ ಪಾತ್ರರಾಗಿದ್ದು, ಒಟ್ಟು 100 ಶತಕಗಳನ್ನು ಸಿಡಿಸಿರುವ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಗ್ರ ಸ್ಥಾನದಲ್ಲಿದ್ದಾರೆ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಇದೇ ಸಚಿನ್ ತೆಂಡೂಲ್ಕರ್ ತಮ್ಮ ದಾಖಲೆಗಳನ್ನು ಯಾರು ಮುರಿಯಬಲ್ಲರು ಎಂಬ ಪ್ರಶ್ನೆಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಸುರೇಶ್ ರೈನಾ ಹೆಸರುಗಳನ್ನು ಹೇಳಿದ್ದರು. ಸಚಿನ್ ಅವರ ಹೇಳಿಕೆಯಂತೆಯೇ ವಿರಾಟ್ ಕೊಹ್ಲಿ ತಮ್ಮ ಉತ್ತಮ ಪ್ರದರ್ಶನದ ಮೂಲಕ ಸಚಿನ್ ದಾಖಲೆಗಳನ್ನು ಹಿಂಬಾಲಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ವಯಸ್ಸು ಈಗಿನ್ನೂ 28 ವರ್ಷ. ಅದಾಗಲೇ ವಿಶ್ವದ ಅತೀ ಹೆಚ್ಚು ಶತಕಗಳಿಸಿದ ಟಾಪ್ 10 ಕ್ರಿಕೆಟಿಗರ ಪಟ್ಟಿ ಸೇರಿರುವದು ಕೊಹ್ಲಿ ಸಚಿನ್ ದಾಖಲೆಯನ್ನು ಮುರಿಯುತ್ತಾರೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.