ಮಡಿಕೇರಿ, ಫೆ. 10: ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮಡಿಕೇರಿ ತಾ.ಪಂ.ನೊಂದಿಗೆ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ ಸ್ಪಂದಿಸದೇ ಅಸಹಕಾರ ತೋರುತ್ತಿದ್ದಾರೆ ಎಂದು ಮಡಿಕೇರಿ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಆರೋಪಿಸಿದ್ದಾರೆ.

ತಾ.ಪಂ. ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು 2016ರ ಮೇ ತಿಂಗಳಲ್ಲಿ ತಾನು ಅಧಿಕಾರ ವಹಿಸಿಕೊಂಡಂದಿನಿಂದಲೂ ಜನಪ್ರತಿನಿಧಿಗಳೊಂದಿಗೆ ಅಗೌರವದಿಂದ ವರ್ತಿಸುತ್ತಿದ್ದಾರೆ. ತಾ.ಪಂ.ನಲ್ಲಿ 21 ಸಿಬ್ಬಂದಿಗಳು ಇರಬೇಕಾಗಿದ್ದು, ಇದೀಗ 6 ಮಂದಿ ಸಿಬ್ಬಂದಿಗಳು ಮಾತ್ರ ಇದ್ದಾರೆ. ಅವರಲ್ಲಿಯೂ ತಮ್ಮ ಕಚೇರಿಯ

(ಮೊದಲ ಪುಟದಿಂದ) ಮೇಲ್ವಿಚಾರಕಿಯನ್ನು ಉದ್ದೇಶಪೂರ್ವಕವಾಗಿ ಪೊನ್ನಂಪೇಟೆಗೆ 3 ದಿನ ನಿಯೋಜನೆ ಮಾಡಿದ್ದಾರೆ. ಡಿಸೆಂಬರ್‍ನಲ್ಲಿ ಅಧಿಕಾರ ವಹಿಸಿಕೊಂಡ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಕೇವಲ ಎರಡು ತಿಂಗಳ ಒಳಗೆ ಸಿಇಓ ಅವರ ಕಿರುಕುಳ ತಾಳಲಾರದೆ ವರ್ಗಾವಣೆ ಮಾಡಿಸಿಕೊಂಡು ಬೇರೆಡೆ ತೆರಳಿದ್ದಾರೆ ಎಂದು ಆರೋಪಿಸಿದರು.

ಜನಪ್ರತಿನಿಧಿಗಳು, ಆಡಳಿತ ಮಂಡಳಿ ನಿರ್ಣಯ ಮಾಡಿದ್ದನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕಾರ್ಯರೂಪಕ್ಕೆ ತರಬೇಕು. ಆದರೆ ಕಾರ್ಯನಿರ್ವಹಣಾಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ತೋರುತ್ತಿಲ್ಲ. ತಾ.ಪಂ. ಸಿಬ್ಬಂದಿಗಳನ್ನು ಬೇರೆಡೆಗೆ ನಿಯೋಜನೆ ಮಾಡುತ್ತಿದ್ದಾರೆ. ಇದರಿಂದ ತಮ್ಮ ಕಚೇರಿಯ ಕೆಲಸ - ಕಾರ್ಯಗಳು ಸುಗಮವಾಗಿ ನಡೆಯಲು ತೊಂದರೆಯಾಗಿದೆ. ಈ ಬಗ್ಗೆ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರದ ಗಮನಕ್ಕೂ ತರಲಾಗಿದೆ. ಆದರೆ ಯಾವದೇ ಪ್ರಯೋಜನವಾಗುತ್ತಿಲ್ಲ. ಈ ಹಿಂದೆ ಜಿ.ಪಂ. ಅಧ್ಯಕ್ಷರೊಂದಿಗೆ ಸಿಇಓ ಅವರ ಕಚೇರಿಗೆ ತೆರಳಿದನ್ನೇ ನೆಪವಾಗಿಟ್ಟುಕೊಂಡು ಸಿಇಓ ತನ್ನನ್ನು ಗುರಿ ಮಾಡಿದ್ದಾರೆ ಎಂದು ತೆಕ್ಕಡೆ ಶೋಭಾ ಆರೋಪಿಸಿದರು.

ಸಿಬ್ಬಂದಿಗಳ ಕೊರತೆಯಿಂದ ತಾ.ಪಂ. ಅನುದಾನ ಬಳಕೆ, ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿದೆ. ತಾ.ಪಂ. ಕಚೇರಿಯ ಸಿಬ್ಬಂದಿಗಳನ್ನು ಮತ್ತೆ ಇಲ್ಲಿಯೇ ನಿಯೋಜನೆ ಮಾಡಬೇಕು. ಲಂಚ ಸ್ವೀಕಾರದ ಆರೋಪವಿರುವ ಪಂಚಾಯಿತಿ ಕಾರ್ಯದರ್ಶಿಗಳ ವಿರುದ್ಧ ಕ್ರಮಕೈಗೊಳ್ಳುವ ಬದಲು ಸಿಇಓ ಅವರನ್ನು ವರ್ಗಾವಣೆಗೊಳಿಸಿ ಬೇರೊಬ್ಬರನ್ನು ಜಿಲ್ಲೆಗೆ ನಿಯೋಜಿಸುವಂತೆ ಆಗ್ರಹಿಸಿ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಲಾಗುವದು ಎಂದು ಇದೇ ಸಂದರ್ಭ ಅವರು ತಿಳಿಸಿದರು. ಸರ್ಕಾರದ ಗಮನಕ್ಕೆ ತಂದಿದ್ದರೂ ಇದುವರೆಗೂ ಯಾವದೇ ಕ್ರಮಕೈಗೊಂಡಿಲ್ಲ. ಈ ಬಗ್ಗೆ ಮುಂದಿನ ತಾ.ಪಂ. ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ವರದಿ ನೀಡಲಾಗುವದು ಎಂದು ಹೇಳಿದರು. ಈ ಸಂದರ್ಭ ತಾ.ಪಂ. ಸದಸ್ಯರಾದ ಉಮಾಪ್ರಭು, ದಬ್ಬಡ್ಕ ಶ್ರೀಧರ್, ಕುಮುದಾ ಇದ್ದರು.