ಕುಶಾಲನಗರ, ಫೆ. 10: ಕುಶಾಲನಗರ ಪಟ್ಟಣ ಪಂಚಾಯಿತಿಯಲ್ಲಿ ಕುಂದು ಕೊರತೆಗಳನ್ನು ಆಲಿಸಲು ಬಂದ ಜಿಲ್ಲಾಧಿಕಾರಿ ಡಾ. ಆರ್.ವಿ. ಡಿಸೋಜ ಅವರಿಗೆ ಕುಶಾಲನಗರ ಪಟ್ಟಣ ವ್ಯಾಪ್ತಿಯ ಜನತೆಯಲ್ಲದೆ ನೆರೆಯ ಪಂಚಾಯಿತಿಯ ಜನಪ್ರತಿನಿಧಿಗಳು, ನಾಗರಿಕರು ತಮ್ಮ ಸಮಸ್ಯೆಗಳನ್ನು ತೋಡಿಕೊಳ್ಳಲು ಸರದಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡುಬಂತು.
ಮುಖ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಬೇಡಿ, ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿಯಬೇಡಿ, ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಕುಶಾಲನಗರ ಪಟ್ಟಣ ಪಂಚಾಯಿತಿ ಜೊತೆ ಒಪ್ಪಂದ ಮಾಡಿ, ನಮ್ಮ ಮನೆ ಇರುವ ಬಡಾವಣೆಗೆ ರಸ್ತೆ ಸಂಪರ್ಕ ಕಲ್ಪಿಸಿ ಅಂದುಕೊಂಡು ಬಂದ ಕೆಲವು ದೂರುಗಳಾದರೆ, ಇನ್ನೊಂದೆಡೆ ಅಧಿಕಾರಿಗಳ ಮೇಲೆ ಆಪಾದನೆಗಳು ಕೂಡ ಕೇಳಿಬಂದವು. ಗ್ರಾಮಗಳಲ್ಲಿ ಸ್ಮಶಾನದ ಕೊರತೆ, ಬಡಜನತೆಗೆ ಸೂರು ಇತ್ಯಾದಿ ದೂರುಗಳ ನಡುವೆ
ಸರಕಾರಿ ಜಾಗವನ್ನು ಸರಕಾರಿ ಅಧಿಕಾರಿಗಳೇ ನುಂಗುತ್ತಿದ್ದಾರೆ ಎನ್ನುವ ಆರೋಪಗಳು ದಾಖಲೆ ಸಹಿತ ಜಿಲ್ಲಾಧಿಕಾರಿಗಳ ಗಮನಕ್ಕೆ ಕೆಲವರು ನೀಡಿದರು. ಕುಶಾಲನಗರ ಪಟ್ಟಣದಲ್ಲಿ 30x40 ವಿಸ್ತೀರ್ಣದ ನಿವೇಶನದಲ್ಲಿ ಅಕ್ರಮವಾಗಿ 5 ಬಹುಮಹಡಿ ಕಟ್ಟಡ ನಿರ್ಮಾಣಗೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಬಗ್ಗೆಯೂ ಸೇರಿದಂತೆ ನೂರಾರು ಜನರಿಂದ ಜಿಲ್ಲಾಧಿಕಾರಿಗಳ ಗಮನಕ್ಕೆ ಸಮಸ್ಯೆಗಳ ಮಹಾಪೂರವೇ ಹರಿದುಬಂತು.
ಈ ನಡುವೆ ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಖಾಸಗಿ ರೆಸಾರ್ಟ್ ಮಾಲೀಕನೊಬ್ಬ ಅಕ್ರಮವಾಗಿ ನದಿ ಒತ್ತುವರಿ ಮಾಡಿ ಕಲುಷಿತ ನೀರು ಹರಿಯುತ್ತಿರುವ ಬಗ್ಗೆ ಪತ್ರಿಕೆಯಲ್ಲಿ ಬರೆದು ತನಗೆ ಮಾನನಷ್ಟ ಉಂಟು ಮಾಡುತ್ತಿದ್ದಾರೆ ಎನ್ನುವ ದೂರು ಕೂಡ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದು ವಿಶೇಷವಾಗಿತ್ತು. ಈ ಎಲ್ಲಾ ದೂರುಗಳನ್ನು ಶಾಂತಿಯುತವಾಗಿ ಆಲಿಸಿದ ಜಿಲ್ಲಾಧಿಕಾರಿಗಳು ಮುಂದಿನ ಕೆಲವು ದಿನಗಳಲ್ಲಿ ಇನ್ನೊಂದು ಸಭೆ ಏರ್ಪಡಿಸಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮಕ್ಕೆ ಮುಂದಾಗುವದಾಗಿ ಭರವಸೆ ನೀಡಿದರು.