ಚೆಟ್ಟಳ್ಳಿ, ಫೆ. 10: ನಗದು ರಹಿತ ಡಿಜಿಟಲ್ ಆರ್ಥಿಕ ವ್ಯವಹಾರವನ್ನು ಹೇಗೆ ಮಾಡಬಹುದು, ಅದರ ಅವಶ್ಯಕತೆ ಎಷ್ಟಿದೆ ಎಂಬದರ ಬಗ್ಗೆ ನಬಾರ್ಡ್ ವ್ಯವಸ್ಥಾಪಕ ಎಂ.ಸಿ. ನಾಣಯ್ಯ ಚೆಟ್ಟಳ್ಳಿಯಲ್ಲಿ ಮಾಹಿತಿಯಿತ್ತರು.
ಡೆಬಿಟ್ ಕಾರ್ಡ್, ಎ.ಟಿ.ಎಂ. ಕಾರ್ಡ್, ಕ್ರೆಡಿಟ್ ಕಾರ್ಡ್ ಬಳಸಿದರೆ ಹಣದ ದುರುಪಯೋಗ ಆಗುವದಿಲ್ಲ. ಹಣದ ಹರಿವು ಕಡಿಮೆಗೊಳ್ಳುತ್ತದೆ. ಹಾಗೆಯೇ ಆನ್ಲೈನ್ ವ್ಯವಹಾರ ಮಾಡುವಾಗ ವಂಚಿತ ಜಾಲದಿಂದ ಹೇಗೆ ಸುರಕ್ಷತೆ ವಹಿಸಬೇಕೆಂದು ತಿಳಿಸಿಕೊಟ್ಟರು. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ಕೆ.ಸಿ.ಸಿ. ಸಾಲಗಾರರಿಗೆ ರೂಪೇ ಕಾರ್ಡ್ನ್ನು ವಿತರಿಸಲಾಗುವದು.
ನಗದು ರಹಿತ ವ್ಯವಹಾರವನ್ನು ಈಗಾಗಲೇ ಚಲಾವಣೆಯಲ್ಲಿರುವ ನೆಫ್ಟ್, ಆರ್.ಟಿ.ಜಿ.ಎಸ್., ಮೊಬೈಲ್ ಬ್ಯಾಂಕಿಂಗ್, ಡಿ.ಡಿ. ಮುಖಾಂತರ ವ್ಯವಹರಿಸಬಹುದು.
ಮೊಬೈಲ್ನಲ್ಲಿ ಆಪ್ಗಳನ್ನು ಡೌನ್ಲೋಡ್ ಮಾಡುವ ಮೂಲಕವೂ ವ್ಯವಹರಿಸಬಹುದು. ಡಿಜಿಟಲ್ ಆರ್ಥಿಕ ವ್ಯವಹಾರದ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂಬದನ್ನು ತಿಳಿಸಿದರು.
ಚೆಟ್ಟಳ್ಳಿಯಲ್ಲಿ ಕೃಷಿ ಪತ್ತಿನ ಸಂಘದ ನರೇಂದ್ರ ಮೋದಿ ರೈತ ಸಹಕಾರ ಭವನದಲ್ಲಿ ಕಾರ್ಯಾ ಗಾರವನ್ನು ಏರ್ಪಡಿಸಲಾಗಿತ್ತು.
ಅಧ್ಯಕ್ಷತೆಯನ್ನು ಚೆಟ್ಟಳ್ಳಿ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸ್ವ-ಸಹಾಯ ಸಂಘಗಳ ನೋಡೆಲ್ ಅಧಿಕಾರಿ ಟಿ.ಎಸ್. ತುಂಗರಾಜು, ಆಗಮಿಸಿ ನಗದು ರಹಿತ ವ್ಯವಹಾರವನ್ನು ಹೇಗೆ ಮಾಡಬಹುದು ಎಂಬದರ ಬಗ್ಗೆ ತಿಳಿಸಿದರು. ಕೆ.ಡಿ.ಸಿ.ಸಿ. ಬ್ಯಾಂಕ್ನ ಸಾಕ್ಷರತಾ ಸಂಪನ್ಮೂಲ ವ್ಯಕ್ತಿ ರಶಿತ ಪ್ರಾತ್ಯಕ್ಷತೆ-ನಗದು ರಹಿತ ವ್ಯವಹಾರದ ಬಗ್ಗೆ ಪ್ರೋಜೆಕ್ಟರ್ ಮುಖಾಂತರ ಮಾಹಿತಿ ಒದಗಿಸಿದರು.
ಸಂಘದ ಉಪಾಧ್ಯಕ್ಷ ಹೆಚ್.ಎಸ್. ತಿಮ್ಮಪ್ಪಯ್ಯ ಸ್ವಾಗತಿಸಿದರು. ಸಂಘದ ಸದಸ್ಯರು ಚೆಟ್ಟಳ್ಳಿಯ ಶಾಲಾ ಮಕ್ಕಳು, ಅಧ್ಯಾಪಕರು, ಸ್ವ-ಸಹಾಯ ಸಂಘದ ಸದಸ್ಯರುಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಕ್ಯಾಂಟೀನ್ ಮಾಹಿತಿ
ಮಡಿಕೇರಿ, ಫೆ. 10: ಆರ್ಮಿ ಕ್ಯಾಂಟಿನ್ಗೆ ಸರಕು ಬರುವದರಿಂದ ತಾ. 14 ರಿಂದ ವ್ಯಾಪಾರ ವಹಿವಾಟು ನಡೆಯಲಿದೆ ಎಂದು ಕ್ಯಾಂಟೀನ್ ವ್ಯವಸ್ಥಾಪಕರು ತಿಳಿಸಿದ್ದಾರೆ.