ಮಡಿಕೇರಿ, ಫೆ. 10: ಕಿರುಗೂರು ಗ್ರಾಮ ಪಂಚಾಯಿತಿಯ ಕಿರುಗೂರು ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು, ತಾ. 12ರಂದು ಚುನಾವಣೆ ನಡೆಯಲಿದೆ. ಕಿರುಗೂರು ಗ್ರಾ.ಪಂ. ಹಾಲಿ ಸದಸ್ಯರಾಗಿದ್ದ, ಮಾಜಿ ಅಧ್ಯಕ್ಷ ಚೆಪ್ಪುಡಿರ ದಿನು ಕಿಶೋರ್ ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಆಲೇಮಾಡ ಸುಧೀರ್ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕೋದೇಂಗಡ ಶಂಭು ನಾಣಯ್ಯ ಸ್ಪರ್ಧಾ ಕಣದಲ್ಲಿದ್ದು, ಈ ಉಪಚುನಾವಣೆ ತೀವ್ರ ಕುತೂಹಲ ಸೃಷ್ಟಿಸಿದೆ. ಅಬ್ಬರದ ಪ್ರಚಾರ ನಡೆದಿದ್ದು, ತಾ. 10ಕ್ಕೆ ಪ್ರಚಾರ ಮುಕ್ತಾಯಗೊಂಡಿದೆ.
ಒಟ್ಟು 1294 ಮತದಾರರಿದ್ದು, ಎರಡು ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಮನೆ ಮನೆ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಪರವಾಗಿ ಯುವಕರ ದಂಡೇ ಪ್ರಚಾರಕ್ಕಿಳಿದಿತ್ತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯೊಂದಿಗೂ ಕೆಲವಾರು ಹಿರಿಯರು ಪ್ರಚಾರ ನಡೆಸಿದ್ದಾರೆ.
ವಿಶೇಷವೆಂದರೆ ಎದುರಾಳಿ ಅಭ್ಯರ್ಥಿಗಳು ಬೇರೆ ಬೇರೆ ಸಂಘ - ಸಂಸ್ಥೆಗಳಲ್ಲಿ ಒಟ್ಟಿಗೆ ಕೆಲಸ ನಿರ್ವಹಿಸುತ್ತಿರುವವರಾಗಿದ್ದಾರೆ.
ಕೋದೇಂಗಡ ಶಂಭು ನಾಣಯ್ಯ ಅವರು ಅಲ್ಲಿನ ಮಹದೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಹಾಗೂ ನಲ್ಲೂರು ವಿ.ಎಸ್.ಎಸ್.ಎನ್. ಬ್ಯಾಂಕ್ನ ಉಪಾಧ್ಯಕ್ಷ ಹಾಗೂ ಮಹದೇಶ್ವರ ದೇವಾಲಯ ಸಮಿತಿಯ ನಿರ್ದೇಶಕ ಮತ್ತು ಕಿರುಗೂರು- ನಲ್ಲೂರು ಹೋಬಳಿ ಬಿಜೆಪಿ ಅಧ್ಯಕ್ಷ ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಹಾಗೂ ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಈ ಚುನಾವಣೆ ಕುತೂಹಲ ಸೃಷ್ಟಿಸಿದೆ. ತಾ. 15ರಂದು ಮತ ಎಣಿಕೆ ನಡೆಯಲಿದ್ದು, ಉತ್ತರಕ್ಕೆ ಆತನಕ ಕಾಯಬೇಕಿದೆ.