ಸೋಮವಾರಪೇಟೆ,ಫೆ.10: ರೈತರ ಬಗ್ಗೆ ಕಾಳಜಿ ಇಲ್ಲದೇ ಸ್ವಾರ್ಥ ರಾಜಕಾರಣ ಮಾಡುತ್ತಾ ಬಂದಿರುವ ಜೆಡಿಎಸ್ನ ಮುಖಂಡ ಜೀವಿಜಯ ಅವರಿಗೆ ಕಾಂಗ್ರೆಸ್ ವಿರುದ್ಧ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಬಗ್ಗೆ ಜೀವಿಜಯ ಅವರು ಮಾಡಿರುವ ಆರೋಪಕ್ಕೆ ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತಿರುಗೇಟು ನೀಡಿದ ಹಿರಿಯ ಕಾಗ್ರೆಸ್ ಮುಖಂಡ, ಜಿ.ಪಂ. ಮಾಜೀ ಸದಸ್ಯರೂ ಆಗಿರುವ ಹೆಚ್.ಸಿ. ನಾಗೇಶ್, ಜೀವಿಜಯ ಅವರು ತಮ್ಮ ಸ್ವಾರ್ಥಕ್ಕಾಗಿ ರಾಜಕೀಯ ಕ್ಷೇತ್ರದಲ್ಲಿದ್ದಾರೆಯೇ ಹೊರತು ರೈತರ ಪರವಾಗಿ ಯಾವದೇ ಕಾಳಜಿ ಹೊಂದಿಲ್ಲ ಎಂಬದು ಆರ್ಎಂಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಿಂದ ಬಯಲಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಈರ್ವರು ಸದಸ್ಯರಲ್ಲಿ ಓರ್ವರಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವಿತ್ತು. ಅದರಂತೆ ರಾಜ್ಯದಲ್ಲಿ ಆಡಳಿತದಲ್ಲಿರುವ ಪಕ್ಷವಾದ ಹಿನ್ನೆಲೆ ಕಾಂಗ್ರೆಸ್ನ ರಮೇಶ್ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಎಲ್ಲಾ ಸದಸ್ಯರೊಂದಿಗೂ ಮತಯಾಚನೆ ಮಾಡಿದ್ದಾರೆ. ಅದರಂತೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದು, 15 ಸದಸ್ಯರಲ್ಲಿ 10 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಗುಪ್ತವಾಗಿ ನಡೆದ ಮತದಾನವಾದರೂ ಸಹ ಜೀವಿಜಯ ಅವರು ಕಪೋಲಕಲ್ಪಿತರಾಗಿ ಬಿಜೆಪಿಯೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ ಎಂದು ಆರೋಪಿಸುತ್ತಿರುವದು ಖಂಡನೀಯ ಎಂದರು.
ಜೆಡಿಎಸ್ ಸೇರಿರುವ ಜೀವಿಜಯ ಅವರು ಕಾಂಗ್ರೆಸ್ ಪಕ್ಷದ ನಾಯಕರನ್ನು ಉಚ್ಛಾಟಿಸಬೇಕೆಂದು ಆಗ್ರಹಿಸಿರುವದರಲ್ಲಿ ಯಾವದೇ ಅರ್ಥವಿಲ್ಲ. ಜೆಡಿಎಸ್ನಲ್ಲಿ 2ನೇ ಹಂತದ ನಾಯಕರನ್ನು ಬೆಳೆಸದ ಜೀವಿಜಯ ಅವರು ಕೇವಲ ಚುನಾವಣೆ ಸಂದರ್ಭ ಮಾತ್ರ ಚಟುವಟಿಕೆಯಲ್ಲಿರುತ್ತಾರೆ. ಇದೇ ತನ್ನ ಕೊನೆಯ ಚುನಾವಣೆ ಎಂದು ಕಳೆದ ನಾಲ್ಕು ಚುನಾವಣೆಯನ್ನು ಎದುರಿಸಿರುವ ಜೀವಿಜಯ ಅವರಿಗೆ ನಿಜವಾಗಿಯೂ ರೈತರ ಪರವಾದ ಕಾಳಜಿಯಿದ್ದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ತಮ್ಮ ಪಕ್ಷಕ್ಕೆ ಉಪಾಧ್ಯಕ್ಷ ಸ್ಥಾನ ಪಡೆಯಬಹುದಿತ್ತು ಎಂದು ನಾಗೇಶ್ ಹೇಳಿದರು.
ಆರ್ಎಂಸಿಯಲ್ಲಿ ಕಾಂಗ್ರೆಸ್ ಸದಸ್ಯ ಅಧ್ಯಕ್ಷರಾಗಿರುವದರಿಂದ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಾಯಕವಾಗುತ್ತದೆ. ಇದರೊಂದಿಗೆ ಕೊಡಗಿನ ಆರ್ಎಂಸಿ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ದಲಿತ ವ್ಯಕ್ತಿಯೋರ್ವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಂತಹ ಅವಕಾಶವನ್ನು ಕಾಂಗ್ರೆಸ್ ಒದಗಿಸಿಕೊಟ್ಟಿದೆ. ಜಾತ್ಯತೀತ ಎಂದು ಹೇಳಿಕೊಳ್ಳುವ ಜೆಡಿಎಸ್ ದಲಿತ ವ್ಯಕ್ತಿಗೆ ಅಧಿಕಾರ ತಪ್ಪಿಸಲು ಯತ್ನಿಸಿ ಕೈ ಸುಟ್ಟುಕೊಂಡಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ನಂದಕುಮಾರ್ ಟೀಕಿಸಿದರು.
ತಾನು ಈ ಹಿಂದೆ ಸದಸ್ಯನಾಗಿದ್ದ ಸಂದರ್ಭ ಎಲ್ಲಾ ಪಕ್ಷದವರ ವಿಶ್ವಾಸಗಳಿಸಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡು ಕೋಟ್ಯಾಂತರ ರೂಪಾಯಿ ಅನುದಾನದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಅಂತೆಯೇ ಕಾಂಗ್ರೆಸ್ನ ರಮೇಶ್ ಅವರೂ ಸಹ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದರಲ್ಲಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸಿಲ್ಲ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜೀ ಅಧ್ಯಕ್ಷ, ತಾ.ಪಂ. ಸದಸ್ಯ ಬಿ.ಬಿ. ಸತೀಶ್ ಹೇಳಿದರು.
ಜೀವಿಜಯ ಅವರ ಪಕ್ಷ ನಿಷ್ಠೆ ಕಳೆದ ಎಂಎಲ್ಸಿ ಮತ್ತು ಎಂಪಿ ಚುನಾವಣೆಯಲ್ಲೇ ಗೊತ್ತಾಗಿದೆ. ತಮ್ಮ ಮಗನನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿದ ಇವರಿಂದ ಕಾಂಗ್ರೆಸ್ ಯಾವದೇ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಗೋಷ್ಠಿಯಲ್ಲಿದ್ದ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಲಾರೆನ್ಸ್ ಹೇಳಿದರು.
ಗೋಷ್ಠಿಯಲ್ಲಿ ಪಕ್ಷದ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್, ವಕ್ತಾರ ಅಜ್ಜಳ್ಳಿ ರವಿ, ಕಿರಗಂದೂರು ಗ್ರಾ.ಪಂ. ಉಪಾಧ್ಯಕ್ಷ ಲೋಕೇಶ್, ಭರತ್ ಅವರುಗಳು ಉಪಸ್ಥಿತರಿದ್ದರು.