‘‘ಸೂಳ್ ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್’’ ಪಂಪ ಮಹಾಕವಿ ‘‘ಪಂಪ ಭಾರತದಲ್ಲಿ ಭೀಷ್ಮರಿಂದ ಕರ್ಣನಿಗೆ ಹೇಳಿಸಿದ ಮಾತುಗಳು ಇಂದಿಗೂ ಪ್ರಸ್ತುತ. ಮಹಾಭಾರತ ಯುದ್ಧದ ಸೇನಾಪಟ್ಟವನ್ನು ದುರ್ಯೋಧನನು ಭೀಷ್ಮರಿಗೆ ಕಟ್ಟುವಾಗ ಸಭೆಯಲ್ಲಿದ್ದ ಕರ್ಣನಿಗೆ ತಡೆಯಲಾಗಲಿಲ್ಲ. ‘‘ಈ ವಯಸ್ಸಾದ ಮುದುಕನಿಗೆ ಏಕೆ ಪಟ್ಟ ಕಟ್ಟುತ್ತೀರಿ ? ಕಟ್ಟಿದ ಪಟ್ಟ ಹುಲ್ಲಿನ ಹಗ್ಗದಂತೆ ಕಾಣುವದು. ಅವರಲ್ಲಿರುವ ಆವೇಷ ಭಗವತಿಯ ಏರುವಿನಂತೆ ಎಂದೋ ಆಗಿ ಹೋದ ಕತೆಯಾಗಿದೆ. ನನಗೆ ಪಟ್ಟ ಕಟ್ಟಿದರೆ ತಕ್ಷಣವೇ ಶತ್ರುಗಳ ನಿಟ್ಟಿಲುವನ್ನು ಮುರಿದು ಹಾಕುತ್ತೇನೆ’’ ಎನ್ನುತ್ತಾನೆ ಕರ್ಣ. ತುಂಬಿದ ಸಭೆಯಲ್ಲಿ ಪಾಂಡವ-ಕೌರವರ ಹಿರಿಯ ತಾತನನ್ನು ಈ ರೀತಿಯಾಗಿ ಅವಾಚ್ಯ ನುಡಿಗಳನ್ನಾಡಿ ಅವಮಾನಿಸಿದ್ದರಿಂದ ದ್ರೋಣರು ಕರ್ಣನಿಗೆ ಕುಲದ ಬಗ್ಗೆ ಹೀನಾಯ ಮಾತುಗಳನ್ನಾಡಬೇಕಾಯಿತು. ಆಗ ಕರ್ಣ ನೊಂದು ಈ ಯುದ್ಧದಲ್ಲಿ ನಾನು ಶಸ್ತ್ರವನ್ನೇ ಹಿಡಿಯುವದಿಲ್ಲ ಎಂದು ಪ್ರತಿಜ್ಞೆ ಮಾಡಿದಾಗ, ಭೀಷ್ಮರು ಕರ್ಣನಿಗೆ ಹೇಳಿದ ಕಿವಿ ಮಾತು ಸಾರ್ವಕಾಲಿಕ ಸತ್ಯ. ನಿನಗೂ ಯುದ್ಧದಲ್ಲಿ ಯುದ್ಧ ಮಾಡಲು ಸರದಿ ಬರುತ್ತದೆ. ಸರದಿಗಾಗಿ ಕಾಯುವಂತವನಾಗು. ಆದರೆ, ಇಂದು ‘ಕಾಯುವಿಕೆ ಇದೆಯೇ ? ಉದ್ಯೋಗದಲ್ಲಾಗಲೀ, ಸೇವಾ ಹಿರಿತನದಲ್ಲಾಗಲೀ, ಆಸ್ತಿ ವಿಂಗಡಣೆಯಲ್ಲಾಗಲೀ ಎಲ್ಲಿ ತಾನೆ ಕಾಯುವಿಕೆ ಇದೆ ? ಎಲ್ಲವನ್ನೂ ತಾನೇ ಪಡೆದುಕೊಳ್ಳಬೇಕೆಂಬ ದುರಾಸೆ. ಸ್ವಲ್ಪ ವರ್ಷ ಸಹಿಸಿಕೊಂಡರೆ ತನಗೂ ಸಿಗಬೇಕಾದ ಅವಕಾಶ ಸಿಕ್ಕಿಯೇ ಸಿಗುತ್ತದೆ ಎಂಬ ಭಾವನೆ ಜನರಲ್ಲಿ ಮರೆಯಾಗುತ್ತಿದೆ. ಒಬ್ಬರ ಅವಕಾಶವನ್ನು ಇನ್ನೊಬ್ಬರು ಕಿತ್ತುಕೊಳ್ಳುವ ಅವಸರ, ಸರದಿ ಮೀರುವ ತವಕ ಇದು ಇಂದು ಎಲ್ಲಾ ರಂಗದಲ್ಲಿ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ರಾಜಕೀಯ ರಂಗವಾಗಲಿ, ಧಾರ್ಮಿಕ ರಂಗವಾಗಲಿ, ಸಾಮಾಜಿಕ ರಂಗವಾಗಲಿ ವಿವಿಧÀ ಕ್ಷೇತ್ರಗಳಲ್ಲಿ ಎಲ್ಲಾ ಕಡೆ ಸರದಿ ಮೀರಿ ಅನ್ಯರ ಅವಕಾಶಗಳನ್ನು ಕಿತ್ತು ತಾನು ಅನುಭೋಗಿಸುವ ಪ್ರವೃತ್ತಿ ದಿನೇ ದಿನೇ ಹೆಚ್ಚಾಗುತ್ತಲಿದೆ. ಇಂತಹ ದುರಾಶೆಗಳಿಂದ ಸರದಿ ಮೀರುವ ಪ್ರವೃತ್ತಿಯಿಂದ ಸಾಮಾಜಿಕ ಜೀವನ ಅಸ್ತವ್ಯಸ್ತವಾಗುತಲಿದೆ. ಯಾರಲ್ಲೂ ನಂಬಿಕೆ ಉಳಿಯುತ್ತಿಲ್ಲ; ಸಂಶಯಗ್ರಸ್ಥ ಮನೋಭಾವ, ದುರಾಶೆ, ಅಧಿಕಾರದ ವ್ಯಾಮೋಹ, ಲೋಭ, ಮೋಸ, ವಂಚನೆ ದೌರ್ಜನ್ಯ ಇದರಿಂದ ಹೆಚ್ಚಾಗುತ್ತದೆ. ವಿದ್ಯಾವಂತರು ನಿಜವಾದ ಅರ್ಥದಲ್ಲಿ ಸಜ್ಜನ ಸಂಪನ್ನರಾಗಬೇಕಿದೆ. ಮುಂದಿನ ಪೀಳಿಗೆಗೆ ಇಂದಿನ ಪೀಳಿಗೆಯವರು ಆದರ್ಶರಾಗಬೇಕಿದೆ. ಇಲ್ಲದಿದ್ದರೆ ಆತ್ಮೀಯತೆ, ಪ್ರೀತಿ, ವಿಶ್ವಾಸಗಳಿಲ್ಲದ ಸಮಾಜ ನಿರ್ಮಾಣವಾಗುವದ ರಲ್ಲಿ ಸಂದೇಹವಿಲ್ಲ. ಸಮರ್ಪಣಾ ಮನೋಭಾವದ ಕಾರ್ಯದಕ್ಷತೆಯ, ಶಿಸ್ತಿನ, ತಾಳ್ಮೆಯ, ನೆಮ್ಮದಿ ತಂಬಿದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಕೈ ಜೋಡಿಸೋಣ.
-ಪ್ರೋ. ದಂಬೆಕೋಡಿ ಸುಶೀಲಾ ಸುಬ್ರಮಣಿ, ಮೂರ್ನಾಡು.