ಮಡಿಕೇರಿ, ಫೆ. 10: ಒಂದು ರಸ್ತೆ ನಿರ್ಮಿಸಿದರೆ ಸಾಮಾನ್ಯವಾಗಿ ಒಂದು ವರ್ಷ ಬಾಳುವದೇ ಕಷ್ಟ. ಅಷ್ಟರಲ್ಲಾಗಲೇ ಕಿತ್ತು ಹೋಗಿರುತ್ತದೆ. ಅಂತಹದ್ದರಲ್ಲಿ 25 ವರ್ಷಗಳಿಂದ ಡಾಮರು ಕಾಣದ ರಸ್ತೆಯ ಪರಿಸ್ಥಿತಿ ಹೇಗಿರಬಹುದು. ತೀರಾ ಹದಗೆಟ್ಟು ನಡೆದಾಡಲೂ ಕೂಡ ಕಷ್ಟಕರವಾಗಿ ಪರಿಣಮಿಸಿದ್ದ, ಕಳೆದ 25 ವರ್ಷಗಳಿಂದ ಕೇವಲ ತೇಪೆ ಭಾಗ್ಯ ಮಾತ್ರ ಕಂಡಿದ್ದ ಮುತ್ತಪ್ಪ ದೇವಾಲಯ ಬಳಿಯಿಂದ ಕಾನ್ವೆಂಟ್ವರೆಗಿನ ರಸ್ತೆಗೆ ಇದೀಗ ಡಾಮರು ಕಾಣುವ ಭಾಗ್ಯ ಬಂದಿದೆ.ನಗರಸಭೆ ನಿಧಿಯಿಂದ ವಾರ್ಡ್ನ ಸದಸ್ಯೆ, ಮಾಜಿ ಉಪಾಧ್ಯಕ್ಷೆ ಲೀಲಾ ಶೇಷಮ್ಮ ಅವರ ಪ್ರಯತ್ನದ ಫಲವಾಗಿ ರೂ. 18 ಲಕ್ಷ ವೆಚ್ಚದಲ್ಲಿ ಡಾಮರು ಹಾಕಲಾಗುತ್ತಿದೆ. ರಸ್ತೆಯಲ್ಲಿ ಹಿಡಿಶಾಪ ಹಾಕುತ್ತಲೇ ಸಾಗುತ್ತಿದ್ದ ವಾಹನ ಚಾಲಕರು, ವಿದ್ಯಾರ್ಥಿಗಳು ಸಮಾಧಾನ ಪಡುವಂತಾಗಿದೆ.