ಮಡಿಕೇರಿ, ಫೆ. 10: ತಾ. 11ರ ಬೆಳಗಿನ ಜಾವ 4.04 ಗಂಟೆಗೆ ನಡೆಯುವ ಚಂದ್ರಗ್ರಹಣವನ್ನು ಭಾರತದಲ್ಲಿ ನೋಡಬಹುದು. ಗ್ರಹಣಕ್ಕೆ ಮೋಕ್ಷ 8.23 ಗಂಟೆ. ಗ್ರಹಣವು ಮೂಲ- ಮುಖ್ಯ ರಾಶಿಯಾದ ಕಟಕ ರಾಶಿಯಲ್ಲಿ ನಡೆಯುವದರಿಂದ ಗ್ರಹಣದ ಪರಿಣಾಮವು ಬೇಗನೇ ಆಗುತ್ತದೆ. ಇದರಿಂದ ಆಡಳಿತಾರೂಢ ಪಕ್ಷಕ್ಕೆ ಅಥವಾ ಉನ್ನತ ಅಧಿಕಾರವನ್ನು ಹೊತ್ತಿರುವವರಿಗೆ ತೊಂದರೆಯಾಗಬಹುದು. ರಾಜಕಾರಣಿಗಳೇ ಅಲ್ಲದೆ ಉನ್ನತ ಸರ್ಕಾರಿ ಹುದ್ದೆಯಲ್ಲಿರುವವರಿಗೂ ಕಷ್ಟಗಳು ಎದುರಾಗಬಹುದು. ಇದರಿಂದ ಸರ್ಕಾರಿ ಕಟ್ಟಡಗಳು, ಕಚೇರಿಗಳು ನಾಶವಾಗುವ ಸಂದರ್ಭ ಎದುರಾಗಬಹುದು. ಸಮುದ್ರದಲ್ಲಿ ಸುನಾಮಿ ಏಳಬಹುದು. ಹಡಗು, ದೋಣಿ ಮುಳುಗಬಹುದು. ಜಲವಿಷಪೂರಿತವಾಗಿ ಜಲಚರಗಳು ನಾಶವಾಗಬಹುದು. ಹೆಸರುವಾಸಿಯಾದವರ ಪ್ರಾಣಕ್ಕೆ ಧಕ್ಕೆ ಬರಬಹುದು. ವಿರೋಧ ಪಕ್ಷಗಳು ಕಾರಣಾಂತರದಿಂದ ಪ್ರತಿಭಟಿಸಬಹುದು. ದೊಂಬಿ, ಗಲಾಟೆ ಆಗಬಹುದು. ಭಾರತ ದೇಶದ ಮುಖ್ಯವಾದ ಹೆಂಗಸೊಬ್ಬರಿಗೆ ಆರೋಗ್ಯ ಕೈಕೊಡಬಹುದು. ಗ್ರಹಣದ ಪರಿಣಾಮವು ಮೇ 15ರ ತನಕ ಇರುವದು. ವೈಯಕ್ತಿಕವಾಗಿ ಕಟಕ, ಸಿಂಹ, ವೃಶ್ಚಿಕ, ವೃಷಭ, ಧನುಸ್ಸು ರಾಶಿಯವರು ಮತ್ತು ಲಗ್ನದವರು ಎಲ್ಲಾ ತರಹದಲ್ಲೂ ಎಚ್ಚರಿಕೆಯಿಂದಿರುವದು ಒಳಿತು ಎಂದು ಜ್ಯೋತಿಷ್ಯ ಪ್ರವೀಣೆ ಕರೋಟಿರ ಶಶಿ ಸುಬ್ರಮಣಿ ತಿಳಿಸಿದ್ದಾರೆ.