ಶ್ರೀಮಂಗಲ, ಫೆ. 10: ಕೊಡಗಿನ ಬೆಳೆಗಾರರ ಆರ್ಟಿಸಿಯಲ್ಲಿನ ಬೆಳೆ ಕಲಂನಲ್ಲಿ, ಬೆಳೆ ನಮೂದಿಸುವಾಗ ಉಂಟಾಗಿದ್ದ ಲೋಪವನ್ನು ಸರಿಪಡಿಸಲು, ಹಲವು ತಿಂಗಳಿನಿಂದ ಸತಾಯಿಸುತ್ತಿದ್ದ ಕಂದಾಯ ಇಲಾಖೆಯ ದೋರಣೆಯನ್ನು ವಿಚಾರಿಸಲು ಯುಕೊ ಸಂಘಟನೆ ಕಾರ್ಯಕರ್ತರು, ಸಂಚಾಲಕರಾದ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರ ನೇತೃತ್ವದಲ್ಲಿ ಪೊನ್ನಂಪೇಟೆ ಕಂದಾಯ ಇಲಾಖೆ ಕಚೇರಿಗೆ ದಿಢೀರ್ ಬೇಟಿ ನೀಡಿ ಗ್ರಾಮ ಲೆಕ್ಕಿಗ ರಮೇಶ್ ಪವಾರ್ ಎಂಬವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಕೇವಲ ಒಂದು ತಾಸಿನ ಅವಧಿಯಲ್ಲಿ ಆರ್.ಟಿ.ಸಿ ಯಲ್ಲಿನ ಲೋಪವನ್ನು ಸರಿಪಡಿಸಿದ ಪ್ರಕರಣ ನಡೆದಿದೆ.
(ಮೊದಲ ಪುಟದಿಂದ) ಕಾಫಿ ಬೆಳೆಗಾರ ಕುಟ್ಟಂದಿ ಗ್ರಾಮದ ಅಪ್ಪಂಡೇರಂಡ ಸುರೇಶ್ ಎಂಬವರ ಕಂದಾಯ ದಾಖಲಾತಿ ಆರ್.ಟಿ.ಸಿ ಯ ಬೆಳೆ ಕಲಂನಲ್ಲಿ, ಕಳೆದ ಒಂದು ವರ್ಷದ ಅವಧಿಯಲ್ಲಿ ದಿಢೀರನೆ ಹಲವಾರು ಮಾರ್ಪಾಡುಗಳಾಗಿದ್ದವು. ಸುಮಾರು 30 ವರ್ಷದ ಹಿಂದೆಯೇ ಬಹುವಾರ್ಷಿಕ ಬೆಳೆಯಾದ ಕಾಫಿ ಬೆಳೆದು, ಸಿ.ಆರ್.ಸಿ ಹೊಂದಿರುವ ಸಾಗು ಜಾಗದ ಆರ್.ಟಿ.ಸಿಯಲ್ಲಿ 2015 ರ ವರ್ಷ ಕೊನೆಯವರೆಗೂ ಬೆಳೆ ಕಲಂನಲ್ಲಿ ಕಾಫಿ ಎಂದು ನಮೂದಾಗಿತ್ತು. ದಿಢೀರನೆ 2016 ಜೂನ್ ತಿಂಗಳಿನ ಕೊನೆಯ ವಾರದಲ್ಲಿ ಹೊಸ ಆರ್.ಟಿ.ಸಿ ತೆಗೆದು ಪರಿಶೀಲಿಸಿದಾಗ ಅಲ್ಲಿ ಯಾವದೇ ಬೆಳೆ ಇರುವದಿಲ್ಲ ಎಂದು ನಮೂದಾಗಿತ್ತು. ಆನಂತರದಲ್ಲಿ 2016 ಡಿಸಂಬರ್ ತಿಂಗಳಿನಲ್ಲಿ ಅದೇ ಜಾಗದ ಆರ್.ಟಿ.ಸಿ. ಯನ್ನು ಪರಿಶೀಲಿಸುವಾಗ, ಬೆಳೆ ಕಲಂನಲ್ಲಿ ಭತ್ತ ಎಂದು ನಮೂದಾಗಿರುವದನ್ನು ಕಂಡ ಸುರೇಶ್ ಅವರು ಆತಂಕಕ್ಕೊಳಗಾಗಿ ಗ್ರಾಮ ಲೆಕ್ಕಿಗ ಪವಾರ್ ರನ್ನು ವಿಚಾರಿಸಿದರು.
ಈ ಸಂದರ್ಭ ಅವರು, ಅದು ಹಾಗೆಯೇ ಬರುವದು, ಬೇಕಿದ್ದರೆ ಕಂದಾಯ ಅದಾಲತ್ನಲ್ಲಿ ಅರ್ಜಿಸಲ್ಲಿಸಿ ಸರಿಪಡಿಸಿಕೊಳ್ಳಿ ಎಂದು ಬೇಜವಾಬ್ದಾರಿಕೆಯ ಉತ್ತರ ನೀಡಿದ್ದರು. ಈ ಕುರಿತಂತೆ ಪೊನ್ನಂಪೇಟೆಯ ಕಂದಾಯ ಕಚೇರಿಗೆ ಹಲವು ಬಾರಿ ಭೆÉೀಟಿ ನೀಡಿದರೂ ಯಾವದೇ ಪ್ರಯೋಜನವಾಗಿರಲಿಲ್ಲ. ಇದನ್ನು ಗಂಭಿರವಾಗಿ ಪರಿಗಣಿಸಿದ ಸುರೇಶ್ ಅವರು, ಯುಕೊ ಸಂಘಟನೆಯ ಕಚೇರಿಗೆ ತೆರಳಿ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು. ಈ ಹಿನೆÀ್ನಲೆಯಲ್ಲಿ, ಯುಕೊ ಸಂಘಟನೆಯ ಕಾರ್ಯಕರ್ತರು ಸಂಚಾಲಕ ಮಂಜು ಚಿಣ್ಣಪ್ಪನವರ ನೇತೃತ್ವದಲ್ಲಿ ಪೊನ್ನಂಪೇಟೆಯ ಕಂದಾಯ ಇಲಾಖಾ ಕಚೇರಿಗೆ ದಿಢೀರನೆ ಬೇಟಿ ನೀಡಿ ಗ್ರಾಮಲೆಕ್ಕಿಗ ರಮೇಶ್ ಪವಾರ್ ಹಾಗೂ ಉಪ ತಹಶೀಲ್ದಾರ್ ಶ್ರೀಧರ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ತಬ್ಬಿಬ್ಬಾದ ಪವಾರ್ ಇಲಾಖೆಯ ಕಂಪ್ಯೂಟರ್ ವಿಭಾಗದಲ್ಲಿನ ಸಮಸ್ಯೆಗಳ ಬಗ್ಗೆ ವಿವರಿಸುತ್ತಾ ತಮ್ಮ ತಪ್ಪಿನಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದರಾದರೂ, ಅನಿವಾರ್ಯವಾಗಿ ತನ್ನ ತಪ್ಪನ್ನು ಒಪ್ಪಿಕೊಂಡು ಕೂಡಲೇ ಲೋಪವನ್ನು ಸರಿಪಡಿಸಿಕೊಡುವ ಭರವಸೆ ನೀಡಿದರು.ಇದಾದ ಒಂದು ತಾಸಿನಲ್ಲಿಯೇ ವೀರಾಜಪೇಟೆಗೆ ತೆರಳಿ, ಆರ್.ಟಿ.ಸಿ ಯಲ್ಲಿನ ಲೋಪವನ್ನು ಸರಿಪಡಿಸಿ, ದೂರವಾಣಿ ಮೂಲಕ ಸುರೇಶ್ ಅವರನ್ನು ಸಂಪರ್ಕಿಸಿ ತಮ್ಮ ಆರ್.ಟಿ.ಸಿಯಲ್ಲಿನ ಲೋಪವನ್ನು ಸರಿಪಡಿಸಲಾಗಿದ್ದು, ಬಂದು ಸರಿಪಡಿಸಿದ ಆರ್.ಟಿ.ಸಿ ಯನ್ನು ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭ ಮಾತನಾಡಿದ ಮಂಜು ಚಿಣ್ಣಪ್ಪ, ಕರ್ನಾಟಕದಾದ್ಯಂತ ಏಕರೂಪ ಗಣಕೀಕೃತ ವ್ಯವಸ್ಥೆಯಲ್ಲಿ ಭೂಮಿ ಎಂಬ ತಂತ್ರಾಂಶದ ಮೂಲಕ ಭೂದಾಖಲಾತಿ ಸಂಬಂಧಿಸಿದ ಎಲ್ಲಾ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದು, ಕಂಪ್ಯೂಟರ್ನಲ್ಲಿ ಕರ್ನಾಟಕದಾದ್ಯಂತ ಪ್ರತಿ ನಾಲ್ಕು ತಿಂಗಳಿಗೆ, ಬೆಳೆ ಮಾಹಿತಿ ಸಹಜವಾಗಿಯೇ ‘ನೊ ಕ್ರಾಪ್’ ಎಂದು ತೋರಿಸುವ ವ್ಯವಸ್ಥೆಯಿದೆ. ಆದರೆ ಬಹುವಾರ್ಷಿಕ ಬೆಳೆಯಾದ ಕಾಫಿಗೂ ಇದು ಅನ್ವಯವಾಗುವದರಿಂದ ಸಹಜವಾಗಿಯೇ ಬೆಳೆಗಾರರು ತೊಂದರೆ ಅನುಭವಿಸುವಂತಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಅಧಿಕಾರಿಗಳು ಬೇಳೆಗಾರರನ್ನು ಶೋಷಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬೆಳೆಗಾರರು, ಯಾವದೇ ಬ್ಯಾಂಕ್ ಸಾಲ ಹಾಗೂ ಸಹಾಯಧನ ಇತ್ಯಾದಿಗಳನ್ನು ಪಡೆಯಲು, ಆರ್.ಟಿ.ಸಿಯಲ್ಲಿ ಬೆಳೆ ನಮೂದಿಸುವದು ಖಡ್ಡಾಯವಾಗಿದೆ. ಈ ಸಂದರ್ಭ ಆರ್.ಟಿ.ಸಿ.ಯಲ್ಲಿ ಬೆಳೆ ಕಲಂನಲ್ಲಿ ಬೆಳೆ ನಮೂದಿಸದಿದ್ದರೆ ಸಂಬಂಧಿಸಿದ ಕಂದಾಯ ಅಧಿಕಾರಿಗಳಿಂದ ದೃಢೀಕರಣ ಪತ್ರ ಸಲ್ಲಿಸಬೇಕಾಗುತ್ತದೆ. ಈ ಸಂದರ್ಭ ದೃಢೀಕರಣ ಪತ್ರ ನೀಡಲೂ ಸಹ ‘ಮಾಮೂಲು’ ನೀಡಬೇಕಾದ ಅನಿವಾಂiÀರ್iತೆ ಬೆಳೆಗಾರರನ್ನು ಕಾಡುತ್ತಿದೆ. ಇದು ಕೆಲವು ಅಧಿಕಾರಿಗಳಿಗೆ ಹಣಮಾಡುವ ದಂಧೆಯಾಗಿ ಪರಿಣಮಿಸಿದೆ. ಕಾಫಿ, ಕರಿಮೆಣಸು ಹಾಗೂ ಏಲಕ್ಕಿಗಳು ಬಹುವಾರ್ಷಿಕ ಬೆಳೆಯಾಗಿದ್ದು, ಇದನ್ನು ಇತರ ಹಂಗಾಮು ಬೆಳೆಗಳಂತೆ ಪರಿಗಣಿಸದೆ, ಇರುವ ಅವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಮರೆತು ಕಾನೂನನ್ನು ಪಾಲಿಸಲು ವಿಫಲವಾದರೆ, ಅನಿವಾರ್ಯವಾಗಿ ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಅವರು ಈ ಸಂದರ್ಭ ಎಚ್ಚರಿಸಿದರು. ಈ ಸಂದರ್ಭ ಯುಕೊ ಸಂಘಟನೆಯ ಸದಸ್ಯರಾದ ಚೆಪ್ಪುಡಿರ ಸುಜು ಕರುಂಬಯ್ಯ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಉಳುವಂಗಡ ಲೋಹಿತ್ ಭೀಮಯ್ಯ, ಕುಟ್ಟಂದಿ ಹಾಗೂ ವಿ.ಬಾಡಗ ಗ್ರಾಮಸ್ಥರು ಹಾಜರಿದ್ದರು.