ಮಡಿಕೇರಿ, ಫೆ. 10: ಜಿಲ್ಲೆಯ ಎಲ್ಲಾ ನ್ಯಾಯಾಲಯದಲ್ಲಿ ಧ್ವೈಮಾಸಿಕ ರಾಷ್ಟ್ರೀಯ ಲೋಕ ಅದಾಲತ್ ತಾ. 11 ರಂದು (ಇಂದು) ನಡೆಯಲಿದೆ.

ಪ್ರಕರಣಗಳಿಗೆ ಶೀಘ್ರ ಪರಿಹಾರ ದೊರಕಿಸಿಕೊಡುವ ಉದ್ದೇಶದಿಂದ ಲೋಕ ಅದಾಲತ್‍ನ್ನು ನಡೆಸಲಾಗುತ್ತಿದ್ದು, ಪ್ರಕರಣವು ಲೋಕ ಅದಾಲತ್‍ನಲ್ಲಿ ತೀರ್ಮಾನವಾದರೆ ಅಂತಿಮವಾಗಿ ಬಗೆ ಹರಿಯುತ್ತದೆ. ಎರಡು ಕಡೆ ಪಕ್ಷಗಾರರ ಸಂಧಾನ ಹಾಗೂ ಸಮ್ಮತಿಯ ಮೇರೆಗೆ ಇತ್ಯರ್ಥಗೊಳ್ಳುವದರಿಂದ ಇಲ್ಲಿ ಉಭಯ ಪಕ್ಷಗಾರರಿಗೆ ಹಿನ್ನಡೆ ಹಾಗೂ ಮುನ್ನಡೆಯ ಭಾವನೆ ಬರುವುದಿಲ್ಲ.

ದ್ವೇಷ, ಅಸೂಯೆಗಳಿಗೆ ಅವಕಾಶ ಇರುವದಿಲ್ಲ, ಸಹಮತದ ಮೂಲಕ ಸೌಹಾರ್ದಯುತವಾಗಿ ಪ್ರಕರಣವು ಇತ್ಯರ್ಥಗೊಳ್ಳುವದರಿಂದ ಬಾಂಧವ್ಯವು ಉಳಿದು ವಿವಾದವು ಇತ್ಯರ್ಥಗೊಳ್ಳುತ್ತದೆ. ನ್ಯಾಯಾಲಯಕ್ಕೆ ಅಲೆದಾಡುವದು ತಪ್ಪುತ್ತದೆ. ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಸಿವಿಲ್ ಪ್ರಕರಣ ಲೋಕ ಅದಾಲತ್‍ನಲ್ಲಿ ಇತ್ಯರ್ಥಗೊಂಡಲ್ಲಿ ನ್ಯಾಯಾಲಯಕ್ಕೆ ಕಟ್ಟಿದ ಕೋರ್ಟ್ ಶುಲ್ಕವನ್ನು ಮರುಪಾವತಿಸಲಾಗುತ್ತದೆ. ಸಾರ್ವಜನಿಕರು ಪ್ರಕರಣಗಳನ್ನು ಲೋಕ ಅದಾಲತ್ ಪ್ರಕರಣಗಳಲ್ಲಿ ಇತ್ಯರ್ಥಗೊಳಿಸುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ತಾ. 11 ರಂದು ನಡೆಯುವ ಲೋಕ ಅದಾಲತ್‍ನಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ರಾಜಿ ಆಗುವಂತಹ ಎಲ್ಲಾ ಐಪಿಸಿ ಪ್ರಕರಣಗಳು, ಚೆಕ್ಕಿನ ಪ್ರಕರಣಗಳು ಮತ್ತು ರಾಜಿ ಆಗಬಹುದಾದ ಇತರ ಕ್ರಿಮಿನಲ್ ಪ್ರಕರಣಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಸಿವಿಲ್ ಪ್ರಕರಣಗಳಲ್ಲಿ ಬ್ಯಾಂಕ್ ಪ್ರಕರಣಗಳು, ವೈವಾಹಿತ ಮತ್ತು ಜೀವನಾಂಶ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳನ್ನು ಮತ್ತು ಇತರ ಇತ್ಯರ್ಥಗೊಳಿಸಲು ಉದ್ದೇಶಿಸಿರುವ ಪ್ರಕರಣಗಳನ್ನು ರಾಜಿ ಮಾಡಲಾಗುವದಲ್ಲದೆ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುತ್ತಿದೆ. ಬ್ಯಾಂಕ್ ವ್ಯಾಜ್ಯ ಪೂರ್ವ ಪ್ರಕರಣಗಳು ಕಲಂ 138 ಎನ್‍ಐ ಆಕ್ಟ್ ಪ್ರಕರಣಗಳು, ಕಾರ್ಮಿಕರಿಗೆ ಸಂಬಂಧಪಟ್ಟ ಪ್ರಕರಣಗಳು, ವಿದ್ಯುಚ್ಛಕ್ತಿ ಮತ್ತು ನೀರಿನ ಕರ ಬಾಕಿ ವಸೂಲಾತಿಗಿರುವ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಮಾಸಿಕ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ತೆಗೆದುಕೊಳ್ಳಲಾಗುತ್ತದೆ. ಆ ಕಾರಣ ರಾಜಿ ಆಗಬಹುದಾದ ಇಂತಹ ಎಲ್ಲಾ ಪ್ರಕರಣಗಳನ್ನು ಜನತಾ ನ್ಯಾಯಾಲಯದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು ತಿಳಿಸಿದ್ದಾರೆ.