ಆ ಸೇತು ಹಿಮಾಚಲದವರೆಗೆ ಪ್ರವಾಸ ಕೈಗೊಂಡು ಕಳೆದ ಒಂಭತ್ತು ವರ್ಷಗಳಲ್ಲಿ ಭಾರತದ ಪ್ರಮುಖ ನಗರಗಳನ್ನೂ, ಪ್ರವಾಸಿ ತಾಣಗಳನ್ನೂ ಮುಖ್ಯವಾಗಿ ಎಲ್ಲಾ ಪುಣ್ಯ ಕ್ಷೇತ್ರಗಳನ್ನೂ, ಹಿಮಚ್ಛಾದಿತ ಪರ್ವತ ಶ್ರೇಣಿಗಳನ್ನೂ ಪೌರಾಣಿಕ ಪ್ರಾಮುಖ್ಯತೆ ಪಡೆದಿರುವ ಸಪ್ತ ನದಿಗಳನ್ನೂ ವಿವಿಧ ರೀತಿಯ ಜನಜೀವನಗಳನ್ನೂ ನೋಡಿದ ತೃಪ್ತಿಯ ನಡುವೆ ಇನ್ನೂ ಏನೋ ಬಾಕಿ ಇದೆ ಎಂದೆನಿಸುತ್ತಿತ್ತು. ಕಡಲ ಪ್ರವಾಸ ಮಾಡಿದರೆ ಹೇಗೆ ಎಂಬ ಆಲೋಚನೆ ಬಂದಾಗ ಬಂಗಾಲಕೊಲ್ಲಿ ಕಣ್ಮುಂದೆ ಬಂತು. ಅಂಡಮಾನ್ ದ್ವೀಪ ಸಮೂಹಗಳ ಪ್ರವಾಸ ಸೂಕ್ತವೆಂದನಿಸಿತು.

ಚೆನೈ ವಿಮಾನ ನಿಲ್ದಾಣದಿಂದ 1,200 ಕಿ. ಮೀ. ಕ್ರಮಿಸಿ ಬಂಗಾಳಕೊಲ್ಲಿಯ ಪೂರ್ವಕ್ಕಿರುವ ಅಂಡಮಾನ್ ದ್ವೀಪಗಳತ್ತ ಬೆಳಗಿನ 8.30 ಗಂಟೆಯ ಏರ್‍ಇಂಡಿಯಾ ವಿಮಾನದಲ್ಲಿ ಹೊರಟೆವು. ಅಂಡಮಾನಿನ ರಾಜಧಾನಿ ಪೋರ್ಟ್ ಬ್ಲೇರ್ ತಲುಪಿದಾಗ ಹನ್ನೊಂದು ಗಂಟೆಯಾಗಿತ್ತು. ವೀರ್ ಸಾವರ್‍ಕರ್ ವಿಮಾನ ನಿಲ್ದಾಣದಲ್ಲಿ ಇಳಿದಾಗ ಇದು ಬಹಳ ಚಿಕ್ಕ ವಿಮಾನ ನಿಲ್ದಾಣವೆನಿಸಿತು. ಒನ್ ವೇ ಹಡಗಿನಲ್ಲಿ ಪ್ರಯಾಣ ಮಾಡಬೇಕೆಂದಿದ್ದೆವು. ಆದರೆ ಹಡಗು ನಿರ್ದಿಷ್ಟ ದಿವಸಗಳಲ್ಲಿ ಹೊರಡುವುದಿಲ್ಲವೆಂದು ತಿಳಿದು ಆ ಯೋಚನೆಯನ್ನು ಕೈ ಬಿಟ್ಟೆವು. ಮೊದಲೇ ಟೂರ್ ಆಪರೇಟರÀನ್ನು ಸಂಪರ್ಕಿಸಿ ಹೋಟೇಲ್ ಮತ್ತು ಟ್ಯಾಕ್ಸಿಯನ್ನು ಬುಕ್ ಮಾಡಿದ್ದೆವು. ನಮ್ಮ ಟ್ಯಾಕ್ಸಿ ಚಾಲಕ ವಿಮಾನ ನಿಲ್ದಾಣದಲ್ಲಿ ನಮ್ಮನ್ನು ಎದುರುಗೊಂಡು ನಾವು ಕಾದಿರಿಸಿದ್ದ ಹೊಟೇಲ್‍ಗೆ ಕರೆದೊಯ್ದ, ನಾವು ನಮ್ಮ ಟೂರ್ ಐಟಿನರಿಯನ್ನು ಪಡೆದುಕೊಂಡೆವು.

ಅಂಡಮಾನ್ ಸುಮಾರು 80 ಚಿಕ್ಕ ದೊಡ್ಡ ದ್ವೀಪಗಳ ಸಮೂಹಗಳನ್ನು ಒಳಗೊಂಡ ಕೇಂದ್ರಾಡಳಿತಕ್ಕೆ ಒಳಪಟ್ಟ ರಾಜ್ಯ. ಲೆಫ್ಟಿನೆಂಟ್ ಗವರ್ನರ್ ಇದರ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ದ್ವೀಪ ಸಮೂಹಗಳು ಆಕಾಶದ ನಕ್ಷತ್ರಗಳಂತೆ ನೀಲಿ ಸಮುದ್ರದಲ್ಲಿ ಹರಡಿಕೊಂಡಿವೆ. ಮಳೆ ಕಾಡುಗಳು, ಮಾನ್‍ಗ್ರೋವ್ ತೋಪುಗಳು ಪಾಮ್ ಮರಗಳು, ಸುಂದರವಾದ ಬಿಳಿ ಮರಳಿನ ಬೀಚ್‍ಗಳು, ಸೀರೆಯ ಬಾರ್ಡರ್‍ನಂತೆ ಬೀಚಿನ ಅಂಚಿನುದ್ದಕ್ಕೂ ಕಾಣುವ ತೆಂಗಿನ ಮರಗಳು ಈ ದ್ವೀಪ ಸಮೂಹಗಳ ಅಂದವನ್ನು ಇಮ್ಮಡಿಗೊಳಿಸಿವೆ. ದಟ್ಟ ಕಾಡುಗಳಲ್ಲಿ ಪಡಾಕ್, ಗುರ್ಜನ್, ಮಾರ್ಬಲ್ ಮತ್ತು ಸ್ಲಾಟಿನ್ ಮರಗಳು ಕಾಣಸಿಗುತ್ತವೆ. ಅತ್ಯಂತ ಬೆಲೆ ಬಾಳುವ 120 ಎತ್ತರ ಬೆಳೆಯುವ ಬಲಿಷ್ಠವಾದ ಪಡಾಕ್ ಮರಗಳು ಇಲ್ಲಿನ ಶ್ರೇಷ್ಠತೆ, ಅತ್ಯುತ್ಕøಷ್ಠ, ಪೀಟೋಪಕರಣಗಳನ್ನು, ಹಡಗಿನ ಭಾಗಗಳನ್ನೂ ಈ ಮರದಿಂದ ತಯಾರಿಸುತ್ತಾರೆ. ಮೊದಲ ದಿನ ಮಧ್ಯಾಹ್ನ ಊಟದ ನಂತರ ಅಬರ್ಡಿನ್ ಜೆಟ್ಟಿ ಮತ್ತು ಚಾತಮ್ ಸಾಮಿಲ್ಸ್ ನೋಡಲು ಹೊರಟೆವು. ಅಬರ್ಡಿನ್ ಜೆಟ್ಟಿಯಿಂದ ಅಕ್ಕಪಕ್ಕದಲ್ಲಿರುವ ದ್ವೀಪಗಳಿಗೆ ಶಿಪ್‍ಗಳು ಹೊರಡುತ್ತವೆ. ಇವೆಲ್ಲಾ ಫೆರಿ ಬೋಟ್‍ಗಳು. ದೊಡ್ಡ ಫೆರಿಶಿಪ್‍ಗಳು 250 ಜನರನ್ನು ದೂರದ ದ್ವೀಪಗಳಿಗೆ ಕೊಂಡೊಯ್ಯುತ್ತವೆ. ಈ ಜೆಟ್ಟಿಯ ಪಕ್ಕದಲ್ಲಿ ಚಾತಮ್ ಸಾ ಮಿಲ್ಸ್ ಇದೆ. ಇದು ಚಿಕ್ಕ ದ್ವೀಪದಲ್ಲಿದ್ದು, ಜೆಟ್ಟಿಗೆ ಒಂದು ಬ್ರಿಡ್ಜ್‍ನಿಂದ ಜೋಡಿಸಲ್ಪಟ್ಟಿದೆ, ಇದನ್ನು ಅಬರ್ಡಿನ್ ಬ್ರಿಡ್ಜ್ ಎನ್ನುತ್ತಾರೆ. ಈ ಮಿಲ್ಸ್ ಏಷ್ಯಾದಲ್ಲೇ ಅತ್ಯಂತ ದೊಡ್ಡದೆನಿಸಿದೆ. ಸುಮಾರು ಒಂದು ಫರ್ಲಾಂಗ್ ಉದ್ದವಿದೆ. ಮಿಲ್ ಆವರಣ ಪ್ರವೇಶಿಸಿದೊಡನೆ ಎಡಭಾಗದಲ್ಲಿ ಒಂದು ದೊಡ್ಡ ಮ್ಯೂಸಿಯಂ ಇದೆ. ಇಲ್ಲಿ ಮರದ ನಾನಾ ರೀತಿಯ ಆರ್ಟಿಫ್ಯಾಕ್ಟಗÀಳನ್ನು ಪ್ರದರ್ಶನಕ್ಕೂ, ಮಾರಟಕ್ಕೂ ಇಟ್ಟಿದ್ದಾರೆ. ಇಲ್ಲಿ ಸುಂದರವಾದ ಮರದ ಪೀಠೋಪಕರಣಗಳು, ಶೋ ಪೀಸ್‍ಗಳು, ಅತಿ ನಾಜೂಕಾದ ಕೆತ್ತನೆ ಕೆಲಸಗಳಿಂದಾದ ಮರದ ಕಲಾಕೃತಿಗಳು ಕಂಡುಬರುತ್ತವೆ. ಮರದ ಪೀಠೋಪಕರಣಗಳು ಪಡಾಕ್ ಮರಗಳಿಂದಾಗಿವೆ. ನಾಜೂಕಾದ ಮಾರ್ಬಲ್ ಮತ್ತು ಸ್ಲಾಟಿನ್‍ವುಡ್‍ಗಳಿಂದ ರಚಿತವಾಗಿವೆ.

ಮಿಲ್ ಪ್ರವೇಶಿಸಿದಾಗ ದೊಡ್ಡ ದೊಡ್ಡ ಮರದ ತುಂಡುಗಳು ಗರಗಸ ಯಂತ್ರಗಳು, ಪಾಲಿಶಿಂಗ್ ಯಂತ್ರಗಳು, ನಾನಾ ಅಳತೆಯ ತೊಲೆಗಳು ಕಂಡು ಬರುತ್ತವೆ. ಹೈಟೆಕ್ ಯಂತ್ರಗಳಿಂದ ಶೋಪೀಸ್‍ಗಳು ತಯಾರಾಗು ತ್ತವೆ. ಮಿಲ್‍ನ ಹಿಂಭಾಗದಲ್ಲಿ ಸಮುದ್ರದ ಮೂಲಕ ಸಾಗಿಸಲ್ಪಟ್ಟ ದೈತ್ಯಕಾರದ ಮರದ ದಿಮ್ಮಿಗಳು, ಅವುಗಳನ್ನು ಮಿಲ್ ಒಳಗಡೆ ಹಾಕುವ ಯಂತ್ರಗಳು ಕಂಡುಬರುತ್ತವೆ. ಈ ನೋಟÀ ನಮಗೆ ಒಂದು ಹೊಸ ಅನುಭವ. ಈ ಮಿಲ್‍ನ ಕಾರ್ಯವೈಖರಿ ನೋಡಿ ಅಚ್ಚರಿಯಾಯಿತು. ಮರುದಿವಸ ಪೋರ್ಟ್‍ಬ್ಲೇರ್‍ನ ಸನಿಹದಲ್ಲಿರುವ ರೋಸ್ ಐಲ್ಯಾಂಡ್, ನಾರ್‍ತ್ ಟೀ ಐಲ್ಯಾಂಡ್, ವೈಪರ್ ಐಲ್ಯಾಂಡ್ ನೋಡುವ ಯೋಜನೆ ಇತ್ತು. ಬೆಳಿಗ್ಗೆ ಎಂಟು ಗಂಟೆಯ ವೇಳೆಗೆ ಅಬರ್‍ಡಿನ್ ಜೆಟ್ಟಿ ತಲುಪಿದೆವು. ನಮ್ಮಂತೆ ನೂರಾರು ಪ್ರಯಾಣಿಕರು ಆಗಲೇ ಅಲ್ಲಿ ಜಮಾಯಿಸಿದ್ದರು. ರೋಸ್ ಐಲ್ಯಾಂಡ್‍ಗೆ ಹೋಗುವ ಫೆರಿಗೆ ಟಿಕೆಟ್ ಖರೀದಿಸಿ, ಫೆರಿ ಹತ್ತಿದೆವು. ಇದು ಅರ್ಧ ಗಂಟೆಯ ಸಮುದ್ರಯಾನ ಹಡಗು ನೀರನ್ನು ಸೀಳುತ್ತಾ ಮುಂದೆ ಮಂದಗತಿಯಲ್ಲಿ ಚಲಿಸಿತಿತ್ತು. ನಾವು ಮೇಲಿನ ಆಗಸ ಕೆಳಭಾಗದ ಸಮುದ್ರವನ್ನು ವೀಕ್ಷಿಸುತ್ತಾ ರೋಸ್ ಐಲ್ಯಾಂಡ್ ತಲಪಿದೆವು. ಇದು ಬ್ರಿಟಿಷ್ ಅಧಿಕಾರಿಗಳ ಆಡಳಿತಾತ್ಮಕ ಹೆಡ್‍ಕ್ವಾಟರ್ಸ್ ಆಗಿದ್ದು, ಪೋರ್ಟ್ ಬ್ಲೇರನ್ನು ಇಲ್ಲಿಂದಲೇ ಆಳುತ್ತಿದ್ದರು. ಅವರ ಮೋಜಿನ ಜೀವನಕ್ಕೆ ಈ ದ್ವೀಪ ಒಂದು ಸಾಕ್ಷಿಯಾಗಿದೆ. ಇಲ್ಲಿ ಗ್ರೇಟ್ ಅಂಡಮಾನಿಸ್ ಎಂಬ ಮೂಲ ನಿವಾಸಿಗಳು ಅಧಿಕ ಸಂಖ್ಯೆಯಲ್ಲಿ ಇದ್ದರೆನ್ನಲಾಗುತ್ತಿದೆ. ಅಧಿಕಾರಿಗಳ ಆಡಳಿತ ಕಚೇರಿಗಳು, ಪಾರ್ಕ್, ಚರ್ಚ್‍ಗಳು ಬಂಗ್ಲೆ ಹಳೆಯ ರಂಗಿನಲ್ಲೇ ಇವೆ. (ಮುಂದುವರಿಯುವುದು)