ಮೂರ್ನಾಡು, ಫೆ. 10: ಅಂತರ್ ರಾಷ್ಟೀಯ ಮಟ್ಟದ ಕ್ರೀಡಾಂಗಣಕ್ಕೆ ತಡೆ ಒಡ್ಡುತ್ತಿರುವ ವ್ಯಕ್ತಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಎಪಿಸಿಎಂಸಿ ಸದಸ್ಯ ವಾಂಚೀರ ಜಯಾ ನಂಜಪ್ಪ ಆಗ್ರಹಿಸಿದ್ದಾರೆ.

‘ಶಕ್ತಿ’ ಗೆ ಪತ್ರಿಕಾ ಹೇಳಿಕೆ ನೀಡಿದ ಅವರು, ಹೊದ್ದೂರು ಪಂಚಾಯಿತಿ ವ್ಯಾಪ್ತಿಯ ಪಾಲೆಮಾಡುವಿನಲ್ಲಿ ನೂತನ ಕ್ರೀಡಾಂಗಣಕ್ಕೆ ಸ್ಥಳ ಗುರುತಿಸಿರುವದು ಜಿಲ್ಲೆಯ ಕ್ರೀಡಾಭಿಮಾನಿಗಳ ಪಾಲಿಗೆ ಹೆಮ್ಮೆಯ ವಿಚಾರ. ಅದರೆ, ವ್ಯಕ್ತಿಯೊಬ್ಬ ಇದಕ್ಕೆ ಅಡ್ಡಗಾಲು ಹಾಕುತ್ತಿರುವ ವಿಚಾರ ಜಿಲ್ಲಾಡಳಿತ ಸೇರಿದಂತೆ ಎಲ್ಲರಿಗೂ ತಿಳಿದಿದ್ದರೂ, ಆ ವ್ಯಕ್ತಿಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗದೇ ಇರುವದು ವಿಷಾದನೀಯ. ಇದೇ ರೀತಿ ಮುಂದುವರಿದಲ್ಲಿ ಕ್ರೀಡಾಭಿಮಾನಿಗಳೆ ಅಡ್ಡಗಾಲು ಹಾಕುತ್ತಿರುವ ವ್ಯಕ್ತಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಮುಂದಾಗಬಹುದಾದ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆ ಎಂದು ತಿಳಿಸಿದ್ದಾರೆ.

ಉಸ್ತುವಾರಿ ಸಚಿವರು ಜಿಲ್ಲೆಗೆ ಭೇಟಿ ನೀಡುವ ಸಂದರ್ಭ ಪರಿಸ್ಥಿತಿಯ ಕುರಿತು ಸಚಿವರಿಗೆ ಮನವರಿಕೆ ಮಾಡಲಾಗುವದು. ತದನಂತರ ಕ್ರೀಡಾಂಗಣ ನಿರ್ಮಾಣಕ್ಕಾಗಿ ಈ ವ್ಯಾಪ್ತಿಯ ಕ್ರೀಡಾಭಿಮಾನಿಗಳು, ಸಾರ್ವಜನಿಕರು ಧರಣಿ ನಡೆಸಲು ನಿರ್ಧರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕ್ರೀಡಾಂಗಣಕ್ಕಾಗಿ 12.70 ಏಕರೆ ಜಮೀನನ್ನು ಗುರುತಿಸಿ, ಬೇಲಿ ಅಳವಡಿಸಲಾಗಿದೆ. ಆದರೂ, ಬಿಎಸ್‍ಪಿ ಮುಖಂಡ ಮೊಣ್ಣಪ್ಪ ಎಂಬಾತ ಅಕ್ರಮವಾಗಿ ಆ ಸ್ಥಳಕ್ಕೆ ಪ್ರವೇಶ ಮಾಡಿ ಸ್ಮಶಾನ ಮಾಡಲು ಹೊರಟಿರುವರು ಎಂದು ಅವರು ಆರೋಪಿಸಿದ್ದಾರೆ. ಗೋಮಾಳದ ಜಮೀನನ್ನು ಅಕ್ರಮವಾಗಿ ಮನೆ ನಿವೇಶನಗಳಾಗಿ ಪರಿವರ್ತಿಸಿ, ಮಾರಾಟ ಮಾಡಿರುವ ಈತನ ಆರ್ಥಿಕ ವ್ಯವಹಾರಗಳ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬಿಎಸ್‍ಪಿ ಮುಖಂಡ ಮೊಣ್ಣಪ್ಪ ತನ್ನ ಸಂಗಡಿಗರಿಗೆ ತಲಾ 3 ಸೆಂಟ್ ನಿವೇಶನ ವಿತರಿಸಿ, ತಾನು ಮತ್ತು ತನ್ನ ಸಹೋದರರೊಡಗೂಡಿ ತಲಾ 1.50 ಏಕರೆ ಕಾಫಿ ತೋಟ ಮಾಡಿಕೊಂಡು ಪಾಲೇಮಾಡಿನಲ್ಲಿ ವಾಸುತ್ತಿರುವದಾಗಿ ಜಯಾ ದೂರಿದ್ದಾರೆ.