ಮಡಿಕೇರಿ, ಫೆ. 10: ಸರಕಾರದ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಎಂ.ಆರ್. ಅಭಿಯಾನದಡಿ ನೀಡಲಾಗುತ್ತಿರುವ ಮೀಸೆಲ್ಸ್ ಹಾಗೂ ರುಬೆಲ್ಲಾ ಲಸಿಕೆ ಹಾಗೂ ಚುಚ್ಚು ಮದ್ದಿನ ಕುರಿತು ಸಾರ್ವಜನಿಕರಲ್ಲಿ ಗೊಂದಲವಿರುವದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಸಾರ್ವಜನಿಕರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕೆಂದು ಕೊಡಗು ಮುಸ್ಲಿಂ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪಿ.ಎ. ಹನೀಪ್ ಆಗ್ರಹಿಸಿದ್ದಾರೆ. ಜಿಲ್ಲೆಯಲ್ಲಿ ವಿವಿಧ ಶಾಲೆಗಳಲ್ಲಿ ಚುಚ್ಚು ಮದ್ದು ಹಾಗೂ ಲಸಿಕೆಯನ್ನು ನೀಡಲಾಗಿದ್ದು, ಇದರ ಕುರಿತು ಸೂಕ್ತ ಮಾಹಿತಿಯ ಕೊರತೆಯಿಂದ ಪೋಷಕರು ಲಸಿಕೆ ಹಾಗೂ ಚುಚ್ಚು ಮದ್ದು ನೀಡಲು ನಿರಾಕರಿಸುತ್ತಿರುವ ಘಟನೆಗಳು ನಡೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ತಪ್ಪು ಸಂದೇಶಗಳು ರವಾನೆಯಾಗುತ್ತಿದೆ. ಕೊಡಗು ಮುಸ್ಲಿಂ ಹಿತರಕ್ಷಣಾ ವೇದಿಕೆಯು ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಆರೋಗ್ಯ ಕಾರ್ಯಕರ್ತೆಯರು ಜನರಲ್ಲಿರುವ ಗೊಂದಲ ನಿವಾರಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.