ಪೊನ್ನಂಪೇಟೆ, ಫೆ. 10 ಕಳೆದ ಕೆಲವು ವರ್ಷಗಳ ಹಿಂದೆ ಕೊಡಗು ಜಿಲ್ಲೆಯ ಸಮೀಪದಲ್ಲಿ ಸುಸಜ್ಜಿತವಾದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾಪನೆ ಬಹುದೂರದ ಕನಸ್ಸಿನ ಮಾತಾಗಿತ್ತು. ಆದರೆ ಕೇರಳ ರಾಜ್ಯ ಕೊಡಗಿಗೆ ಸಮೀಪದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೊಂದರ ಕನಸ್ಸನ್ನು ನನಸು ಮಾಡುವಲ್ಲಿ ಮಹತ್ತರವಾದ ಪಾತ್ರವಹಿಸಿದೆ. ಕೊಡಗು ಜಿಲ್ಲೆಗೆ ಹೆಚ್ಚು ಪ್ರಯೋಜನವಾಗುವ ಕಣ್ಣನೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆ.ಐ.ಎ.ಎಲ್) ಕೊಡಗಿನ ನೆರೆ ಜಿಲ್ಲೆಯಾದ ಕಣ್ಣನೂರಿನ ಮಟ್ಟನೂರು ಎಂಬ ಪ್ರದೇಶದಲ್ಲಿ ರೂಪು ಗೊಳ್ಳುತ್ತಿದ್ದು, ಇದೇ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಪೂರ್ಣ ಪ್ರಮಾಣದಲ್ಲಿ ವಿಮಾನಯಾನ ಸೇವೆಗೆ ಮುಕ್ತವಾಗಲಿದೆ. ಈಗಾಗಲೆ ಈ ಬೃಹತ್ ಯೋಜನೆಯ ಕಾಮಗಾರಿ ಶೇ. 85ರಷ್ಟು ಪೂರ್ಣಗೊಂಡಿದೆ. ಕಣ್ಣನೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮುಂದಿನ 7 ತಿಂಗಳೊಳ ಗಾಗಿ ಸಾರ್ವಜನಿಕ ಸೇವೆಗೆ ಸಿದ್ದಗೊಳ್ಳ ಬೇಕಾದ ಹಿನ್ನಲೆಯಲ್ಲಿ ಇದೀಗ ಅಂತಿಮ ಹಂತದ ಕಾಮಗಾರಿಗಳು ದಿನದ 24 ಗಂಟೆಗಳ ಕಾಲ ಭರದಿಂದ ಸಾಗುತ್ತಿದೆ. ಇದಕ್ಕಾಗಿ 3 ಸಾವಿರಕ್ಕೂ ಹೆಚ್ಚು ಮಾನವಶಕ್ತಿ ಕಾರ್ಯ ನಿರ್ವಹಿಸುತ್ತಿದೆ.

ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಕೇರಳದ ಕಣ್ಣನೂರು ಜಿಲ್ಲೆಯ ಮಟ್ಟನೂರಿನ ಉದ್ದೇಶಿತ ವಿಮಾನ ನಿಲ್ದಾಣ ಆವರಣಕ್ಕೆ ತೆರಳಿದ ಕೊಡಗಿನ ಮಾಧ್ಯಮ ಪ್ರತಿನಿಧಿಗಳ ತಂಡ ವಿಮಾನ ನಿಲ್ದಾಣದ ಕಾಮಗಾರಿಯ ಪ್ರಗತಿಯನ್ನು ಸಮಗ್ರವಾಗಿ ವೀಕ್ಷಿಸಿತು.

ಸಂಪೂರ್ಣವಾದ ದೂರದೃಷ್ಠಿ ಮತ್ತು ಮುಂದಾಲೋಚನೆಯಿಂದ ರೂಪುಗೊಂಡಿರುವ ಕಣ್ಣನೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೂರ್ಣ ಪ್ರಮಾಣದ ಅಂತರ್ರಾಷ್ಟ್ರೀಯ ಗುಣಮಟ್ಟದ ಆಧುನಿಕ ತಂತ್ರಜ್ಞಾನ ವನ್ನು ಒಳಗೊಂಡಿದೆ. ರನ್ ವೇ ಸೇರಿದಂತೆ ಉಳಿದೆಲ್ಲಾ ಹೊರ ಆವರಣದ

(ಮೊದಲ ಪುಟದಿಂದ) ಕಾಮಗಾರಿ ಶೇ. 90ರಷ್ಟು ಪೂರ್ಣಗೊಂಡಿದೆ. ಟರ್ಮಿನಲ್ ಸೇರಿದಂತೆ ಉಳಿದೆಲ್ಲಾ ಕಟ್ಟಡ ಕಾಮಗಾರಿಗಳು ಶೇ. 80ರಷ್ಟು ಪೂರ್ಣಗೊಂಡಿರುವದು ‘ಶಕ್ತಿ’ ಗೆ ಕಂಡು ಬಂತು. ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಈಗಾಗಲೇ ಒದಗಿಸಲಾಗಿದ್ದು, ಈ ಎಲ್ಲಾ ಕಾಮಗಾರಿಗಳ ಪ್ರಗತಿ ಅಂತಿಮ ಹಂತದಲ್ಲಿದೆ. ನಿಲ್ದಾಣದ ಕಟ್ಟಡ ಮತ್ತು ಹೊರ ಆವರಣದ ಕಾಮಗಾರಿಗಳೆರಡನ್ನು ‘ಎಲ್ ಆಂಡ್ ಟಿ’ ನಿರ್ಮಾಣ ಸಂಸ್ಥೆ ಕೈಗೆತ್ತಿಕೊಂಡಿದೆ.

ಎಲ್ಲಿ ಈ ವಿಮಾನ ನಿಲ್ದಾಣ?: ತಾಲೂಕು ಕೇಂದ್ರವಾದ ವಿರಾಜಪೇಟೆಯಿಂದ ಇರಿಟ್ಟಿ ಮಾರ್ಗವಾಗಿ ಕೇವಲ 51 ಕಿ.ಮೀ ದೂರದಲ್ಲಿ ಮಟ್ಟನೂರು ಪಟ್ಟಣವಿದೆ. ಈ ಪಟ್ಟಣದಿಂದ ಕೇವಲ 2.85 ಕಿ.ಮೀ ದೂರದಲ್ಲಿ ಕಣ್ಣನೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಜ್ಜುಗೊಳ್ಳುತ್ತಿದೆ. ಹೆಸರು ಕಣ್ಣನೂರು ವಿಮಾನ ನಿಲ್ದಾಣ ಎಂದಿದ್ದರೂ ಕಣ್ಣನೂರಿನಿಂದ 23 ಕಿ.ಮೀ ದೂರದಲ್ಲಿರುವ ಮಟ್ಟನೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲೆ ಎತ್ತಿರುವದು ಕೊಡಗಿನ ಜನರ ಪಾಲಿಗೆ ಮತ್ತಷ್ಟು ಅನುಕೂಲ ವಾಗಲಿದೆ. ಅಲ್ಲದೇ ಕೊಡಗು ಸೇರಿದಂತೆ ನೆರೆಜಿಲ್ಲೆಗಳಾದ ಮೈಸೂರು, ಚಿಕ್ಕಮಗಳೂರು ಹಾಗೂ ದ.ಕನ್ನಡ ಜಿಲ್ಲೆಯ ಜನರಿಗೂ ಇದರಿಂದ ಹೆಚ್ಚು ಪ್ರಯೋಜನ ವಾಗಲಿದೆ. ಮಟ್ಟನೂರಿನ ಅನತಿ ದೂರದಲ್ಲಿರುವ ಈ ಹಿಂದೆ ‘ಮೂರ್ಖನ್ ಪರಂಬ್’ ಎಂದು ಕರೆಯಲ್ಪಡುತ್ತಿದ್ದ ಗುಡ್ಡ ಪ್ರದೇಶವನ್ನು ಸಂಪೂರ್ಣವಾಗಿ ಬದಲಿಸಿ ಈ ಪ್ರದೇಶದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರೂಪುಗೊಳ್ಳುತ್ತಿದೆ.

ಆರಂಭದಲ್ಲಿ 1200 ಏಕ್ರೆ ಪ್ರದೇಶವನ್ನು ಭೂ ಸ್ವಾಧೀನ ಪಡಿಸಿಕೊಂಡಿರುವ ಕೆ.ಐ.ಎ.ಎಲ್ ಮೊದಲ ಹಂತದಲ್ಲಿ ನಿಲ್ದಾಣವನ್ನು ಅಭಿವೃದ್ಧಿಪಡಿಸಿದೆ. ಭವಿಷ್ಯದಲ್ಲಿ ಈ ಅಂತರಾಷ್ಟ್ರೀಯ ನಿಲ್ದಾಣವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಸಮೀಪದ 700 ಏಕ್ರೆ ಪ್ರದೇಶವನ್ನು ಭೂಸ್ವಾಧೀನ ಪಡಿಸಿಕೊಂಡಿದೆ. ಈಗಾಗಲೆ ಕೇರಳದ ತಿರುವನಂತಪುರಂ, ಕೊಚ್ಚಿ ಮತ್ತು ಕಲ್ಲಿಕೋಟೆ ಸೇರಿದಂತೆ ಮೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ಈ ನಿಲ್ದಾಣ ಕೇರಳದ ನಾಲ್ಕನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಗುಡ್ಡದಲ್ಲಿ ಈ ಹಿಂದೆ 123 ಮನೆಗಳನ್ನು ಹೊಂದಿದ್ದ ಜನವಸತಿ ಪ್ರದೇಶವಿತ್ತು. ಇವರಿಗೆ ಪರಿಹಾರ ಕಲ್ಪಿಸಿ ಅಗತ್ಯ ಪುನರ್‍ವಸತಿ ಸೌಲಭ್ಯವನ್ನು ಕೆ.ಐ.ಎ.ಎಲ್ ಮಾಡಿದೆ. ಇದಕ್ಕಾಗಿ ವಿಶೇಷ ಪ್ಯಾಕೇಜ್ ವೊಂದನ್ನು ಸಂಸ್ಥೆ ಜಾರಿಗೆ ತಂದಿದ್ದು, ಮನೆ ಕಳೆದುಕೊಂಡ ಕುಟುಂಬದ ವ್ಯಕ್ತಿಯೊಬ್ಬರಿಗೆ ವಿಮಾನ ನಿಲ್ದಾಣದಲ್ಲಿ ಕಡ್ಡಾಯ ಉದ್ಯೋಗ ನೀಡುವ ಒಪ್ಪಂದವಿದೆ.

ಹೇಗಿದೆ ವಿಮಾನ ನಿಲ್ದಾಣ: ಒಟ್ಟು ರೂ 1892 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿರುವ ಕಣ್ಣನೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯನ್ನು ಕೆ.ಐ.ಎ.ಎಲ್ ಸಂಸ್ಥೆಯೇ ನಿರ್ವಹಿಸಿದೆ. 9 ಲಕ್ಷ ಚ.ಅಡಿ ವಿಸೀರ್ಣದ ಅಂತರಾಷ್ಟ್ರೀಯ ಗುಣಮಟ್ಟದಿಂದ ಕೂಡಿದ ಕಣ್ಣನೂರು ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ ಬಹುದೂರದಿಂದಲೇ ಗಮನ ಸೆಳೆಯುತ್ತದೆ. ಪ್ರಯಾಣಿಕರ ಆಗಮನ ಮತ್ತು ನಿರ್ಗಮನಕ್ಕಾಗಿ ಪ್ರತ್ಯೇಕ ಎರಡು ಅಂತಸ್ತನ್ನು ಹೊಂದಿರುವದು ಟರ್ಮಿನಲ್ ಕಟ್ಟಡದ ವಿಶೇಷವಾಗಿದೆ. ದೇಶದ ಬೇರೆ ಯಾವದೇ ವಿಮಾನ ನಿಲ್ದಾಣದಲ್ಲಿ ಇಲ್ಲದಿರುವ ಸೌಲಭ್ಯ ಇದಾಗಿದೆ. ಪ್ರಯಾಣಿಕರು ನಿರ್ಗಮನದ ವೇಳೆ ಮೇಲಂತಸ್ತಿನ ಮೂಲಕ ತೆರಳಬೇಕಿದೆ. ಇದಕ್ಕಾಗಿ ಸುಸ್ಸಜ್ಜಿತ ಮೇಲ್ಸೆತುವೆಯನ್ನು ನಿರ್ಮಿಸಲಾಗಿದೆ. ಇದರ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆಗಮಿಸುವ ಪ್ರಯಾಣಿಕರು ಕೆಳ ಅಂತಸ್ತಿನ ಮೂಲ ಹೊರಬಂದು ನಿರ್ಗಮಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೇ ಪ್ರಯಾಣಿಕರಿಗೆ ವಿಮಾನವನ್ನು ನೇರವಾಗಿ ಏರಲು ಅನುಕೂಲವಾಗುವಂತೆ ಅತ್ಯಾಧುನಿಕ ಮೂರು ‘ಏರೋಬ್ರಿಡ್ಜ್’ ಗಳ ಸೌಲಭ್ಯ ಇಲ್ಲಿದೆ. ಟರ್ಮಿನಲ್ ಕಟ್ಟಡದ ಎದುರಿಗೆ 817*153 ಚ.ಮೀ. ವಿಸ್ತೀರ್ಣದ ಎಪ್ರೋನ್ ಏರಿಯಾ (ವಿಮಾನಗಳನ್ನು ನಿಲ್ಲಿಸುವ ಜಾಗ) ಇದೀಗ ಸಂಪೂರ್ಣವಾಗಿ ಸಿದ್ದಗೊಂಡಿದೆ. ಇಲ್ಲಿ 20 ಸಾಧಾರಣ ವಿಮಾನ ಅಥವಾ 14 ಬೃಹತ್ ವಿಮಾನಗಳನ್ನು ಏಕಕಾಲಕ್ಕೆ ನಿಲ್ಲಿಸಬಹುದಾಗಿದೆ.

ನಿಲ್ದಾಣದ ಮುಖ್ಯ ದ್ವಾರದಿಂದ ಟರ್ಮಿನಲ್‍ಗೆ ಸಂಪರ್ಕ ಕಲ್ಪಿಸುವ ಜೋಡಿ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಟರ್ಮಿನಲ್ ಮುಂಭಾಗದ ವಾಣಿಜ್ಯ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ. ವಾಹನ ನಿಲುಗಡೆಗಾಗಿ ವಿಶಾಲವಾದ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ವಿಮಾನ ನಿಲ್ದಾಣದ ಬಹುಮುಖ್ಯ ಭಾಗವಾಗಿರುವ ಏರ್ ಟ್ರಾಫಿಕ್ ಕಂಟ್ರೋಲರ್ (ಎ.ಟಿ.ಸಿ) ಕಟ್ಟಡ ಮುಕ್ತಾಯ ಹಂತದಲ್ಲಿದೆ. ನಿಲ್ದಾಣದ ಆವರಣದಲ್ಲೆ ಬಿ.ಪಿ.ಸಿ.ಎಲ್ ಅಧೀನದ ಬಿ.ಕೆ. ಎಫ್.ಎಫ್ ಪಿ.ಎಲ್ ಸಂಸ್ಥೆ ಒಟ್ಟು 9.90 ಲಕ್ಷ ಲೀಟರ್ ಸಾಮಥ್ರ್ಯದ 2 ಬೃಹತ್ ಇಂಧನ ಸಂಗ್ರಹ ಟ್ಯಾಂಕನ್ನು ನಿರ್ಮಿಸಿದ್ದು, ಇದರ ಕಾಮಗಾರಿ ಪೂರ್ಣಗೊಂಡಿದೆ. ಇದರಲ್ಲಿ ನೆಲಮಾಳಿಗೆಯ ಇಂಧನ ಸಂಗ್ರಹ ಟ್ಯಾಂಕ್ ಕೂಡ ಒಳಗೊಂಡಿದೆ. ವಿಮಾನಗಳಿಗೆ ಇಲ್ಲಿಂದಲೇ ಇಂಧನ ತುಂಬಿಸುವ ವ್ಯವಸ್ಥೆ ಇದೆ.

ಅತ್ಯಾಧುನಿಕ ಅಗ್ನಿಶಾಮಕ ವಾಹನ: ಕಣ್ಣನೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ಸುರಕ್ಷತಾ ದೃಷ್ಟಿಯಿಂದ ಅಗ್ನಿಶಾಮಕ ನಿಯಂತ್ರಣ ಕಟ್ಟಡವಿದೆ. ಈಗಾಗಲೆ ತಲಾ 5 ಕೋಟಿ ವೆಚ್ಚದ 4 ಅತ್ಯಾಧುನಿಕ ಅಗ್ನಿಶಾಮಕ ವಾಹನಗಳನ್ನು ಆಷ್ಟ್ರೀಯಾ ದೇಶದಿಂದ ಆಮದುಮಾಡಿಕೊಳ್ಳಲಾಗಿದ್ದು, ಇದೀಗ ಈ ವಾಹನ ವಿಮಾನ ನಿಲ್ದಾಣದಲ್ಲಿದೆ. ಏರ್‍ಪೀಲ್ಡ್ ಕ್ರಾಶ್ ಫಯರ್ ಟೆಂಡರ್ ತಂತ್ರಜ್ಞಾನದ ಈ ವಾಹನವು 12 ಸಾವಿರ ಲೀ. ನೀರನ್ನ ಸಂಗ್ರಹಿಸಿಡುವ ಸಾಮಥ್ರ್ಯವಿದೆ. ಜೊತೆಗೆ 1500 ಲೀ. ಫಾಮ್ ಮತ್ತು 250 ಲೀ. ಡಿ.ಸಿ.ಬಿ. ಫೌಡÀರ್ ಮಿಶ್ರಿತ ಅಗ್ನಿ ಶಾಮಕ ದ್ರವವನ್ನು ಅವಘಡ ಸಂಭವಿಸಿದರೆ ಏಕಕಾಲಕ್ಕೆ ಹೊರಚೆಲ್ಲಿ ನಿಯಂತ್ರಿಸುವ ಸೌಲಭ್ಯವಿದೆ. ವಿಮಾನ ನಿಲ್ದಾಣದ ಪಶ್ಚಿಮ ಮತ್ತು ಪೂರ್ವ ದಿಕ್ಕುಗಳಲ್ಲಿ ಎರಡು ಅಗ್ನಿಶಾಮಕ ಕೇಂದ್ರಗಳನ್ನು ಸ್ಥಾಪಿಸಿದ್ದು, ನಿಲ್ದಾಣದ ಯಾವದೇ ಭಾಗದಲ್ಲಿ ಅವಘಡ ಸಂಭವಿಸಿದರೆ, ಕೇವಲ 2 ನಿಮಿಷದಲ್ಲಿ ಸ್ಪಂದಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವ ವ್ಯವಸ್ಥೆಯನ್ನು ಇಲ್ಲಿ ವಿಶೇಷವಾಗಿ ರೂಪಿಸಲಾಗಿದೆ.

ದಾಖಲೆ ಬರೆಯಲಿರುವ ರನ್ ವೇ: ಈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತದ ರನ್ ವೆ 3050 ಮೀ. ಉದ್ದವಿದೆ. ಈ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ವಿಮಾನ ನಿಲ್ದಾಣ ಉದ್ಘಾಟನೆಯಾದ ಶೀಘ್ರದಲ್ಲೆ ರನ್ ವೇ ಯನ್ನು ವಿಸ್ತರಿಸುವ ಕಾರ್ಯ ಆರಂಭವಾಗಲಿದೆ. ಎರಡನೇ ಹಂತವಾಗಿ ಈ ರನ್ ವೇಯನ್ನು 3400 ಮೀ. ವಿಸ್ತರಿಸುವ ಗುರಿ ಹೊಂದಲಾಗಿದೆ. ಬಳಿಕ ಭವಿಷ್ಯದಲ್ಲಿ ರನ್ ವೇಯನ್ನು ಗರಿಷ್ಠ 4000 ಮೀ. ಉದ್ದದಲ್ಲಿ ಅಭಿವೃದ್ಧಿಪಡಿಸುವ ಯೋಜನೆಯಿದೆ. ಇದು ಕಾರ್ಯಗತವಾದಲ್ಲಿ ಭಾರತದಲ್ಲೆ ಅತೀ ಹೆಚ್ಚು ಉದ್ದದ ರನ್ ವೇ ಹೊಂದಿರುವ ಏಕೈಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಖ್ಯಾತಿಗೆ ಕಣ್ಣನೂರು ವಿಮಾನ ನಿಲ್ದಾಣ ಒಳಗಾಗಲಿದೆ ಎಂದು ಕೊಡಗಿನ ಮಾಧ್ಯಮ ಪ್ರತಿನಿಧಿಗಳಿಗೆ ಕಾಮಗಾರಿಯ ಸಮಗ್ರ ಪ್ರಗತಿಯನ್ನು ವಿವರಿಸಿದ ಕೆ.ಐ.ಎ.ಎಲ್.ನ ಸಹಾಯಕ ಯೋಜನಾ ಇಂಜಿನಿಯರ್ (ಸಿವಿಲ್) ನಿಕಿಲ್ ಸುರೇಂದ್ರನ್ ತಿಳಿಸಿದ್ದಾರೆ. ರನ್ ವೇ ಏರಿಯಾದಲ್ಲಿ ಅಗತ್ಯವಾಗಿರುವ ‘ರನ್ ವೇ ಎಂಡ್’ ಮತ್ತು ‘ಸೇಪ್ಟಿ ಏರಿಯಾ’ವನ್ನು ಸುರಕ್ಷೆಯ ದೃಷ್ಟಿಯಲ್ಲಿ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ ಎಂದು ನಿಕಿಲ್ ಸುರೇಂದ್ರನ್ ಮಾಹಿತಿ ನೀಡಿದರು.

ಹಿನ್ನೆಲೆ: 1997ರಲ್ಲಿ ಇ.ಕೆ ನಾಯನಾರ್ ಕೇರಳದ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅಂದಿನ ಕೇಂದ್ರ ವಿಮಾನಯಾನ ಸಚಿವ ಸಿ.ಎಂ.ಇಬ್ರಾಹಿಂ ಅವರ ಪ್ರಯತ್ನದಿಂದ ಕಣ್ಣನೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪರಿಕಲ್ಪನೆ ಮೂಡಿ ಕೇಂದ್ರ ಸರಕಾರದ ಮುಂದೆ ಪ್ರಸ್ತಾಪಗೊಂಡಿತು. ನಂತರ 2008ರಲ್ಲಿ ನಿಲ್ದಾಣದ ಮಂಜೂರಾತಿ ದೊರೆಯಿತು. ಇದಾದ ನಂತರ ಭೂ ಸ್ವಾದೀನ ಪ್ರಕ್ರಿಯೆ ಪೂರ್ಣಗೊಂಡು 2013ಕ್ಕೆ ವಿಮಾನ ನಿಲ್ದಾಣದ ಕಾಮಗಾರಿಯ ಗುತ್ತಿಗೆ ವಹಿಸಲಾಯಿತು. 2013ರ ನವೆಂಬರ್ 25ರಂದು ವಿಮಾನ ನಿಲ್ದಾಣ ಕಾಮಗಾರಿ ಅಧಿಕೃತವಾಗಿ ಆರಂಭಗೊಂಡಿತು.

ಚಿತ್ರ: ಎಸ್.ಎಲ್. ಶಿವಣ್ಣಚಿತ್ರ ಶೀರ್ಷಿಕೆ: