ಕುಶಾಲನಗರ, ಫೆ. 10: ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಯೋಜನಾಬದ್ಧವಾಗಿ ಯಾವದೇ ರೀತಿಯ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಎಸ್. ಅಶೋಕ್ ಆರೋಪಿಸಿದ್ದಾರೆ.

ಕುಶಾಲನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಅತೀ ಶೀಘ್ರದಲ್ಲಿ ಬೆಳವಣಿಗೆ ಕಾಣುತ್ತಿರುವ ಕುಶಾಲನಗರ ಮೂಲಭೂತ ಸೌಲಭ್ಯಗಳ ಕೊರತೆಯೊಂದಿಗೆ ಬಂಡವಾಳಶಾಹಿಗಳ ವ್ಯಾಪಾರ ವಹಿವಾಟು ಕೇಂದ್ರವಾಗಿ ಪರಿವರ್ತನೆ ಗೊಳ್ಳುತ್ತಿರುವದಾಗಿ ಆರೋಪಿಸಿದ್ದಾರೆ.

ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತ ಬಂದ ನಂತರ ಸರಕಾರದ ಅನುದಾನಗಳು ಸಮರ್ಪಕ ವಾಗಿ ಬಳಕೆಯಾಗುತ್ತಿಲ್ಲ. ಜನ ಪ್ರತಿನಿಧಿಗಳು ಸ್ವಾರ್ಥ ಸಾಧನೆಯಲ್ಲಿ ತೊಡಗುವದರೊಂದಿಗೆ ಅಧಿಕಾರವನ್ನು ತಮ್ಮ ಅಸ್ತಿತ್ವಕ್ಕೆ ಮಾತ್ರ ಸೀಮಿತ ಗೊಳಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಕುಶಾಲನಗರ ನಗರ ಯೋಜನಾ ಪ್ರಾಧಿಕಾರ ಕೂಡ ಇದುವರೆಗೆ ಯಾವದೇ ರೀತಿಯಲ್ಲಿ ನಿಯಮಾನುಸಾರ ಕೆಲಸ ನಿರ್ವಹಿಸಿಲ್ಲ ಎಂದು ತಿಳಿಸಿರುವ ಅಶೋಕ್, ಕಾನೂನು ಉಲ್ಲಂಘನೆ ಮಾಡಿ ಬೃಹತ್ ಕಟ್ಟಡಗಳು ತಲೆ ಎತ್ತುತ್ತಿವೆ. ಈ ಮೂಲಕ ನಗರದ ಮೂಲಭೂತ ಸೌಕರ್ಯಗಳು ಕುಸಿತಗೊಳ್ಳುತ್ತಿವೆ. ಕಟ್ಟಡ ನಿರ್ಮಾಣ ಸಂದರ್ಭ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸದಿರುವದು, ತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ವ್ಯವಸ್ಥೆ ಕಲ್ಪಿಸದಿರುವದು, ಸರಕಾರಿ ಜಾಗಗಳು ಖಾಸಗಿಯವರಿಗೆ ಪರಭಾರೆ ಯಾಗಿರುವದು, ಕಾವೇರಿ ನದಿ ತಟದಲ್ಲಿ ಕಾನೂನು ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣದೊಂದಿಗೆ ನೇರವಾಗಿ ತ್ಯಾಜ್ಯಗಳು ನದಿ ಸೇರುತ್ತಿರುವದು, ಕುಶಾಲನಗರ ಪಟ್ಟಣ ವ್ಯಾಪ್ತಿ ಸೇರಿದಂತೆ ಕುಡಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಮೀಸಲಾದ ಉದ್ಯಾನವನ, ರಸ್ತೆ ಜಾಗಗಳು ಅಕ್ರಮವಾಗಿ ಮಾರಾಟವಾಗಿರುವದು, ಜನಪ್ರತಿನಿಧಿಗಳೇ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿರುವದು ಇಂತಹ ಅನೇಕ ಕಾನೂನು ಉಲ್ಲಂಘನೆ ನಡೆದರೂ ಯಾವದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.

ಮಳೆಗಾಲದಲ್ಲಿ ಇಡೀ ಪಟ್ಟಣ ನೀರಿನಿಂದ ಆವೃತಗೊಳ್ಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ. ಬಡಾವಣೆಗಳು ನಿಯಮ ಉಲ್ಲಂಘನೆ ಯೊಂದಿಗೆ ಸರಕಾರದ ಆದಾಯಕ್ಕೆ ಕುತ್ತು ಉಂಟು ಮಾಡುವದು ಕೂಡ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ಕುಶಾಲನಗರ ಪಟ್ಟಣದಲ್ಲಿ ಅಧಿಕಾರಿಗಳು ವರ್ಗಾವಣೆ ಭೀತಿಯಲ್ಲೇ ಕೆಲಸ ನಿರ್ವಹಿಸಬೇಕಾದ ಪ್ರಮೇಯ ಉಂಟಾಗಿದ್ದು, ಬಹುತೇಕ ಜನಪ್ರತಿನಿಧಿಗಳಿಗೆ ಊರಿನ ಬಗ್ಗೆ ಕಾಳಜಿ ಇಲ್ಲದಿರುವದೇ ಇದಕ್ಕೆ ಎಲ್ಲಾ ಕಾರಣವಾಗಿದೆ. ಕುಶಾಲನಗರದಲ್ಲಿ ಬೇಲಿಯೇ ಎದ್ದು ಹೊಲ ಮೇಯು ವಂತಾಗಿದೆ ಎಂದು ತಿಳಿಸಿರುವ ಅಶೋಕ್ ಇದರಿಂದ ನಾಗರಿಕರು ಬವಣೆಗೆ ಒಳಗಾಗುವಂತಾಗಿದೆ. ಬಂಡವಾಳಶಾಹಿಗಳು ತಮಗೆ ಇಷ್ಟಬಂದಂತೆ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಭಾರೀ ಅಪಾಯ ಕಾದಿದೆ ಎಂದರು. ಕೆಲವು ಬಡಾವಣೆಗಳಲ್ಲಿ ಮಂದಿರ-ಮಸೀದಿಗಳು ನಿರ್ಮಾಣವಾಗಿದ್ದು, ಈ ಮೂಲಕ ಶಬ್ಧ ಮಾಲಿನ್ಯ ಉಂಟಾಗುತ್ತಿದೆ, ಇದರಿಂದ ನಾಗರಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಭಾರೀ ಶಬ್ಧದೊಂದಿಗೆ ಧ್ವನಿವರ್ಧಕ ಅಳವಡಿಸಿರುವ ಬಗ್ಗೆ ಹಲವು ಬಾರಿ ದೂರು ಸಲ್ಲಿಸಿದರೂ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿಗಳು ಗಮನಹರಿಸಿ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.